ಫ್ಯಾಕ್ಟ್‌ಚೆಕ್‌: ಸರ್ವ ಶಿಕ್ಷಾ ಅಭಿಯಾನ 2025ರ ಅಡಿಯಲ್ಲಿ ಶಿಕ್ಷಣಾ ಸಚಿವಾಲಯವು ಯಾವುದೇ ನೇಮಕಾತಿ ಮಾಡುತ್ತಿಲ್ಲ

ಸರ್ವ ಶಿಕ್ಷಾ ಅಭಿಯಾನ 2025ರ ಅಡಿಯಲ್ಲಿ ಶಿಕ್ಷಣಾ ಸಚಿವಾಲಯವು ಯಾವುದೇ ನೇಮಕಾತಿ ಮಾಡುತ್ತಿಲ್ಲ

Update: 2025-02-15 05:41 GMT

ಶಿಕ್ಷಣವು ಯಾವುದೇ ವಿದ್ಯಾವಂತ ಮತ್ತು ಸ್ವಾವಲಂಬಿ ಸಮಾಜದ ಅಡಿಪಾಯವಾಗಿದೆ. ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ದೇಶಾದ್ಯಂತ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಈ ಅಭಿಯಾನದ ಮೂಲ ಉದ್ದೇಶ. ಈ ಅಭಿಯಾನದಡಿಯಲ್ಲಿ, ಶಾಲೆಗಳಿಲ್ಲದ ಸ್ಥಳಗಳಲ್ಲಿ ಹೊಸ ಶಾಲೆಗಳನ್ನು ತೆರೆಯುವುದು, ಅಥವಾ ಅಸ್ತಿತ್ವದಲ್ಲಿರುವ ಶಾಲೆಗಳ ಸೌಲಭ್ಯಗಳನ್ನು ಸುಧಾರಿಸುವುದು ಇದರ ಉದ್ದೇಶ. ಶಿಕ್ಷಣವಿಲ್ಲದೆ ಪ್ರಗತಿ ಸಾಧ್ಯವಿಲ್ಲ. ಹೀಗಾಗಿ ಭಾರತದಲ್ಲಿ ಶಿಕ್ಷಣವನ್ನು ವಿಸ್ತರಿಸಲು ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆ ಮಾಡಲು ಕೇಂದ್ರ ಸರಕಾರ ಇದನ್ನು ಪ್ರಾರಂಭಿಸಿದೆ. ಇದು ಕೇಂದ್ರದ ಯೋಜನೆಯಾಗಿದ್ದರೂ ಆಯಾ ರಾಜ್ಯಗಳ ಸಹಯೋಗದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸರ್ವ ಶಿಕ್ಷಣ ಅಭಿಯಾನಕ್ಕೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಭಾರತ ಸರ್ಕಾರವು 2025 ರ ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ, ಎಲ್ಲರಿಗೂ ಪ್ರವೇಶಿಸಬಹುದಾದ ಮತ್ತು ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಹಾಗೂ ಶಿಕ್ಷಣ ವಲಯದಲ್ಲಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ಘೋಷಿಸಲಾಗಿದೆ ಎಂಬ ಶೀರ್ಷಿಕೆಯನ್ನೀಡಿ ಸಾಕಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಫೆಬ್ರವರಿ 09, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು, ʼभारत सरकार के सर्व शिक्षा अभियान (Sarva Shiksha Abhiyan) के तहत 2025 में बड़े पैमाने पर भर्तियां होने जा रही हैं। यह भर्ती उन युवाओं के लिए एक शानदार अवसर है जो शिक्षा के क्षेत्र में करियर बनाना चाहते हैं। इस अभियान का मुख्य उद्देश्य प्राथमिक शिक्षा को सभी के लिए सुलभ और गुणवत्तापूर्ण बनाना है।ʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತ ಸರ್ಕಾರದ ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ, 2025 ರಲ್ಲಿ ದೊಡ್ಡ ಪ್ರಮಾಣದ ನೇಮಕಾತಿಗಳು ನಡೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕರಿಗೆ ಈ ನೇಮಕಾತಿ ಒಂದು ಉತ್ತಮ ಅವಕಾಶ. ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ಪ್ರಾಥಮಿಕ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಮತ್ತು ಉತ್ತಮ ಗುಣಮಟ್ಟದ್ದಾಗಿಸುವುದು.ʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಫೆಬ್ರವರಿ 09, 2025ರಂದು ʼಸಿ ಸ್ಕ್ವೇರ್ ಅಚೀವ್‌ಮೆಂಟ್ ಅಕಾಡೆಮಿʼ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಇದೇ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸರ್ವ ಶಿಕ್ಷಾ ಅಭಿಯಾನದ ಭಾಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಬೃಹತ್‌ ನೇಮಕಾತಿಯನ್ನು ಮಾಡುತ್ತಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ನಂತರ ಸತ್ಯಾಂಶವನ್ನು ಹುಡುಕಲು ನಾವು ಸರ್ವ ಶಿಕ್ಷಣ ಅಭಿಯಾನ ಅಧಿಕೃತ ವೆಬ್‌ಸೈಟ್‌ನ್ನು ಪರಿಶೀಲಿಸಿದೆವು. ನಮಗೆ ವೈರಲ್‌ ಸುದ್ದಿಯಲ್ಲಿ ಹೇಳಿರುವ ಹಾಗೆ 2025ರಲ್ಲಿ ಯಾವುದೇ ನೇಮಕಾತಿ ಅಧಿಸೂಚನೆಯನ್ನು ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ಘೋಷಿಸಿಲ್ಲ ಎಂದು ಸಾಭೀತಾಯಿತು.


ನಮಗೆ, ಮಾರ್ಚ್‌ 07,2022ರಂದು ಶಿಕ್ಷಣ ಸಚಿವಾಲಯದ ಪತ್ರಿಕಾ ಪ್ರಕಟಣೆಯೂ ಸಿಕ್ಕಿದೆ. ಅಮಾಯಕ ಅರ್ಜಿದಾರರನ್ನು ವಂಚಿಸುವ ಸಲುವಾಗಿ ಈ ಇಲಾ ಖೆಯ ಯೋಜನೆಗಳಿಗೆ ಹೋಲುವ ಹೆಸರುಗಳಲ್ಲಿ (www.sarvashiksha.online, https://samagra.shikshaabhiyan.co.in, https://shikshaabhiyan.org.in ನಂತಹ) ಹಲವಾರು ವೆಬ್‌ಸೈಟ್‌ಗಳನ್ನು ರಚಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಬರೆಯಲಾಗಿದೆ. ಈ ವೆಬ್‌ಸೈಟ್‌ಗಳು ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನಿಡುತ್ತದೆ ಎಂದು ಮಾಹಿತಿಯನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಮೂಲ ವೆಬ್‌ಸೈಟ್‌ನಂತೆಯೇ ವೆಬ್‌ಸೈಟ್‌ನ ವಿನ್ಯಾಸ, ವಿಷಯ ಮತ್ತು ಪ್ರಸ್ತುತಿಯ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ದಾರಿ ತಪ್ಪಿಸಿ, ಅರ್ಜಿ ಸಲ್ಲಿಸಲು ಪ್ರತಿಕ್ರಿಯಿಸುವವರಿಂದ ಹಣದ ಬೇಡಿಕೆಯನ್ನು ಇಡುತ್ತಿವೆ ಎಂದು ಹೇಳಲಾಗಿದೆ.

ವೆಬ್‌ಸೈಟ್‌ಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಬಂದಿದ್ದರೂ, ಉದ್ಯೋಗದ ಭರವಸೆ ನೀಡುವ ಮತ್ತು ನೇಮಕಾತಿ ಪ್ರಕ್ರಿಯೆಗೆ ಹಣ ಕೇಳುವ ಇಂತಹ ವೆಬ್‌ಸೈಟ್‌ಗಳು/ಸಾಮಾಜಿಕ ಮಾಧ್ಯಮ ಖಾತೆಗಳು ಇನ್ನೂ ಹೆಚ್ಚಿರಬಹುದು. ಸಾರ್ವಜನಿಕರು ಅಂತಹ ವೆಬ್‌ಸೈಟ್‌ಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಬೇಕು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ/ವೈಯಕ್ತಿಕ ವಿಚಾರಣೆ/ದೂರವಾಣಿ ಕರೆ/ಇ-ಮೇಲ್ ಮಾಡುವ ಮೂಲಕ ವೆಬ್‌ಸೈಟ್‌ಗಳ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬರೆದುಕೊಂಡಿದೆ

sarvashikshaabhiyan.com ಡೊಮೇನ್‌ನಿಂದ ಚಾಲನೆಯಲ್ಲಿರುವ ವೆಬ್‌ಸೈಟ್‌ನ್ನು ನಾವು ʼಡೋಮೈನ್‌ ಟೂಲ್‌ʼ ವೆಬ್‌ಸೈಟ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಈ ವೆಬ್‌ಸೈಟ್‌ನ್ನು ಜುಲೈ 25, 2024 ರಂದು ನೋಂದಾಯಿಸಲ್ಪಟ್ಟಿದೆ ಎಂದು ಸಾಭೀತಾಯಿತು. ಈ ವೆಬ್‌ಸೈಟ್ ಉದ್ಯೋಗ ಜಾಹೀರಾತುಗಳ ಮೂಲಕ ಜನರನ್ನು ವಂಚಿಸುತ್ತಿದೆ ಮತ್ತು ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಭಾರತ ಸರ್ಕಾರದ ಅಧಿಕೃತ ರಾಷ್ಟ್ರೀಯ ಪೋರ್ಟಲ್ india.gov.in ನಲ್ಲಿ ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದೆವು. samagra.education.gov.in ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಎಂದು ನಮಗೆ ತಿಳಿದುಬಂದಿತು. ಈ ವೆಬ್‌ಸೈಟ್‌ನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ಗೂಗಲ್‌ನಲ್ಲಿ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಫೆಬ್ರವರಿ 08,2025ರಂದು ʼಪಿಐಬಿ ಫ್ಯಾಕ್ಟ್‌ಚೆಕ್‌ʼ ತಂಡ ಹಂಚಿಕೊಂಡಿದ್ದ ಪೋಸ್ಟ್‌ವೊಂದು ಕಂಡುಬಂದಿತು. ಇದರಲ್ಲಿ ವೈರಲ್ ಆಗಿರುವ ಉದ್ಯೋಗ ನೇಮಕಾತಿ ಅಧಿಸೂಚನೆ ಮತ್ತು ವೆಬ್‌ಸೈಟ್ ನಕಲಿ ಎಂದು ಉಲ್ಲೇಖಿಸಿರುವುದು ನೋಡಬಹುದು. ಇದರಲ್ಲಿ ವೈರಲ್‌ ಪೋಸ್ಟ್‌ನಲ್ಲಿರುವ ವೆಬ್‌ಸೈಟ್‌ ಲಿಂಕ್‌ಗೂ ಭಾರತ ಸರ್ಕಾರಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದನ್ನು ಕೂಡ ಖಚಿತ ಪಡಿಸಲಾಗಿದೆ.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಶಿಕ್ಷಣ ಸಚಿವಾಲಯವು ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ 2025 ಕ್ಕೆ ಯಾವುದೇ ದೊಡ್ಡ ಪ್ರಮಾಣದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿಲ್ಲ. ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಲಿಂಕ್‌ ನಕಲಿಯಾಗಿದೆ. ಈ ಕಾರಣದಿಂದಾಗಿ ವೈರಲ್‌ ಪೋಸ್ಟ್‌ನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ

Claim :  ಸರ್ವ ಶಿಕ್ಷಾ ಅಭಿಯಾನ 2025ರ ಅಡಿಯಲ್ಲಿ ಶಿಕ್ಷಣಾ ಸಚಿವಾಲಯವು ಯಾವುದೇ ನೇಮಕಾತಿ ಮಾಡುತ್ತಿಲ್ಲ
Claimed By :  Social Media Users
Fact Check :  Unknown
Tags:    

Similar News