ಫ್ಯಾಕ್ಟ್‌ಚೆಕ್: ಬಂಗೀ ಜಂಪ್ ಮಾಡುವಾಗ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಂಚಿಕೆ
ಬಂಗೀ ಜಂಪ್ ಮಾಡುವಾಗ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಂಗೀ ಜಂಪಿಂಗ್‌ಗೆ ಸಂಬಂಧಿಸಿದ ವಿಡಿಯೋವೊಂದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಬ್ರವರಿ 19, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಬಂಜಿ ಜಂಪಿಂಗ್ ವೇಳೆ ಪ್ರಾಣ ಬಿಟ್ಟ ಮಹಿಳೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫೆಬ್ರವರಿ 17, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAdventure Can Turn Fatal. Bungee jumping proved deadly for this young woman. During the jump, a bone in her neck broke, leading to instant death on the spot. In the race for extreme adventure and viral moments, people are increasingly risking and losing their lives. Thrill is temporary. Life is not. Think twice. Safety should never be optionalʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸಾಹಸ ಕ್ರೀಡೆಗಳು ಕೆಲವೊಮ್ಮೆ ತುಂಬಾ ಅಪಾಯಕಾರಿಯಾಗಿರುತ್ತದೆ. ಇತ್ತೀಚಿಗೆ ಯುವತಿಯೊಬ್ಬಳು ಬಂಗೀ ಜಂಪಿಗ್ ಮಾಡುವಾಗ ಆಕೆಯ ಕುತ್ತಿಗೆಯ ಎಲುಬು ಮುರಿದು ಆಕೆ ಸಾವನ್ನಪ್ಪಿದ್ದಾಳೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫೆಬ್ರವರಿ 18, 2026ರಂದು ಸಾಮ್‌ಟಿವಿ ಎಂಬ ವೆಬ್‌ಸೈಟ್‌ನಲ್ಲಿ ʼShocking: बंजी जम्पिंग करताना तरुणीचा दुर्दैवी मृत्यू, मानेचं हाड तुटलं नंतर...; थरारक VIDEO व्हायरलʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ಈ ವರದಿಯಲ್ಲಿ ʼಉತ್ತರಾಖಂಡದ ರಿಷಿಕೇಶ್‌ನಲ್ಲಿ ಬಂಜಿ ಜಂಪಿಂಗ್ ಮಾಡುವ ವೇಳೆ ಯುವತಿ ಒಬ್ಬಳು ದುರ್ಘಟನೆಯಲ್ಲಿ ಮೃತಪಟ್ಟಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಜನರು ಬಂಜಿ ಜಂಪಿಂಗ್‌ನ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸಿ ತಾಣವಾಗಿ ಪ್ರಸಿದ್ಧವಾದ ರಿಷಿಕೇಶ್‌ನಲ್ಲಿ ಸಾವಿರಾರು ಮಂದಿ ಪ್ರತಿ ವರ್ಷ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ಇಂತಹ ಅಪಘಾತಗಳ ಹಿನ್ನೆಲೆ, ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬ ಮನವಿ ಮಾಡಲಾಗಿದೆ.
ವೈರಲ್ ಆದ ವರದಿಯನ್ನು ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋದಲ್ಲಿರುವ ಹುಡುಗಿ ಫಿಜಾ ಖಾನ್, ನಾನು ಸಾವನ್ನಪ್ಪಿಲ್ಲ ಅಥವಾ ಕುತ್ತಿಗೆ ಮುರಿದಿಲ್ಲ ಎಂದು ಸ್ವತಃ ತಿಳಿಸಿದ್ದಾರೆ.
ನಾವು ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀವರ್ಡ್ ಮತ್ತು ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಹಲವು ಭಾಷೆಗಳಲ್ಲಿ ಇದೇ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗಿರುವುದನ್ನು ಕಂಡುಕೊಂಡೆವು. ಇನ್ನು ಇದರಲ್ಲಿ ಒಂದು ಪೋಸ್ಟ್ಗೆ ಪ್ರತಿಕ್ರಿಯಿಸಿದ ಅನೇಕ ಜನರು ಆ ಹುಡುಗಿ ಜೀವಂತವಾಗಿದ್ದಾಳೆ ಮತ್ತು ಅವಳ ಹೆಸರು ಫಿಜಾ ಖಾನ್ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.
ಫೆಬ್ರವರಿ 17, 2026ರಂದು ಫಿಜಾ ಖಾನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ʼThose who are spreading fake news, please don't spread such rumors. I'm totally fine. All these activities are conducted very safely, please park, there is no negligence in this... don't defame anyone for viewsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಯಾರಾದರೂ ಸುಳ್ಳು ಸುದ್ದಿಗಳನ್ನು ಹಂಚುತ್ತಿದ್ದರೆ ದಯವಿಟ್ಟು ಹಾಗೆ ಮಾಡಬೇಡಿ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಈ ಎಲ್ಲಾ ಚಟುವಟಿಕೆಗಳು ಸುರಕ್ಷಿತವಾಗಿಯೇ ನಡೆಸಲಾಗುತ್ತವೆ. ಪಾರ್ಕ್‌ನವರಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ. ವೀಕ್ಷಣೆಗಳು ಅಥವಾ ಲೈಕ್‌ಗಳಿಗಾಗಿ ಯಾರ ಹೆಸರೂ ಕೆಡಿಸಬೇಡಿʼ ಎಂದು ಬರೆದಿರುವುದನ್ನು ನೋಡಬಹುದು. ಈ ವಿಡಿಯೋವಿನಲ್ಲಿ ಫಿಜಾ ಖಾನ್ ʼಬಂಗೀ ಜಂಪ್ ಮಾಡುವಾಗ ನಾನು ನನ್ನ ಸ್ನೇಹಿತರಿಗೆ ತೋರಿಸಲು ಹೆದರುವಂತೆ ನಟಿಸುತ್ತಿದ್ದೆ. ಈ ಸಮಯದಲ್ಲಿ ನನಗೆ ತಲೆತಿರುಗುವಿಕೆ ಕೂಡ ಆಗಲಿಲ್ಲ, ಜನರು ನಾನು ಸತ್ತಿದ್ದೇನೆ ಎಂಬ ಸುದ್ದಿಯನ್ನು ಹರಡುತ್ತಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ" ಎಂದು ಹೇಳಿಕೆ ನೀಡಿರುವುದನ್ನು ನೋಡಬಹುದು
ಫೆಬ್ರವರಿ 19, 2026ರಂದು ಉದಯ್‌ಪುರ್ ಇನ್‌ಸ್ಟಾಗ್ರಾಮ್‌ನಲ್ಲಿ ʼಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಶಾಕಿಂಗ್ ವಿಡಿಯೋ ಹರಿದಾಡುತ್ತಿದೆ. ಅದು ಮೌಂಟ್ ಅಬುವಿನಲ್ಲಿ ಬಂಜಿ ಜಂಪಿಂಗ್ ವೇಳೆ ನಡೆದ ಭೀಕರ ಅಪಘಾತ ಎಂದು ಹೇಳಲಾಗಿದೆ. ಕೆಲವರು “ಜಂಪ್ ಮಾಡುವಾಗ ಭಾರೀ ಆಘಾತವಾಗಿ ಹುಡುಗಿಯ ಕುತ್ತಿಗೆ ಮುರಿದಿದೆ” ಎಂದು ಪೋಸ್ಟ್ ಮಾಡಿದ್ದು, ಸ್ಥಳದಲ್ಲಿ ಗದ್ದಲ ಉಂಟಾಯಿತು ಎಂಬ ರೀತಿಯಲ್ಲಿ ವೈರಲ್ ಮಾಡಿದ್ದಾರೆ. ಆದರೆ ಉದಯಪುರದ ಫಿಜಾ ಖಾನ್ ಈ ಎಲ್ಲ ಮಾತುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ, “ನನ್ನ ಕುತ್ತಿಗೆ ಮುರಿದಿಲ್ಲ, ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಜಂಪ್ ಮಾಡುವಾಗ ಕ್ಷಣಕಾಲ ಸಮತೋಲನ ಕಳೆದುಕೊಂಡಿದ್ದರಿಂದ ಪರಿಸ್ಥಿತಿ ಗಂಭೀರವಾಗಿರುವಂತೆ ಕಂಡಿತ್ತು, ಆದರೆ ಅಷ್ಟೇ ಹೊರತು ಯಾವುದೇ ದೊಡ್ಡ ಅಪಘಾತವಾಗಿಲ್ಲ ಎಂದಿದ್ದಾರೆ. ಕೆಲವರು ಹೆಚ್ಚು ವೀಕ್ಷಣೆ ಮತ್ತು ಲೈಕ್‌ಗಳಿಗಾಗಿ ಸುಳ್ಳು ಸುದ್ದಿಯನ್ನು ಹರಡಿದ್ದಾರೆ ಎಂದು ಫಿಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋಗೆ ಹಾಕಿದ ಅತಿರಂಜಿತ ಶೀರ್ಷಿಕೆಗಳಿಂದ ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿಜ ತಿಳಿಯದೆ ಇಂತಹ ಸುದ್ದಿಗಳನ್ನು ಹಂಚಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ಫಿಜಾ ಖಾನ್ ವಿಡಿಯೋದೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ಬಂಗಿ ಜಂಪ್ ಮಾಡುವಾಗ ಯುವತಿ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋದಲ್ಲಿ ಕಾಣುತ್ತಿರುವ ಯುವತಿ ಫಿಜಾ ಖಾನ್ ಸ್ವತಃ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ