ಫ್ಯಾಕ್ಟ್‌ಚೆಕ್‌: ಬೆಂಗಳೂರಿನಲ್ಲಿ ಮಳೆಗೆ ಬಸ್‌ನೊಳಗೆ ನೀರು ನುಗ್ಗಿದೆ ಎಂದು ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ

ಬೆಂಗಳೂರಿನಲ್ಲಿ ಮಳೆಗೆ ಬಸ್‌ನೊಳಗೆ ನೀರು ನುಗ್ಗಿದೆ ಎಂದು ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ

Update: 2025-06-02 02:30 GMT

ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿಗೆ ವರುಣ ಕೃಪೆ ತೋರಿದ್ದಾನೆ. ಆದರೆ, ಬೇಸಿಗೆಯಲ್ಲಿ ಬಂದ ಈ ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಎಲ್ಲಾವಲಯಗಳಲ್ಲಿ ಮಳೆ ಆವರಿಸಿದ್ದರಿಂದ ಟ್ರಾಫಿಕ್ ಜಾಮ್, ತಗ್ಗುಪ್ರದೇಶಗಳಿಗೆ ನೀರು ನುಗ್ಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಮುಂಗಾರು ಅಥವಾ ನೈಋತ್ಯ ಮಾನ್ಸೂನ್ ಮೇ 24 ರಂದು ಕೇರಳಕ್ಕೆ ನಿಗದಿತ ಸಮಯಕ್ಕಿಂತ ಎಂಟು ದಿನ ಮುಂಚಿತವಾಗಿ ಆಗಮಿಸಿದೆ. ಇದಕ್ಕೆ ಬಹುಮುಖ್ಯವಾದ ಕಾರಣ ಈಗಾಗಲೇ ಎದ್ದಿರುವ ಚಂಡಮಾರುತ ಮುಂಗಾರು ಮಾರುತವನ್ನು ಚುರುಕುಗೊಳಿಸಿದೆ. 2009 ರ ಬಳಿಕ ಇದೇ ಮೊದಲ ಬಾರಿಗೆ 8 ದಿನ ಮೊದಲೇ ಕೇರಳ, ಕರ್ನಾಟಕ, ತಮಿಳುನಾಡು ಕರಾವಳಿಗೆ ಮುಂಗಾರು ಪ್ರವೇಶ ಆಗಿದೆ. ಭಾರೀ ಮಳೆಯಿಂದಾಗಿ ಕೇರಳ ಹಾಗೂ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಎಚ್ಚರಿಕೆಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ಜೂನ್ 1 ರಂದು ಮಳೆಗಾಲ ಆರಂಭ ಆಗುತ್ತದೆ. ವಾಡಿಕೆಯ ಪ್ರಾರಂಭ ದಿನಾಂಕಕ್ಕಿಂತ ಎಂಟು ದಿನ ಮುಂಚಿತವಾಗಿ, ಶನಿವಾರ ಮೇ 24 ರಂದೇ ಮುಂಗಾರು ಕೇರಳಕ್ಕೆ ಆಗಮಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರ ನಡುವೆ ಬೆಂಗಳೂರಿನಲ್ಲೂ ಭೀಕರವಾದ ಮಳೆ ಸುರಿಯುತ್ತಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬಸ್ ಒಳಗೆ ನೀರು ನುಗ್ಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಬಿಎಂಟಿಸಿ ಬಸ್ ಒಂದರೊಳಗೆ ನೀರು ನುಗ್ಗುತ್ತಿರುವುದು ಕಂಡುಬಂದಿದ್ದು, ಇದನ್ನು ನೋಡಿದ ಸಾರ್ವಜನಿಕರು ರಾಜ್ಯ ಸರ್ಕಾರಕ್ಕೆ ಛೀಮಾರಿಯನ್ನು ಹಾಕುತ್ತಿದ್ದಾರೆ. ಇನ್ನೂ ಹಲವರು, ಇತ್ತೀಚಿನ ಮಳೆಗೆ ಬಹುತೇಕ ಬಸ್‌ಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬರೆದುಕೊಳ್ಳುತ್ತಿದ್ದಾರೆ.

ಮೇ 20, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಬ್ರಾಂಡ್‌ ಬೆಂಗಳೂರು ಬ್ಯಾಡ್‌ ಬೆಂಗಳೂರು ಆಗಿದೆ. ಬಸ್ಸಿನ ಒಳಗೆ ನುಗ್ಗಿದ ಮಳೆ ನೀರುʼ ಎಂಬ ಕ್ಯಾಪ್ಷನ್‌ನೊಂದಿಗೆ ಉಚಿತ ಬಸ್‌ ಉಚಿತ ನೀರು ಎಂಬ ಕ್ಯಾಪ್ಷನ್‌ನೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು. (ಆರ್ಕೈವ್‌)


ಬ್ಲೂಮ್‌ ಟಿವಿ ಕನ್ನಡ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ʼಮಹಾಮಳೆಗೆ ಬಸ್ ಒಳಗೆ ನುಗ್ಗಿದ ಮಳೆ ನೀರು....ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮೇ 20, 2025ರಂದು ಯೂಟ್ಯೂಬ್‌ ಖಾತೆಯಲ್ಲಿ ʼBangalore Rain today BMTC bus filled with Water #bangalorerains #rain #raintodayʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. (ಆರ್ಕೈವ್‌)


ಮೇ 20, 2025ರಂದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʼಬ್ರಾಂಡ್‌ಬೆಂಗಳೂರು ಬ್ಯಾಡ್‌ ಬೆಂಗಳೂರು ಆಗಿದೆ. ಬಸ್ಸಿನ ಒಳಗೆ ನುಗ್ಗಿದ ಮಳೆ ನೀರುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. (ಆರ್ಕೈವ್‌)

ಮತ್ತೊಂದು ವಿಡಿಯೋವನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್ ‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಒಂದರೊಳಗೆ ನೀರು ನುಗ್ಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ 2024ರದ್ದು.

ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಅಕ್ಟೋಬರ್ 23, 2024 ರಂದು ʼನಮ್ಮ ಹೊಸೂರು ಅಫಿಶಿಯಲ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ʼRain water thunders into ಬಿಎಂಟಿಸಿ #KarnatakaRains #BengaluruRains #BangaloreRains #Bangalore  ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.  ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಿಎಂಟಿಸಿ ಬಸ್‌ ಒಳಗೆ ನೀರು ನುಗ್ಗಿದೆʼ ಎಂದು ವೈರಲ್ ಆದ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಇದರಲ್ಲಿ ಸಾಭೀತಾಗಿದ್ದೇನೆಂದರೆ, ವೈರಲ್ ವಿಡಿಯೋ 2024 ರದ್ದು ಮತ್ತು ಹಳೆಯದ್ದು ಎಂಬುದು ಖಚಿತವಾಗಿದೆ.

ಮತ್ತಷ್ಟು ಹುಡುಕಾಟ ನಡೆಸಿದಾಗ ನಮಗೆ ಅಕ್ಟೋಬರ್ 23, 2024ರಂದು ಎಕ್ಸ್ ಖಾತೆದಾರರೊಬ್ಬರು ʼRain water thunders into BMTCʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಿಎಂಟಿಸಿ ಬಸ್‌ ಒಳಗೆ ನೀರು ನುಗ್ಗಿದೆʼ ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಇದರಿಂದ ತಿಳಿಯುವುದೇನೆಂದರೆ, ಈ ಪೋಸ್ಟ್ ಕೂಡ ವೈರಲ್ ವಿಡಿಯೋ 2024 ರದ್ದು ಎಂದು ಖಚಿತಪಡಿಸಿದ್ದು, ಇತ್ತೀಚಿನ ಮಳೆಯಲ್ಲಿನ ಘಟನೆಗೆ ಸಂಬಂಧಿಸಿದಲ್ಲ ಎಂಬುದು ಸ್ಪಷ್ಟವಾಗಿದೆ.

ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಹಾಗೆ ಇತ್ತೀಚಿನ ಮುಂಗಾರು ಪೂರ್ವ ಮಳೆಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಒಂದರೊಳಗೆ ನೀರು ನುಗ್ಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ 2024ರದ್ದು. ಈ ವಿಡಿಯೋ ಇತ್ತೀಚಿನ ಮಳೆಯ ಪ್ರಕರಣಗಳಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ.  ಇದು ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಂದು ನಿಖರವಾದ ಮಾಹಿತಿ ಪಡೆಯಲು ನಮ್ಮಿಂದ ಸಾಧ್ಯವಾಗಲಿಲ್ಲ. ಆದರೆ, ವೈರಲ್ ಆಗುತ್ತಿರುವ ವೀಡಿಯೊ ಈಗಿನದ್ದಲ್ಲ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim :  ಬೆಂಗಳೂರಿನಲ್ಲಿ ಮಳೆಗೆ ಬಸ್‌ನೊಳಗೆ ನೀರು ನುಗ್ಗಿದೆ ಎಂದು ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ
Claimed By :  Social Media Users
Fact Check :  Unknown
Tags:    

Similar News