ಫ್ಯಾಕ್ಟ್‌ಚೆಕ್: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಕಾರು ಬಳಸಿಲ್ಲ
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಕಾರು ಬಳಸಿಲ್ಲ
ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್ ಎಂದು ಪಬ್ಲಿಕ್ ಟಿವಿ ವರದಿಯೊಂದನ್ನು ಪ್ರಕಟಿಸಿದೆ. ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ವಿರೋಧಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಈ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ನಡೆದ ಅತಿದೊಡ್ಡ ಪ್ರತಿಭಟನೆ ಇದಾಗಿದ್ದು, ಮಂಗಳೂರಿನ ಉಲೇಮಾ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತು ಇತರ ಹಲವಾರು ಮುಸ್ಲಿಂ ಸಂಘಟನೆಗಳು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವು.
ಏಪ್ರಿಲ್ 19, 2025ರಂದು ಕನ್ನಡ ಮಾಧ್ಯಮ ಸಂಸ್ಥೆಯಾದ ಪಬ್ಲಿಕ್ ಟಿವಿ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ʼಪ್ರತಿಭಟನಾಕಾರರಿಗೆ ACP ಕಾರ್ ನಲ್ಲಿ ಡ್ರಾಪ್ | Mangaluru | Public TVʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ʼಮಂಗಳೂರಿನಲ್ಲಿ ವಕ್ಫ್ ವಿರುದ್ಧ ನಡೆದ ಪ್ರತಿಭಟನೆ ಬಳಿಕ, ಕೆಲ ಪ್ರತಿಭಟನಕಾರರನ್ನು ಪೊಲೀಸ್ ವಾಹನದಲ್ಲೇ ಡ್ರಾಪ್ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಎಸಿಪಿ ನಜಮಾ ಫಾರೂಕಿ ಅವರ ಸರ್ಕಾರಿ ಕಾರನ್ನು ಬಳಸಿಕೊಂಡು, ಕೆಲರನ್ನು ಸ್ಥಳಾಂತರ ಮಾಡಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹಲವು ಪ್ರಶ್ನೆಗಳನ್ನು ಎತ್ತಿದೆ, ಯಾಕೆಂದರೆ ಪೊಲೀಸ್ ವಾಹನಗಳು ಸರ್ಕಾರಿ ಕೆಲಸಗಳಿಗೆ ಮಾತ್ರ ಬಳಸಬೇಕು, ಜನಸಾಮಾನ್ಯರ ಅಥವಾ ಪ್ರತಿಭಟನಕಾರರ ಸೇವೆಗೆ ಅಲ್ಲ. ಎಸಿಪಿ ಅವರು ಕಾರಿನಲ್ಲಿ ಇರಲಿಲ್ಲ ಆದರೆ ಅವರ ಸರ್ಕಾರಿ ವಾಹನವೇ ಈ ರೀತಿಯಾಗಿ ಬಳಸಲ್ಪಟ್ಟಿದೆ ಎನ್ನಲಾಗಿದೆ. ಈ ವೇಳೆ, ಟ್ರಾಫಿಕ್ ಜಾಮ್, ಆಂಬುಲೆನ್ಸ್ ಸಹ ಸಿಲುಕಿಕೊಂಡಿದ್ದ ಸಂದರ್ಭದಲ್ಲೂ ಪ್ರತಿಭಟನಕಾರರು ರಸ್ತೆಯನ್ನ ಬ್ಲಾಕ್ ಮಾಡಿದ್ದರು. ಹೈಕೋರ್ಟ್ ಸೂಚನೆಯ ಪ್ರಕಾರ – ಹೆದ್ದಾರಿಯಲ್ಲಿ ಯಾವುದೇ ರೀತಿಯ ಪ್ರತಿಭಟನೆ ಅನುಮತಿಸಿಲ್ಲ, ಆದರೂ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ ಅಗರವಾಲ್ ತಿಳಿಸಿದ್ದಾರೆ ಎಂದು ವರದಿ ಮಾಡಿದ್ದಾರೆ. ಸರ್ಕಾರಿ ವಾಹನಗಳನ್ನು ಇದುವರೆಗೆ “ಪಬ್ಲಿಕ್ ಟ್ರಾನ್ಸ್ಪೋರ್ಟ್” ಅಥವಾ “ಪ್ರತಿಭಟನಕಾರರ ಡ್ರಾಪ್ ಸರ್ವಿಸ್”ಗೆ ಬಳಸಿದ ಇತಿಹಾಸವಿದೆಯೇ? ಈ ಪ್ರಕರಣದ ನಂತರ ಸಾರ್ವಜನಿಕರ ವಿಶ್ವಾಸ ಮತ್ತು ಪೊಲೀಸ್ ಇಲಾಖೆಯ ನೈತಿಕತೆಯ ಬಗ್ಗೆ ಚರ್ಚೆಗಳು ನಡೆದಿವೆ ಎಂದು ವರದಿ ಮಾಡಲಾಗಿದೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಏಪ್ರಿಲ್ 19, 2025ರಂದು ಪಬ್ಲಿಕ್ ಟಿವಿ ಕನ್ನಡ ವೆಬ್‌ಸೈಟ್‌ನಲ್ಲಿ ʼವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್ ಆರೋಪʼ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಳ್ಳಲಾಗಿದೆ. ವರದಿಯಲ್ಲಿ ʼಮಂಗಳೂರಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯ ನಂತರ, ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರ ಅಧಿಕೃತ ವಾಹನವನ್ನು ಬಳಸಿಕೊಂಡು ಕೆಲ ಪ್ರತಿಭಟನಾಕಾರರಿಗೆ ಡ್ರಾಪ್ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಏಕೆಂದರೆ ಪೊಲೀಸ್ ವಾಹನಗಳನ್ನು ಸಾರ್ವಜನಿಕ ಸೇವೆಗಾಗಿ ಬಳಸುವುದು ನಿಯಮಬದ್ಧವಲ್ಲ. ಆದರೆ, ಮಂಗಳೂರು ಪೊಲೀಸ್ ಇಲಾಖೆ ಈ ಆರೋಪಗಳನ್ನು ಖಂಡಿಸಿದ್ದು, ಎಸಿಪಿ ಅವರ ಕಾರಿನಲ್ಲಿ ಡ್ರಾಪ್ ನೀಡಲಾದವರು ಪ್ರತಿಭಟನಾಕಾರರು ಅಲ್ಲ, ಬದಲಾಗಿ ಅಪಘಾತದಲ್ಲಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲು ವಾಹನವನ್ನು ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ, ಗಾಯಾಳುವಿನ ಜೊತೆಗೆ ಇತರರು ಇದ್ದರು ಎಂಬುದನ್ನು ಕೂಡ ಪೊಲೀಸರು ತಿಳಿಸಿದ್ದಾರೆʼ ಎಂದು ವರದಿ ಮಾಡಲಾಗಿದೆ
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಕಾರು ಬಳಸಿಲ್ಲ ಎಂದು ಪೊಲೀಸ್ ಆಯುಕ್ತರ ಸ್ಪಷ್ಟನೆ ನೀಡಿದ್ದಾರೆ
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡಕಾಟದಲ್ಲಿ ನಮಗೆ ಯಾವುದಾರರು ಅಧಿಕೃತ ಪ್ರಕಟಣೆಯನ್ನು ಮಂಗಳೂರು ಪೊಲೀಸರು ಹೊರಡಿಸಿದ್ದಾರೆಯೇ ಎಂದು ಹುಡುಕಾಟ ನಡೆಸಿದಾಗ ನಮಗೆ ಏಪ್ರಿಲ್ 19, 2025ರಂದು ಮಂಗಳೂರು ಸಿಟಿ ಪೊಲೀಸ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದನ್ನು ನಾವು ಕಂಡುಕೊಂಡೆವು.
ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ನ್ನು (ಅಧಿಕೃತ ಪ್ರಕಟಣೆ) ನೀವಿಲ್ಲಿ ನೋಡಬಹುದು
ಈ ಪ್ರಕಟಣೆಯಲ್ಲಿ ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ಮಾಧ್ಯಮಗಳು ಪ್ರಕಟಿಸಿದ ವರದಿ ಸುಳ್ಳು ಎಂದು ಸಾಭೀತಾಗಿದೆ. ಈ ವರದಿಯಲ್ಲಿ “ದಿನಾಂಕ: 18-04-2025 ರಂದು ಮಂಗಳೂರು ನಗರದ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶದ ಸಮಯದಲ್ಲಿ ಪೊಲೀಸ್ ಅಧಿಕಾರಿಯವರ ಸರ್ಕಾರಿ ಕಾರನ್ನು ಪ್ರತಿಭಟನಕಾರರು ಬಳಸಿರುವ ಕುರಿತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುತ್ತದೆ.” ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಈ ಪತ್ರಿಕಾ ಪ್ರಕಟಣೆಯಲ್ಲಿ ʼದಿನಾಂಕ 18-04-2025 ರಂದು ಸಂಚಾರ ಬಂದೋಬಸ್ತು ಕರ್ತವ್ಯದಲ್ಲಿದ್ದ ಎ.ಸಿ.ಪಿ ಸಂಚಾರ ಉಪ ವಿಭಾಗರವರು, ಪಡೀಲ್ ಕಡೆಯಿಂದ ಕಾರ್ಯಕ್ರಮದ ಸ್ಥಳದ ಕಡೆಗೆ ತಮ್ಮ ಇಲಾಖಾ ವಾಹನ ಮೂಲಕ ಬಂದು ಇಳಿದು ಅಲ್ಲಿ ಮುಖ್ಯ ದ್ವಾರದ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿ. ನಂತರ ಕಾರ್ಯಕ್ರಮ ಮುಗಿದ ಬಳಿಕ ಎಸಿಪಿ ರವರು ಮಂಗಳೂರು ನಗರ ಕಡೆಗೆ ಸಂಚಾರ ನಿಯಂತ್ರಿಸುವ ಕರ್ತವ್ಯಕ್ಕೆ ಬರಲು ಹೆದ್ದಾರಿಯ ರಸ್ತೆ ವಿಭಜಕ ದಾಟಿ ಅವರ ಚಾಲಕರಿಗೆ ಮುಂದೆ ಅಡ್ಯಾರು ಕಟ್ಟೆ ಬಳಿ ಯು ಟರ್ನ್ ಮಾಡಿ ವಾಪಾಸ್ಸು ಬರಲು ಸೂಚಿಸಿರುತ್ತಾರೆ. ವಾಹನ ಚಾಲಕರಾದ ಶ್ರೀ ಬೈರೇಗೌಡರವರು ಅಡ್ಯಾರು ಕಟ್ಟೆ ಬಳಿ ಬ್ಯಾರಿಕೇಡ್ ಹಾಕಿದ್ದ ಕಾರಣ ಸಹ್ಯಾದ್ರಿ ಕಡೆ ಹೋಗುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ಅಡ್ಯಾರ್ ಗಾರ್ಡನ್ ಬಳಿ ಸುಮಾರು 19.30 ಗಂಟೆಗೆ ಟೆಂಪೋ ವಾಹನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ(16 ವರ್ಷ) ಡಿಕ್ಕಿ ಹೊಡೆದು ಬಲಕಾಲಿನ ಪಾದದ ಮೇಲೆ ಚಕ್ರ ಹಾದುಹೋದ ಪರಿಣಾಮ ಗಾಯಗೊಂಡು ಸುಮಾರು ಜನ ಸೇರಿದ್ದರು. ಅಲ್ಲೇ ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಮತ್ತು ಗಾಯಾಳುವಿನ ಕಡೆಯವರು ಎಸಿಪಿ ರವರ ವಾಹನವನ್ನು ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುತ್ತಾರೆ. ನಂತರ ಸದರಿ ಗಾಯಾಳುವನ್ನು ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗಿರುತ್ತದೆ.” ಎಂದು ಪ್ರಕರಣದ ಕುರಿತು ಮಾಹಿತಿಯನ್ನು ಕೂಡ ನೀಡಲಾಗಿದೆ. ಇನ್ನು ಅಪಘಾತಕ್ಕೆ ಸಂಬಂಧ ಪಟ್ಟ ಮಾಹಿತಿಯಲ್ಲಿ “ಅಪಘಾತ ಮಾಡಿರುವ ಟೆಂಪೋ ಸಂಖ್ಯೆ: ಕೆ.ಎ. 70 9888 ಮತ್ತು ಅದರ ಚಾಲಕನನ್ನು ಸಿಬ್ಬಂದಿ ಆನಂದ ಎಂಬವರ ಮೂಲಕ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದು, ಇದರ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಅಪಘಾತ ನಡೆಯುವ ಸಮಯದಲ್ಲಿ ಕಾರ್ಯಕ್ರಮ ಪ್ರಯುಕ್ತ ಸದರಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅಪಘಾತಕ್ಕೀಡಾದ ಗಾಯಾಳುವನ್ನು ಚಿಕಿತ್ಸೆ ಕೊಡಿಸುವ ಸಲುವಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿಯವರು ಅದೇ ಸಮಯಕ್ಕೆ ಬರುತ್ತಿದ್ದ ಎಸಿಪಿರವರ ವಾಹನದ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿರುವುದಾಗಿದೆ. ಅಪಘಾತದಲ್ಲಿ ಗಾಯವಾದಾಗ ಪ್ರಥಮ ಚಿಕಿತ್ಸೆ (ಗೋಲ್ಡನ್ ಹವರ್) ಕೊಡಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಪೊಲೀಸರು ಘಟನೆಯನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆಗೆ ಪೊಲೀಸ್ ಜೀಪಿನ ಚಾಲಕನೊಂದಿಗೆ ಕಳುಹಿಸಿ ಸದರಿ ಮಹಿಳಾ ಸಿಬ್ಬಂದಿಯವರು ಕರ್ತವ್ಯ ಮುಂದುವರಿಸಿರುತ್ತಾರೆ.” ಎಂದು ಉಲ್ಲೇಖಿಸಿದ್ದಾರೆ.
ಏಪ್ರಿಲ್ 19, 2025ರಂದು ʼವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಕಾರು ಬಳಸಿಲ್ಲ: ಪೊಲೀಸ್ ಆಯುಕ್ತರ ಸ್ಪಷ್ಟನೆʼ ಎಂಬ ಶಿರ್ಷಿಕೆಯೊಂದಿಗೆ ವಾರ್ತಾ ಭಾರತಿ ವೆಬ್‌ಸೈಟ್‌ನಲ್ಲಿ ವರದಿ ಮಾಡಲಾಗಿದೆ. ವರದಿಯಲ್ಲಿ ʼಅಡ್ಯಾರ್ ಕಣ್ಣೂರು ಬಳಿಯ ಶಾ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭ ಪೊಲೀಸ್ ಅಧಿಕಾರಿಯ ಸರಕಾರಿ ಕಾರನ್ನು ಪ್ರತಿಭಟನಾಕಾರರು ಬಳಸಿರುವುದಾಗಿ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದ್ದು, ಇದು ಸುಳ್ಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿಭಟನೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಎಸಿಪಿ (ಸಂಚಾರ ಉಪ ವಿಭಾಗ)ಯವರು ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರು ಕಡೆಗೆ ತೆರಳುವ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು. ಈ ವೇಳೆ ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ಅಜಾಗರೂಕತೆಯ ಚಾಲನೆ ಕಾರಣ 16 ವರ್ಷ ಬಾಲಕನೋರ್ವನಿಗೆ ಢಿಕ್ಕಿ ಹೊಡೆದು ಕಾಲಿಗೆ ಗಾಯವಾಗಿತ್ತು. ಈ ಸಂದರ್ಭ ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳುವಿನ ಕಡೆಯವರು ಎಸಿಪಿಯವರ ಕಾರನ್ನು ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಎಸಿಪಿಯವರಿದ್ದ ಕಾರಿನಲ್ಲಿ ಕಳುಹಿಸಿದ್ದಾರೆ. ಗಾಯಾಳುವನ್ನು ಅಡ್ಯಾರ್ ನ ಖಾಸಗಿ ಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟೆಂಪೋ ಟ್ರಾವೆಲರ್ ವಶಕ್ಕೆ ಪಡೆದು, ಚಾಲಕನನ್ನು ಠಾಣೆಗೆ ಕಳುಹಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ರಸ್ತೆ ಅಪಘಾತ ಸಂಭವಿಸಿದ ವೇಳೆ ಸಂಚಾರ ದಟ್ಟಣೆಯಿಂದ ಗಾಯಾಳುವನ್ನು ಚಿಕಿತ್ಸೆ ಕೊಡಿಸುವ ಸಲುವಾಗಿ ಎಸಿಪಿಯವರ ವಾಹನದಲ್ಲಿ ಸಾಗಿಸಲಾಗಿದೆ. ಅಪಘಾತದಂತಹ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸುವುದು ಪೊಲೀಸರ ಕರ್ತವ್ಯ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ನ್ಯೂಸ್ ವೆಬ್‌ಸೈಟ್‌ನಲ್ಲಿ ʼಮಂಗಳೂರು | ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಕಾರು ಬಳಸಿಲ್ಲ: ಕಮಿಷನರ್ ಸ್ಪಷ್ಟನೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನ ಅಡ್ಯಾರ್ ನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಯ ಕಾರನ್ನು ಬಳಸಿರುವುದಾಗಿ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದ್ದು, ಇದು ಸುಳ್ಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆʼ ಎಂದು ವರದಿ ಮಾಡಿದ್ದಾರೆ.
ಸದ್ಯಕ್ಕೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದು, ಪಬ್ಲಿಕ್ ಟಿವಿ ಸುಳ್ಳು ವರದಿ ಪ್ರಕಟಿಸಿದ್ದಕ್ಕಾಗಿ ಸಾರ್ವಜನಿಕರ ಬಳಿ ಕ್ಷಮೆ ಕೂಡ ಕೇಳದೆ, ಶೀರ್ಷಿಕೆ ಮತ್ತು ಸುದ್ದಿಯನ್ನು ಬದಲಾಯಿಸಿ ಅಪ್‌ಡೇಟ್ ಮಾಡಿದೆ. ಇದು ಪಬ್ಲಿಕ್ ಟಿವಿಯ ಹೀನ ಪ್ರತಿಕೋದ್ಯಮದ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಕೂಡ ಪಬ್ಲಿಕ್ ಟಿವಿಯ ಸುದ್ದಿಗಳ ಬಗ್ಗೆ ಈ ಅನುಮಾನ ಮೂಡುವಂತೆ ಮಾಡಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಪಬ್ಲಿಕ್ ಟಿವಿ ಪ್ರಕಟಿಸಿದ “ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್” ಎಂಬ ಸುದ್ದಿ ಸುಳ್ಳು ನಿರೂಪನೆಯಿಂದ ಕೂಡಿದೆ. ಇದು ಸ್ವತಃ ಪಬ್ಲಿಕ್ ಟಿವಿ ಸಂಸ್ಥೆಗೆ ಅರಿವಾಗಿ ಸುದ್ದಿಯನ್ನು ಅಪ್‌ಡೇಟ್ ಮಾಡಿದ್ದಾರೆ. ಜೊತೆಗೆ ಸುಳ್ಳು ಸುದ್ದಿಯ ವಿರುದ್ಧ ಮಂಗಳೂರು ಸಿಟಿ ಪೊಲೀಸರು ಕೂಡ ಸ್ಪಷ್ಟನೆಯನ್ನು ನೀಡಿದ್ದಾರೆ.