ಫ್ಯಾಕ್ಟ್‌ಚೆಕ್: ಫೆಬ್ರವರಿ 14ರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವಿಡಿಯೋವನ್ನು, ಇಶ್ ಸೋಧಿ ಭಾರತ ರಾಷ್ಟ್ರಗೀತೆ ಕೇಳಿ ಭಾವುಕರಾದರು ಎಂದು ಹಂಚಿಕೆ
ಫೆಬ್ರವರಿ 14ರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವಿಡಿಯೋವನ್ನು, ಇಶ್ ಸೋಧಿ ಭಾರತ ರಾಷ್ಟ್ರಗೀತೆ ಕೇಳಿ ಭಾವುಕರಾದರು ಎಂದು ಹಂಚಿಕೆ
ಮಾರ್ಚ್ 8ರಂದು ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯ ಆರಂಭದಿಂದ ವಿಜಯೋತ್ಸವದವರೆಗೆ ಹಲವಾರು ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ನಡುವೆ, ಒಂದು ಭಾವುಕ ಕ್ಷಣ ಎಲ್ಲರ ಗಮನ ಸೆಳೆದಿದೆ. ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸಮಯದಲ್ಲಿ ಎರಡೂ ತಂಡಗಳು ಸಾಲಾಗಿ ನಿಂತಿದ್ದಾಗ, ಭಾರತದ ರಾಷ್ಟ್ರಗೀತೆ ನುಡಿಸಲಾಯಿತು. ಆ ವೇಳೆ ನ್ಯೂಜಿಲೆಂಡ್ ಆಟಗಾರ ಇಶ್ ಸೋಧಿ ಭಾವುಕರಾಗಿ ಕಣ್ಣೀರು ಹಾಕಿದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೋಧಿಯ ನಡೆಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಎಲ್ಲೆ ಹೋದರೂ, ಎಷ್ಟು ದೊಡ್ಡವರಾದರೂ ತಮ್ಮ ಮೂಲವನ್ನು ಮರೆಯಬಾರದು” ಎನ್ನುವ ಮಾತಿನಂತೆ, ಸೋಧಿ ತಮ್ಮ ದೇಶದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಮಾರ್ಚ್ 10, 2026ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಭಾರತದ ರಾಷ್ಟ್ರಗೀತೆ ಕೇಳುತ್ತಿದ್ದಂತೆ ನ್ಯೂಜಿಲ್ಯಾಂಡ್ ಕ್ರಿಕೆಟಿಗ ಅವರು ಭಾವುಕರಾಗಿ ಕಣ್ಣೀರು ಹಾಕಿದ ಕ್ಷಣʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿ ʼಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆಲುವಿನ ಸಂಭ್ರಮದ ನಡುವೆ ಭಾವನಾತ್ಮಕ ಕ್ಷಣವೊಂದು ವೈರಲ್ ಆಯಿತು. ಭಾರತದ ರಾಷ್ಟ್ರಗೀತೆ ಕೇಳುತ್ತಿದ್ದಂತೆ ನ್ಯೂಜಿಲೆಂಡ್ ಕ್ರಿಕೆಟಿಗ ಇಶ್ ಸೋಧಿ ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯ ಗಮನ ಸೆಳೆಯಿತುʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮಾರ್ಚ್ 09, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAn emotional moment unfolded on the field as , the Indian-origin spinner for the , appeared visibly emotional while playing against the. Born in India before moving to New Zealand, Sodhi has often spoken about his deep connection to both countries. The moment during the match resonated with fans, highlighting how sport can carry powerful personal emotions, especially when a player faces the country of their roots. The clip quickly went viral online, with many viewers appreciating the heartfelt moment that showed the human side of international cricketʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮೈದಾನದಲ್ಲಿ ಒಂದು ಭಾವುಕ ಕ್ಷಣ ಕಂಡುಬಂದಿತು. ನ್ಯೂಜಿಲ್ಯಾಂಡ್ ತಂಡದ ಭಾರತೀಯ ಮೂಲದ ಸ್ಪಿನ್ನರ್ ಇಶ್ ಸೋಧಿ, ಭಾರತ ವಿರುದ್ಧ ಆಡುತ್ತಿರುವಾಗ ತುಂಬಾ ಭಾವುಕರಾಗಿ ಕಾಣಿಸಿಕೊಂಡರು. ಭಾರತದಲ್ಲಿ ಹುಟ್ಟಿ ನಂತರ ನ್ಯೂಜಿಲ್ಯಾಂಡ್‌ಗೆ ತೆರಳಿದ ಸೋಧಿ, ಎರಡು ದೇಶಗಳ ಮೇಲಿನ ತನ್ನ ಭಾವನಾತ್ಮಕ ಸಂಬಂಧವನ್ನು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಕಂಡ ಈ ಕ್ಷಣ ಅಭಿಮಾನಿಗಳ ಮನಸಿಗೆ ತಟ್ಟಿತು. ಆಟಗಾರರು ತಮ್ಮ ಮೂಲ ದೇಶದ ವಿರುದ್ಧ ಆಡಿದಾಗ ಎಷ್ಟು ಭಾವನೆಗಳು ಸೇರಿಕೊಂಡಿರುತ್ತವೆ ಎಂಬುದನ್ನು ಇದು ತೋರಿಸಿತು. ಈ ವಿಡಿಯೋ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಹಲವರು ಈ ಕ್ಷಣವನ್ನು ಮೆಚ್ಚಿ, ಕ್ರಿಕೆಟ್‌ನಲ್ಲೂ ಮಾನವೀಯ ಭಾವನೆಗಳು ಎಷ್ಟು ಮುಖ್ಯವೆಂದು ಹೇಳಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಫೋಟೋ ಫೆಬ್ರವರಿ 14ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದ್ದು. ವಾಸ್ತವವಾಗಿ ನ್ಯೂಜಿಲೆಂಡ್ ರಾಷ್ಟ್ರಗೀತೆ ಕೇಳಿ ಇಶ್ ಸೋಧಿ ಕಣ್ಣೀರಾಕಿದ್ದು. ಈ ಫೋಟೋ 2026ರ ಟಿ20 ವಿಶ್ವಕಪ್ ಫೈನಲ್‌ನದ್ದಲ್ಲ.
ನಾವು ವೈರಲ್ ಆದ ಫೊಟೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫೆಬ್ರವರಿ 14, 15ರಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಸಮಯದಲ್ಲಿ ಇಶ್ ಸೋಧಿ ಭಾವುಕರಾದರು ಎಂಬುವುದನ್ನು ನಾವು ಕೆಲವು ಪೊಸ್ಟ್‌ಗಳ ಮೂಲಕ ಕಂಡುಕೊಂಡೆವು.
ಇದನ್ನೇ ಸುಳಿವಾಗಿ ತೆಗೆದುಕೊಂಡು ನಾವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 14ರಂದು ನಡೆದ ನ್ಯೂಜಿಲೆಂಡ್–ದಕ್ಷಿಣ ಆಫ್ರಿಕಾ ಪಂದ್ಯದ ರಿಪ್ಲೇವನ್ನು ನಾವು ಪರಿಶೀಲಿಸಿದೆವು. ಫೆಬ್ರವರಿ 14, 2026ರಂದು ಅಪ್‌ಲೋಡ್ ಮಾಡಿರುವ ಆ ವೀಡಿಯೊದಲ್ಲಿ 8 ನಿಮಿಷ 09 ಸೆಕೆಂಡ್‌ಗೆ ನ್ಯೂಜಿಲೆಂಡ್ ರಾಷ್ಟ್ರಗೀತೆ ನುಡಿಸುವ ವೇಳೆ ಇಶ್ ಸೋಧಿ ಕಣ್ಣೀರು ಹಾಕುತ್ತಿರುವುದು ನೋಡಬಹುದು. ವೈರಲ್ ಆಗಿರುವ ಫೋಟೋ ಕೂಡ ಇದೇ ದೃಶ್ಯಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ.
ತನಿಖೆ ನಡೆಸುವ ವೇಳೆ, ಮಾರ್ಚ್ 8ರಂದು ಐಸಿಸಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮತ್ತು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಭಾರತ ರಾಷ್ಟ್ರಗೀತೆ ವೀಡಿಯೊವನ್ನು ನಾವು ಪರಿಶೀಲಿಸಿದ್ದೇವೆ. ಆ ವೀಡಿಯೊದಲ್ಲಿ ವೈರಲ್ ಆಗಿರುವ ಹೇಳಿಕೆಯಂತೆ ಯಾವುದೇ ದೃಶ್ಯಗಳು ಕಾಣಿಸಲಿಲ್ಲ.
ಅಂದರೆ, ವೈರಲ್ ಆಗಿರುವ ಫೋಟೋ ಅಥವಾ ವಿಡಿಯೋ ಈ ಪಂದ್ಯಕ್ಕೆ ಸಂಬಂಧಿಸಿದೆ ಎನ್ನುವ ಮಾತು ತಪ್ಪಾಗಿದೆ. ಜನರು ತಪ್ಪಾಗಿ ಅರ್ಥಮಾಡಿಕೊಂಡು ಈ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಹೇಳಿಕೆ ನಿಜವಲ್ಲ ಎಂದು ಹೇಳಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಫೋಟೋ ಫೆಬ್ರವರಿ 14ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದ್ದು. ವಾಸ್ತವವಾಗಿ ನ್ಯೂಜಿಲೆಂಡ್ ರಾಷ್ಟ್ರಗೀತೆ ಕೇಳಿ ಇಶ್ ಸೋಧಿ ಕಣ್ಣೀರಾಕಿದ್ದ ವಿಡಿಯೋವದು.