ಫ್ಯಾಕ್ಟ್‌ಚೆಕ್: ವಿಜಯ್ ಮಲ್ಯ ಜೊತೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಎಂದು ಎಐ ಚಿತ್ರ ಹಂಚಿಕೆ
ವಿಜಯ್ ಮಲ್ಯ ಜೊತೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಎಂದು ಎಐ ಚಿತ್ರ ಹಂಚಿಕೆ
ಭಾರತದಲ್ಲಿ ಪ್ರಕರಣಗಳನ್ನು ಎದುರಿಸುತ್ತಾ ದೇಶ ಬಿಟ್ಟು ಹೋಗಿರುವ ವ್ಯಕ್ತಿಗಳಲ್ಲಿ ವಿಜಯ್ ಮಲ್ಯ ಒಬ್ಬರು. ಚಾಣಾಕ್ಷ್ಯ ಉದ್ಯಮಿ, ಕ್ರೀಡಾ ಪ್ರೇಮಿ, ರಾಜಕೀಯದ ಅನುಭವಿ ಎಂದೆಲ್ಲಾ ವಿಧದಿಂದ ಗುರುತಿಸಲ್ಪಡುವ ವ್ಯಕ್ತಿತ್ವ ಅವರದ್ದು. ಕಿಂಗ್ಫಿಶರ್ ಏರ್ಲೈನ್ಸ್ ಬಂದ್ ಆದ ಬಳಿಕ ಮಲ್ಯಗೆ ಕೆಟ್ಟ ದೆಸೆ ಆರಂಭವಾಗಿತ್ತು. ಹಣಕಾಸು ಅವ್ಯವಹಾರ, ಸಾಲ ಮರುಪಾವತಿ ಮಾಡದೇ ಇರುವುದು ಸೇರಿದಂತೆ ಕೆಲ ಗುರುತರ ಆರೋಪಗಳು ಎದುರಾದವು. 2016ರಲ್ಲಿ ದೇಶ ಬಿಟ್ಟು ಹೋದವರು ಮತ್ತೆ ಬರಲಿಲ್ಲ. ಇತ್ತೀಚೆಗೆ, ಫಿಗರ್ ಔಟ್ ಎಂಬ ಪಾಡ್ ಕ್ಯಾಸ್ಟ್ ವಾಹಿನಿಯಲ್ಲಿ ಉದ್ಯಮಿ ವಿಜಯ್ ಮಲ್ಯ ಅವರು ನೀಡಿದ ಸಂದರ್ಶನ ಭಾರೀ ವೈರಲ್ ಆಗಿತ್ತು. ಫಿಗರಿಂಗ್ ಔಟ್ ವಿತ್ ರಾಜ್ ಶಮಾನಿ ಎಂಬ ಆ ಪಾಡ್ ಕ್ಯಾಸ್ಟ್ ನಲ್ಲಿ ಸಂದರ್ಶಕ ರಾಜ್ ಶಮಾನಿ ಅವರೊಂದಿಗೆ ಹಲವಾರು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದರು. ಜೂ. 2ರಿಂದ ಆನ್ ಲೈನ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ನಾಲ್ಕು ಗಂಟೆಗಳ ಕಾಲ ಇರುವ ಆ ವಿಡಿಯೋವನ್ನು ಕೇವಲ ಐದು ದಿನಗಳಲ್ಲಿ 2 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಸಾಲದ ಸುಳಿಗೆ ಸಿಲುಕಿ ದೇಶ ಬಿಟ್ಟು ತೊರೆದು ಹೋಗಿದ್ದ ವಿಜಯ್ ಮಲ್ಯ ಬರೋಬ್ಬರಿ 9 - 10 ವರ್ಷಗಳ ನಂತರ ಭಾರತೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವದು. ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ , ಈ ಬಾರಿ ಯೂಟ್ಯೂಬರ್ ರಾಜ್ ಶಮಾನಿ ಜೊತೆ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡು ಹಲವಾರು ಸಂವೇದನಾಶೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ . ಭಾರತದಿಂದ ಲಂಡನ್‌ಗೆ ತೆರಳುವ ಮೊದಲು ಅವರು ಆಗಿನ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಗೆ ಮಾಹಿತಿ ನೀಡಿದ್ದರು ಎಂಬುದು ಅಂತಹ ಒಂದು ಹೇಳಿಕೆಯಾಗಿದೆ. ಇದರ ನಂತರ, ಕಾಂಗ್ರೆಸ್ ಪಕ್ಷವು ಬಿಜೆಪಿಯ ಮೇಲೆ ದಾಳಿ ನಡೆಸಿದೆ, ಹಲವಾರು ಕಾಂಗ್ರೆಸ್ ನಾಯಕರು ಪಾಡ್‌ಕ್ಯಾಸ್ಟ್ ಅನ್ನು ಹಂಚಿಕೊಂಡು ಆಡಳಿತ ಪಕ್ಷವನ್ನು ಟೀಕಿಸಿದ್ದಾರೆ.
ಈ ನಡುವೆ, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ವಿಜಯ್ ಮಲ್ಯ ಜೊತೆ ಇರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಟುತ್ತಿದೆ. ಈ ಫೋಟೊವನ್ನು ಹಂಚಿಕೊಂಡಿರುವ ಹಲವರು, ಇದಕ್ಕೆ ವಿವಿಧ ಬರಹಗಳನ್ನು ಬರೆದುಕೊಳ್ಳುತ್ತಿದ್ದಾರೆ, ಸುಪ್ರಿಯಾ ಶ್ರೀನಾಟೆಗೆ ಮಲ್ಯರೊಂದಿಗೆ ಸಂಬಂಧವಿದೆ ಎಂದು ಕೀಳುಮಟ್ಟದ ಆರೋಪವನ್ನು ಕೂಡ ಹಲವರು ಮಾಡಿದ್ದಾರೆ. ಈ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷ ವಿವಿಧ ಟೀಕೆಗಳನ್ನು ಎದುರಿಸುವಂತೆ ಮಾಡಿದೆ.
ಜೂನ್ 08, 2025ರಂದು ಫೇಸ್‌ಬುಕ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼʼकोई तो कह रहा था कि ये मोदी से मिलकर भाग गया था..??? तगड़ी पसंद है माल लिया का... ये तो चमचों | की मौसी है. जय श्री कृष्ण।ʼʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಪೊಸ್ಟ್ ಮಾಡಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 6,2025ರಂದು ಎಕ್ಸ್ ಖಾತೆದಾರರೊಬ್ಬರು ʼये क्या मामला था??ʼ ಎಂವ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ವಿಜಯ್ ಮಲ್ಯ ಜೊತೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 06, 2025ರಂದು ಮತ್ತೊಬ್ಬ ಎಕ್ಸ್ ಖಾತೆದಾರ ʼभारत छोड़कर भागने वाले के साथ @SupriyaShrinate. बहुत रिलेक्स और कन्फेडटेबल दिख रही हैं मालिक के फंडिंग खाई है?ʼ ಎಂಬ ಶೀರ್ಷಿಕೆಯನ್ನೀಡಿ ಫೋಟೋವನ್ನು ಪೊಸ್ಟ್ ಮಾಡಿ ಸುಪ್ರಿಯಾ ಶ್ರೀನಾಟೆರವರನ್ನು ಟ್ಯಾಗ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತದಿಂದ ಪಲಾಯನ ಮಾಡಿದ ವ್ಯಕ್ತಿಯೊಂದಿಗೆ ಸುಪ್ರಯಾ ಶ್ರೀನಾಟೆ. ಈಕೆ ತುಂಬಾ ನಿರಾಳ ಮತ್ತು ವಿಶ್ವಾಸಾರ್ಹಳಾಗಿ ಕಾಣುತ್ತಾಳೆ. ಅವಳು ಮಾಲೀಕರ ನಿಧಿಯನ್ನು ತಿಂದಿದ್ದಾಳೆಯೇ? ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಈ ಫೋಟೋ ಈಗ ವಿವಿಧ ರೀತಿಯಾದ ಚರ್ಚೆಯನ್ನು ಹುಟ್ಟು ಹಾಕಿದ್ದು, ಕಾಂಗ್ರೆಸ್ ವಿಜಯ್ ಮಲ್ಯ ದೇಶ ಬಿಟ್ಟು ಹೋದರು ಆತನೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಹಲವರು ಹೇಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿ ಬೆಂಬಲಿತರು ವೈರಲ್ ಫೋಟೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಜಯ್ ಮಲ್ಯ ಮತ್ತು ಸುಪ್ರಿಯಾ ಶ್ರೀನೇಟ್ ಒಟ್ಟಿಗೆ ಕುಳಿತಿರುವ ಫೋಟೋವನ್ನು ಎಐ ಬಳಸಿ ರಚಿಸಲಾಗಿದೆ.
ನಾವು ವೈರಲ್ ಆದ ಪೊಸ್ಟ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀ ವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದವು. ಹುಡುಕಾಟದಲ್ಲಿ ನಮಗೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ. ನಂತರ ನಾವು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೆಳಗಿನ ಬಲ ಮೂಲೆಯಲ್ಲಿ "ಗ್ರೋಕ್" ವಾಟರ್‌ಮಾರ್ಕ್ ಇರುವುದನ್ನು ನಾವು ಕಂಡುಕೊಂಡೆವು.
ಇದನ್ನೇ ಸುಳಿವಾಗಿ ಪಡೆದುಕೊಂಡು ನಾವು ವೈರಲ್ ಫೋಟೋ ಎಐ ಮೂಲಕ ರಚಿಸಿರಬಹುದು ಎಂದು ಅನುಮಾನಿಸಿ, ನಾವು ಅದನ್ನು ಹೈವ್ ಮಾಡರೇಶನ್ ಎಐ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ,ವೈರಲ್ ಆದ ಮಲ್ಯ, ಸುಪ್ರಿಯಾ ಶ್ರೀನಾಟೆಯ ಚಿತ್ರವನ್ನು ಎಐ ಮೂಲಕ ರಚಿತವಾಗುವ ಸಾಧ್ಯತೆಯನ್ನು 99.9% ರಷ್ಟು ಹೊಂದಿದೆ ಎಂಬ ಫಲಿತಾಂಶವನ್ನು ನೀಡಿದೆ.
ನಾವು ವೈರಲ್ ಫೋಟೋವನ್ನು was it AI ಎಂಬ ಎಐ ಫೋಟೋಗಳನ್ನು ಪತ್ತೆ ಹಚ್ಚುವ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು ಎಐನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.
ಈ ವೈರಲ್ ಫೋಟೋ ಎಐನಿಂದ ರಚಿತವಾಗಿರಬಹುದು ಎಂಬ ಅನುಮಾನದಿಂದ, ಎಐ ಡಿಟೆಕ್ಟರ್ ಪರಿಕರವಾದ ಸೈಟ್ ಇಂಜೀನ್ ಪರಿಶೀಲಿಸಿದ್ದೇವೆ. ವೈರಲ್ ಫೋಟೋ ಎಐನಿಂದ ರಚಿತವಾಗಿದೆ ಎಂದು ದೃಢಪಡಿಸಿವೆ. ವೈರಲ್ ಆದ ಮಲ್ಯ, ಸುಪ್ರಿಯಾ ಶ್ರೀನಾಟೆಯ ಚಿತ್ರವನ್ನು ಎಐ ಮೂಲಕ ರಚಿತವಾಗುವ ಸಾಧ್ಯತೆಯನ್ನು ಶೇ.99% ರಷ್ಟು ಹೊಂದಿದೆ ಎಂಬ ಫಲಿತಾಂಶವನ್ನು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುಪ್ರಿಯಾ ಶ್ರೀನಾಟೆಯ ಚಿತ್ರ ಮತ್ತು ಎಐ ಮೂಲಕ ರಚಿಸಲಾಗಿರುವ ಚಿತ್ರದ ಹೋಲಿಕೆಯನ್ನು ನೀವಿಲ್ಲಿ ನೋಡಬಹುದು
ಇದರಿಂದ ಸಾಭೀತಾಗಿದ್ದೇನೆಂದರೆ, ಹೈವ್ ಮಾಡರೇಶನ್, ಸೈಟ್ ಇಂಜಿನ್, ವಾಸ್ ಇಟ್ ಎಐ, ನಂತಹ ವಿಶ್ವಾಸಾರ್ಹ ಎಐ ಡಿಟೆಕ್ಷನ್ ಟೂಲ್‌ಗಳು ಈ ಫೋಟೊ 99%ಕ್ಕಿಂತ ಹೆಚ್ಚು ಎಐ ನಿರ್ಮಿತ ಎಂದು ದೃಢೀಕರಿಸಿವೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.