ಫ್ಯಾಕ್ಟ್‌ಚೆಕ್: ಚಂದ್ರಶೇಖರ್ ಆಜಾದ್ ಜೈಲಿನಲ್ಲಿದ್ದಾಗ ಗಾಂಧಿ, ನೆಹರೂ ಯಾವುದೇ ರೀತಿಯ ನೆರವು ನೀಡಲಿಲ್ಲ ಎಂದು ಆಧಾರತಹಿತ ಸುದ್ದಿ ಹಂಚಿಕೆ
ಚಂದ್ರಶೇಖರ್ ಆಜಾದ್ ಜೈಲಿನಲ್ಲಿದ್ದಾಗ ಗಾಂಧಿ, ನೆಹರೂ ಯಾವುದೇ ರೀತಿಯ ನೆರವು ನೀಡಲಿಲ್ಲ ಎಂದು ಆಧಾರತಹಿತ ಸುದ್ದಿ ಹಂಚಿಕೆ
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ದೇಶ ಕಂಡ ಅಪ್ರತಿಮ ಹೋರಾಟಗಾರ. ಚಂದ್ರಶೇಖರ್ ಆಜಾದ್ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರ. ಬ್ರಿಟಿಷ್ ಆಡಳಿತದ ವಿರುದ್ಧ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಆಯುಧಗಳನ್ನು ಬಳಸಿದ ಮೊದಲ ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್. ಭಾರತವು ಜುಲೈ 23, 2025 ರಂದು ಚಂದ್ರಶೇಖರ್ ಆಜಾದ್ ಅವರ 119ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ ಆಜಾದ್‌ಗೆ ಸಂಬಂಧಿಸಿದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಜುಲೈ 24, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼHow many of you know that when Chandrashekhar Azad was facing trial, he approached Motilal Nehru for legal help, but was denied? And how MK Gandhi repeatedly condemned Azad and his fellow revolutionaries, calling their struggle “violent” and against his ideals? Azad died a martyr in Alfred Park, surrounded by British forces, with no political support from Congress. They abandoned himʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿದ್ದಾರೆ. ಪೊಸ್ಟ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ʼಚಂದ್ರಶೇಖರ ಆಜಾದ್ ವಿಚಾರಣೆ ಎದುರಿಸುತ್ತಿದ್ದಾಗ, ಕಾನೂನು ಸಹಾಯಕ್ಕಾಗಿ ಮೋತಿಲಾಲ್ ನೆಹರು ಅವರನ್ನು ಸಂಪರ್ಕಿಸಿದರು, ಆದರೆ ನೆಹರು ಸಹಾಯ ನೀಡಲು ನಿರಾಕರಿಸಿದರು. ಇದಲ್ಲದೆ, ಮಹಾತ್ಮ ಗಾಂಧಿಯವರು ಆಜಾದ್ ಮತ್ತು ಅವರ ಕ್ರಾಂತಿಕಾರಿಗಳ ಹೋರಾಟವನ್ನು ‘ಹಿಂಸಾತ್ಮಕ’ ಎಂದು ಖಂಡಿಸಿದ್ದರು. ಆಲ್ಫ್ರೆಡ್ ಪಾರ್ಕ್‌ನಲ್ಲಿ ಬ್ರಿಟಿಷ್ ಪೊಲೀಸರಿಂದ ಸುತ್ತುವರೆಯಲ್ಪಟ್ಟಾಗ ಕಾಂಗ್ರೆಸ್‌ನಿಂದ ಯಾವುದೇ ಬೆಂಬಲ ಇಲ್ಲದೆ ಆಜಾದ್ ಹುತಾತ್ಮರಾದರು” ಎಂದು ಆರೋಪಿಸಲಾಗಿದೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇದೇ ಪೊಸ್ಟ್‌ನ್ನು ನಾವು ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ʼDid you know?ʼ ಎಂಬ ಶೀರ್ಷಿಕೆಯೊಂದಿಗೆ ಚಂದ್ರಶೇಖರ ಆಜಾದ್ ವಿಚಾರಣೆ ಎದುರಿಸುತ್ತಿದ್ದಾಗ, ಕಾನೂನು ಸಹಾಯಕ್ಕಾಗಿ ಮೋತಿಲಾಲ್ ನೆಹರು ಅವರನ್ನು ಸಂಪರ್ಕಿಸಿದರು, ಆದರೆ ನೆಹರು ಸಹಾಯ ನೀಡಲು ನಿರಾಕರಿಸಿದರು. ಇದಲ್ಲದೆ, ಮಹಾತ್ಮ ಗಾಂಧಿಯವರು ಆಜಾದ್ ಮತ್ತು ಅವರ ಕ್ರಾಂತಿಕಾರಿಗಳ ಹೋರಾಟವನ್ನು ‘ಹಿಂಸಾತ್ಮಕ’ ಎಂದು ಖಂಡಿಸಿದ್ದರು ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇದೆ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾಋಎ. ಇದರಿಂದ ಏನಾಗುತ್ತಿದೆ ಎಂದರೆ, ಆಜಾದ್‌ರನ್ನು ಕಾಂಗ್ರೆಸ್ ಕೈಬಿಟ್ಟಿತು ಎಂಬ ತಪ್ಪು ಗ್ರಹಿಕೆಯನ್ನು ಮೂಡುತ್ತಿವೆ. ಇದನ್ನು ನಿಜವೆಂದು ನಂಬಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ ಮತ್ತು ನೆಹರು ಅವರನ್ನು ಕಟುವಾದ ಶಬ್ದಗಳಿಂದ ಟೀಕಿಸುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ವಿರುದ್ಧ ಹಲವು ನಕಾರಾತ್ಮಕ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಚಂದ್ರಶೇಖರ್ ಆಜಾದ್ ಎಂದಿಗೂ ಬಂಧನಕ್ಕೆ ಒಳಗಾಗಿರಲಿಲ್ಲ, ಮತ್ತು ಮೋತಿಲಾಲ್ ನೆಹರು ಅವರಿಗೆ ಆರ್ಥಿಕ ಸಹಾಯ ನೀಡುತ್ತಿದ್ದರು. ಗಾಂಧಿಯವರ ತತ್ವಗಳು ಆಜಾದ್‌ರ ಕ್ರಾಂತಿಕಾರಿ ವಿಧಾನಗಳಿಗೆ ವಿರುದ್ಧವಾಗಿದ್ದರೂ, ಕಾಂಗ್ರೆಸ್‌ನಿಂದ ಕೈಬಿಡುವಿಕೆಯ ಆರೋಪಕ್ಕೆ ಯಾವುದೇ ಐತಿಹಾಸಿಕ ಆಧಾರವಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ಚಂದ್ರಶೇಖರ ಆಜಾದ್‌ರ ಜೀವನ ಮತ್ತು ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ವಿಶ್ವಾಸಾರ್ಹ ಮೂಲಗಳಾದ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಮತ್ತು ಇತಿಹಾಸಕಾರರಾದ ಎಸ್.ಕೆ. ಮಿತ್ತಲ್ ಮತ್ತು ಇರ್ಫಾನ್ ಹಬೀಬ್‌ರ ಲೇಖನಗಳನ್ನು ಪರಿಶೀಲಿಸಿದೆವು. ಈ ಮೂಲಗಳ ಪ್ರಕಾರ ಆಜಾದ್ ಎಂದಿಗೂ ಬಂಧನಕ್ಕೆ ಒಳಗಾಗಿರಲಿಲ್ಲ ಎಂದು ದೃಢಪಡಿಸಿವೆ. 1921ರಲ್ಲಿ 15 ವರ್ಷದ ಬಾಲಕನಾಗಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದಾಗ ಒಮ್ಮೆ ಬಂಧನಕ್ಕೆ ಒಳಗಾಗಿದ್ದರು, ಆದರೆ ಆಗ ಅವರನ್ನು ವಯಸ್ಸಿನ ಕಾರಣದಿಂದ ಬಿಡುಗಡೆ ಮಾಡಲಾಗಿತ್ತು. 1925ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಜಾದ್, ಆ ಕೇಸ್‌ನಲ್ಲಿ ಒಂಬತ್ತು ಆರೋಪಿಗಳ ಪೈಕಿ ಪೊಲೀಸರಿಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ ಇವರು. ಬ್ರಿಟಿಷರ ನಿದ್ದೆಗೆಡಿಸಿದ್ದ ಚಂದ್ರಶೇಖರ್ ಆಜಾದ್‌ರನ್ನ ಪೊಲೀಸರು ವಾಟೆಂಡ್ ಲಿಸ್ಟ್‌ನಲ್ಲಿ ಸೇರಿಸಿದ್ದರು. ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಆಜಾದ್ ಎಂದಿಗೂ ಬಂಧನಕ್ಕೆ ಒಳಗಾಗಿರಲಿಲ್ಲ. ಮೋತಿಲಾಲ್ ನೆಹರು ಆಜಾದ್‌ಗೆ ನಿಯಮಿತವಾಗಿ ಆರ್ಥಿಕ ಸಹಾಯ ನೀಡುತ್ತಿದ್ದರು ಎಂದು ದಾಖಲೆಗಳಿವೆ, ಆದ್ದರಿಂದ ಸಹಾಯ ನಿರಾಕರಣೆಯ ಆರೋಪದಲ್ಲಿ ಸತ್ಯಾಂಶವಿಲ್ಲ.
ʼಹಿಸ್ಟಾರಿಕ್ ಇಂಡಿಯಾʼ ವೆಬ್‌ಸೈಟ್‌ನಲ್ಲಿ ಚಂದ್ರಶೇಖರ್ ಆಜಾದ್‌ರವರ ಜೀವನ ಚರಿತ್ರೆಯ ಬಗ್ಗೆ ಲೇಖನವೊಂದು ನಮಗೆ ಕಂಡುಬಂತಿತು ಇದರಲ್ಲಿ ʼತಮ್ಮ ಕ್ರಾತಿಂಕಾರಿ ಚಟುವಟಿಕೆಯಿಂದ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಆಜಾದ್ ಅವರನ್ನು ಹಿಡಿಯಲು ಒಬ್ಬ ಹಿಂದಿ ಲೇಖಕನನ್ನು ಮಾಹಿತಿದಾರನಾಗಿ ನೇಮಕ ಮಾಡಲಾಗಿತ್ತು. ಆತ ಆಜಾದ್ ಬಗ್ಗೆ ಮಾಹಿತಿ ನೀಡುತ್ತಿದ್ದ. ಅದರಂತೆ 1931 ಫೆಬ್ರವರಿ 27ರಂದು ಅಲಹಬಾದ್‌ನ ಆಲ್‌ಫ್ರೆಡ್ ಪಾರ್ಕ್‌ನಲ್ಲಿ ತಮ್ಮ ಸಂಗಡಿಗರ ಬೇಟಿಗೆ ಬಂದಾಗ ಬ್ರಿಟಿಷ್ ಪೊಲೀಸರು ಪಾರ್ಕ್‌ನ್ನು ಸುತ್ತುವರಿದು ಶರಣಾಗುವಂತೆ ಆಜಾದ್‌ಗೆ ಆದೇಶಿಸಿದ್ದರು. ಆದರೆ ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಆಜಾದ್ ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು. ತಮ್ಮಲ್ಲಿದ್ದ ಬಹುತೇಕ ಗುಂಡುಗಳು ಖಾಲಿಯಾಗಿ ಉಳಿದಿದ್ದು ಕೇವಲ ಒಂದು ಗುಂಡು. ಅಂತಹ ಆತಂಕದ ಪರಿಸ್ಥಿತಿಯಲ್ಲಿಯು ಅವರ ಸಮಯ ಪ್ರಜ್ಞೆ ಕಾರ್ಯ ಪ್ರವೃತವಾಗಿತ್ತು. ಬಾಲ್ಯದಲ್ಲಿ ತಾವೇ ಹೇಳಿದಂತೆ "ನನ್ನ ಜೀವಂತ ದೇಹದ ಮೇಲೆ ಕೈ ಹಾಕುವ ಪೊಲೀಸ್ ಇನ್ನೂ ಜನ್ಮ ತಾಳಿಲ್ಲ. ಆಜಾದ್ ಹೀ ರಹೇಂಗೆ.. ಆಜಾದ್ ಹೀ ಮರೇಂಗ್" ಎನ್ನುತ್ತ ಆಜಾದ್ ಅವರು ತನ್ನ ಪಿಸ್ತೂಲಿನಲಿದ್ದ ಕೊನೆಯ ಗುಂಡನ್ನು ತಮ್ಮ ತಲೆಗೆ ಹಾರಿಸಿಕೊಂಡರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹಾರಸಿಕೊಂಡು ಭಾರತ ಮಾತೆಯ ಮುಡಿಗೆ ತಮ್ಮ ಪ್ರಾಣತ್ಯಾಗ ಮಾಡಿದರುʼ ಎಂದು ವರದಿಯಾಗಿದೆ.
23, 2024ರಂದು ʼಪಿಜಿ ಗುರುಸ್ʼ ಎಂಬ ವೆಬ್‌ಸೈಟ್‌ನಲ್ಲಿ ಆಜಾದ್‌ರವರ ಕೊನೆಯ ದಿನಗಳ ಬಗ್ಗೆ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಈ ವರದಿಯಲ್ಲಿ ʼ1931 ರ ಫೆಬ್ರವರಿ 27 ರಂದು, ಚಂದ್ರಶೇಖರ್ ಆಜಾದ್ ಅವರು ಭಗತ್ ಸಿಂಗ್ ಮತ್ತು ಇತರರನ್ನು ಬಿಡುಗಡೆ ಮಾಡಲು ಸಹಾಯ ಕೇಳಲು ಪ್ರಯಾಗರಾಜ್‌ನಲ್ಲಿ ಜವಾಹರಲಾಲ್ ನೆಹರು ಅವರನ್ನು ಭೇಟಿಯಾದರು. ನಂತರ, ಆಜಾದ್ ಒಬ್ಬರನ್ನು ಭೇಟಿಯಾಗಲು ಆಲ್ಫ್ರೆಡ್ ಪಾರ್ಕ್‌ಗೆ ಹೋಗಿ ಮರದ ಕೆಳಗೆ ಕುಳಿತರು. ಅದೇ ದಿನ, ಆಜಾದ್ ಅವರನ್ನು 80 ಕ್ಕೂ ಹೆಚ್ಚು ಬ್ರಿಟಿಷ್ ಅಧಿಕಾರಿಗಳು ಸುತ್ತುವರೆದರು, ಅವರು ಒಬ್ಬ ಗೂಢಚಾರನ ಮೂಲಕ ಅವರನ್ನು ಪತ್ತೆಹಚ್ಚಿದ್ದರು. ಚಂದ್ರಶೇಖರ್ ಆಜಾದ್ ಅನೇಕ ಪೊಲೀಸರನ್ನು ಕೊಂದ ನಂತರ ಆಡ್ ಪಾರ್ಕ್‌ನಲ್ಲಿ ತಮ್ಮ ಪಿಸ್ತೂಲಿನಲ್ಲಿ ಉಳಿದಿರುವ ಕೊನೆಯ ಗುಂಡಿನಿಂದ ತಮ್ಮನ್ನು ತಾವು ಗುಂಡು ಹಾರಿಸಿಕೊಂಡರು. ಅವರು ಕೊನೆಯವರೆಗೂ ಆಜಾದ್ ಅಥವಾ ಸ್ವತಂತ್ರರಾಗಿದ್ದರುʼ ಎಂದು ವರದಿಯಲ್ಲಿದೆ
ಚಂದ್ರಶೇಖರ ಆಜಾದ್ ತಮ್ಮ ಕ್ರಾಂತಿಕಾರಿ ಜೀವನದಲ್ಲಿ ಎಂದಿಗೂ ಬಂಧನಕ್ಕೆ ಒಳಗಾಗಿರಲಿಲ್ಲ, ಆದ್ದರಿಂದ ವಿಚಾರಣೆ ಎದುರಿಸಿದ ಆರೋಪವೇ ತಪ್ಪಾಗಿದೆ. ಮೋತಿಲಾಲ್ ನೆಹರು ಆಜಾದ್‌ರ ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ಗೆ ಆರ್ಥಿಕ ಸಹಾಯ ನೀಡುತ್ತಿದ್ದರು ಎಂದು ಇತಿಹಾಸಕಾರರಾದ ಎಸ್.ಕೆ. ಮಿತ್ತಲ್ ಮತ್ತು ಇರ್ಫಾನ್ ಹಬೀಬ್ ದಾಖಲಿಸಿದ್ದಾರೆ. ಜವಾಹರಲಾಲ್ ನೆಹರು 1931ರ ಫೆಬ್ರವರಿಯಲ್ಲಿ ಆಜಾದ್‌ರನ್ನು ಭೇಟಿಯಾಗಿದ್ದರು, ಆದರೆ ಇದು ಗಾಂಧಿ-ಇರ್ವಿನ್ ಒಪ್ಪಂದದ ಸಂದರ್ಭದಲ್ಲಿ ಕ್ರಾಂತಿಕಾರಿಗಳಿಗೆ ಕ್ಷಮಾದಾನದ ಸಾಧ್ಯತೆಯ ಬಗ್ಗೆ ಚರ್ಚಿಸಲು, ಗಾಂಧಿಯವರು ಆಜಾದ್‌ರ ಹಿಂಸಾತ್ಮಕ ವಿಧಾನಗಳನ್ನು ಒಪ್ಪದಿದ್ದರೂ, ಕಾಂಗ್ರೆಸ್ ಆಜಾದ್‌ರನ್ನು ಕೈಬಿಟ್ಟಿತು ಎಂಬ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. “ಚಂದ್ರಶೇಖರ ಆಜಾದ್ ವಿಚಾರಣೆ ಎದುರಿಸುತ್ತಿದ್ದಾಗ ಮೋತಿಲಾಲ್ ನೆಹರು ಕಾನೂನು ಸಹಾಯ ನಿರಾಕರಿಸಿದರು, ಕಾಂಗ್ರೆಸ್ ಆಜಾದ್‌ರನ್ನು ಕೈಬಿಟ್ಟಿತು” ಎಂಬ ಆರೋಪದಲ್ಲಿ ನಿಜಾಂಶವಿಲ್ಲ. ಚಂದ್ರಶೇಖರ್ ಆಜಾದ್ ಎಂದಿಗೂ ಬಂಧನಕ್ಕೆ ಒಳಗಾಗಿರಲಿಲ್ಲ, ಮತ್ತು ಮೋತಿಲಾಲ್ ನೆಹರು ಅವರಿಗೆ ಆರ್ಥಿಕ ಸಹಾಯ ನೀಡುತ್ತಿದ್ದರು. ಗಾಂಧಿಯವರ ತತ್ವಗಳು ಆಜಾದ್‌ರ ಕ್ರಾಂತಿಕಾರಿ ವಿಧಾನಗಳಿಗೆ ವಿರುದ್ಧವಾಗಿದ್ದರೂ, ಕಾಂಗ್ರೆಸ್‌ನಿಂದ ಕೈಬಿಡುವಿಕೆಯ ಆರೋಪಕ್ಕೆ ಯಾವುದೇ ಐತಿಹಾಸಿಕ ಆಧಾರವಿಲ್ಲ.