ಫ್ಯಾಕ್ಟ್‌ಚೆಕ್: ಭಾರತದ ಡ್ರೋನ್ ದಾಳಿಯಿಂದ ರಾವಲ್ಪಿಂಡಿ ಕ್ರೀಡಾಂಗಣ ನಾಶವಾಗಿದೆ ಎಂದು ಎಐ ಚಿತ್ರ ಹಂಚಿಕೆ
ಭಾರತದ ಡ್ರೋನ್ ದಾಳಿಯಿಂದ ರಾವಲ್ಪಿಂಡಿ ಕ್ರೀಡಾಂಗಣ ನಾಶವಾಗಿದೆ ಎಂದು ಎಐ ಚಿತ್ರ ಹಂಚಿಕೆ
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ, ಭಾರತವು ಮೇ 7, 2025 ರಂದು ಆಪರೇಷನ್ ಸಿಂಧೂರ್‌ನ ಭಾಗವಾಗಿ ಪಾಕಿಸ್ತಾನದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಅಂದಿನಿಂದ, ಎರಡೂ ದೇಶಗಳ ನಡುವೆ ಮಿಲಿಟರಿ ಸಂಘರ್ಷ ಮುಂದುವರೆಯಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 10, 2025 ರಂದು ಕದನ ವಿರಾಮ ಒಪ್ಪಂದವಾಯಿತು. ಆದಾಗ್ಯೂ, ಮಿಲಿಟರಿ ಮುಖಾಮುಖಿ ಕೊನೆಗೊಂಡ ನಂತರವೂ, ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯ ಘಟನೆಗಳು ವರದಿಯಾಗಿವೆ. ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಆಪರೇಷನ್ ಸಿಂಧೂರ್ ಅಡಿಯಲ್ಲಿ ನಾಶಪಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ, ದಾಳಿಯಿಂದ ಹಾನಿಗೊಳಗಾದ ಕ್ರೀಡಾಂಗಣವನ್ನು ಕಾಣಬಹುದು.
ಮೇ 12, 2025ರಂದು ಎಕ್ಸ್ ಖಾತೆದಾರರರೊಬ್ಬರು ʼRawalpindi stadium. Do Pakistanis know all of this? #IndiaPakistanWar #Ceasefire2025 #IndiaPakistanWar2025ʼ ಎಂಬ ಶೀರ್ಷಿಕೆಯೊಂದಿಗೆ ಸ್ಟೇಡಿಯಂನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಾವಲ್ಪಿಂಡಿ ಕ್ರೀಡಾಂಗಣ. ಪಾಕಿಸ್ತಾನಿಗಳಿಗೆ ಇದೆಲ್ಲಾ ಗೊತ್ತಾ?ʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 13, 2025ರಂದು ಫೇಸ್‌ಬುಕ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಡ್ರೋನ ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣದ ಫೋಟೋ ಇದು.ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 13, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ʼರಾವಲ್ಪಿಂಡಿ ಸ್ಟೇಡಿಯಂ. ಆಪರೇಷನ್ ಸಿಂಧೂರ್ʼ ಎಂದು ಬರೆದಿರುವುದನ್ನು ನೋಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಪೊಸ್ಟ್ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ.
ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ʼರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ಅಟ್ಯಾಕ್.. ಬೆಚ್ಚಿ ಬಿದ್ದ ಪಾಕಿಸ್ತಾನಕ್ಕೆ ಪುಕಪುಕ! ಎಂಬ ಶೀರ್ಷಿಕೆಯೊಂದಿಗೆ ʼನ್ಯೂಸ್ ಫಸ್ಟ್ʼ ಮೇ 8ರಂದು ವರದಿ ಮಾಡಿರುವುದನ್ನು ನೋಡಬಹುದು.. ವರದಿಯಲ್ಲಿ ʼಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯ ನಡೆಯುವ ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ದಾಳಿ ಮಾಡಲಾಗಿದೆ. ಇದರಿಂದ ಸ್ಟೇಡಿಯಂಗೆ ಹಾನಿಯಾಗಿರುವುದು ಕಂಡು ಬಂದಿದೆ. ಇಂದು ರಾತ್ರಿ 8 ಗಂಟೆಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪೇಶಾವರ್ ಝಲ್ಮಿ ಹಾಗೂ ಕರಾಚಿ ಕಿಂಗ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಇದಕ್ಕಿಂತ ಕೆಲವು ಗಂಟೆಗಳ ಮೊದಲು ಮೈದಾನದ ಕಟ್ಟಡದ ಮೇಲೆ ಡ್ರೋಣ್ ದಾಳಿ ನಡೆದಿದ್ದು ಇದರಿಂದ ಹಾನಿಯಾಗಿದೆ. ಪಾಕಿಸ್ತಾನದ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ರಾವಲ್ಪಿಂಡಿ ಕ್ರಿಕೆಟ್ ಮೈದಾನ ಕೂಡ ಒಂದಾಗಿದೆ. ಇನ್ನು ದಾಳಿ ಮಾಡಿದ ಬೆನ್ನಲ್ಲೇ ರಾವಲ್ಪಿಂಡಿಯನ್ನು ಬಿಟ್ಟು ಹೊರಡುವಂತೆ ಪಾಕ್ ಕ್ರಿಕೆಟಿಗರಿಗೆ ಅಲ್ಲಿನ ಕ್ರಿಕೆಟ್ ಬೋರ್ಡ್ ಸೂಚನೆ ನೀಡಿದೆ. ಸದ್ಯ ಇವತ್ತು ಸ್ಟೇಡಿಯಂನಲ್ಲಿ ಪಿಎಸ್‌ಎಲ್ ಟೂರ್ನಿಯ ಪಂದ್ಯ ನಡೆಯಬೇಕಾಗಿತ್ತು. ಈ ಕ್ರಿಕೆಟ್ ಪಂದ್ಯಕ್ಕೂ ಮೊದಲೇ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಸೇನೆಯ ಹೆಡ್ ಕ್ವಾರ್ಟರ್ ರಾವಲ್ಪಿಂಡಿಯ ಚಕಲಾಲ್ ಇದೆ. ಕಳೆದ ರಾತ್ರಿ ಇದನ್ನು ಟಾರ್ಗೆಟ್ ಮಾಡಿ ಡ್ರೋಣ್ ದಾಳಿ ಮಾಡಲಾಗಿದೆ ಎಂದು ಅಲ್ಲಿನ ಸೇನಾ ವಕ್ತಾರರು ಹೇಳಿದ್ದಾರೆ. ರಾವಲ್ಪಿಂಡಿ, ಲಾಹೋರ್ ಸೇರಿದಂತೆ ಒಟ್ಟು 12 ಸ್ಥಳಗಳ ಮೇಲೆ ದಾಳಿಯಾಗಿದೆ. ಭಾರತದ ವಿರುದ್ಧ ಕುತಂತ್ರ ರೂಪಿಸುವುದು ಎಲ್ಲ ಇದೇ ರಾವಲ್ಪಿಂಡಿಯ ಸೇನಾ ಹೆಡ್ ಕ್ವಾರ್ಟರ್ನಲ್ಲಿ ಎನ್ನಲಾಗಿದೆʼ ಎಂದು ವರದಿ ಮಾಡಲಾಗಿದೆ
ಮೇ 08, 2025ರಂದು ʼರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿ; ಪಾಕಿಸ್ತಾನ ಬಿಡಲು ಮುಂದಾದ ವಿದೇಶಿ ಆಟಗಾರರುʼ ಎಂಬ ಶೀರ್ಷಿಕೆಯೊಂದಿಗೆ ಟಿವಿ9 ಕನ್ನಡ ವರದಿ ಮಾಡಿರುವುದನ್ನು ನೋಡಬಹುದು. ʼ ಪಾಕಿಸ್ತಾನ ಬೆಂಬಲಿತ ಉಗ್ರರರು ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ ನಡೆಸಿದೆ. ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಹಲವು ಸ್ಥಳಗಳಿಗೆ ಹಾನಿಯಾಗಿದೆ. ಈ ದಾಳಿಯಿಂದ ಪಾಕಿಸ್ತಾನ ಸೂಪರ್ ಲೀಗ್ ರದ್ದಾಗುವ ಸಾಧ್ಯತೆಗಳಿವೆ. ಹಲವು ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳಲು ಮುಂದಾಗುತ್ತಿದ್ದಾರೆ. ಭಾರತದ ನಾಗರೀಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ಮಾಡಿರುವುದರಿಂದ ಕೆರಳಿ ಕೆಂಡವಾಗಿರುವ ಭಾರತ, ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ರಾವಲ್ಪಿಂಡಿಯಲ್ಲಿರುವ ಕ್ರಿಕೆಟ್ ಕ್ರೀಡಾಂಗಣವು ಹಾನಿಗೊಳಗಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆʼ ಎಂದು ವರದಿ ಮಾಡಿರುವುದನ್ನು ನೋಡಬಹುದು.
ಮೇ 10, 2025ರಂದು ʼಸಿಎನ್‌ಎನ್ ಇಂಟರ್‌ನ್ಯಾಷನಲ್ʼ ಫೇಸ್‌ಬುಕ್ ಖಾತೆದಾರರೊಬ್ಬರು ʼCNN's Nic Robertson visited the Rawalpindi Cricket Stadium to see shrapnel damage after an alleged Indian drone attack. Pakistan's foreign minister has announced that the Pakistan Super League cricket tournament currently being held there will move to Dubai, amid fears of further strikes.ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಇದರಲ್ಲಿ ವೈರಲ್ ಚಿತ್ರದಲ್ಲಿ ತೋರಿಸಿರುವಂತಹ ಯಾವುದೇ ದೃಶ್ಯಗಳನ್ನು ಇದು ಕಂಡುಬಂದಿಲ್ಲ.
ಮತ್ತಷ್ಟು ಮಾಹಿತಿಗಾಗಿ, ವೈರಲ್ ಚಿತ್ರವನ್ನು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ದೃಶ್ಯಗಳೊಂದಿಗೆ ಹೋಲಿಸಿದ್ದೇವೆ. ಆಗ ಈ ಎರಡೂ ಫೋಟೋ ವಿಭಿನ್ನವಾಗಿವೆ ಎಂದು ಕಂಡುಕೊಂಡಿದ್ದೇವೆ. ವೈರಲ್ ಆಗಿರುವ ಚಿತ್ರದಲ್ಲಿ ಕ್ರಿಕೆಟ್ ಕ್ರೀಡಾಂಗಣದ ಮೈದಾನವು ತುಂಬಾ ಚಿಕ್ಕದಾಗಿ ಕಾಣುತ್ತದೆ. ಅದೇ ನೈಜ್ಯ ಕ್ರೀಡಾಂಗಣ ದೊಡ್ಡದಾಗಿದೆ. ಅಲ್ಲದೆ ವೈರಲ್ ಫೋಟೋದಲ್ಲಿ ವೀಕ್ಷಕ ಗ್ಯಾಲರಿ ಎರಡು ಅಂತಸ್ತಿನಿಂದ ಕೂಡಿದೆ. ಆದರೆ ನಿಜವಾದ ಮೈದಾನ ಒಂದು ಅಂತಸ್ತಿನಿಂದ ಕೂಡಿದೆ.
ನಾವು ವೈರಲ್ ಆದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 96.6 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಈ ಲೋಪಗಳನ್ನು ಆಧರಿಸಿ ವೈರಲ್ ಫೋಟೋವನ್ನು was it AI ಎಂಬ ಎಐ ಫೋಟೋಗಳನ್ನು ಪತ್ತೆ ಹಚ್ಚುವ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು ಎಐನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.
ಈ ವೈರಲ್ ಫೋಟೋ ಎಐನಿಂದ ರಚಿತವಾಗಿರಬಹುದು ಎಂಬ ಅನುಮಾನದಿಂದ, ಎಐ ಡಿಟೆಕ್ಟರ್ ಪರಿಕರವಾದ ಸೈಟ್ ಇಂಜೀನ್ ಪರಿಶೀಲಿಸಿದ್ದೇವೆ. ಈ ಎರಡೂ ಪರಿಕರಗಳು ವೈರಲ್ ಫೋಟೋ ಎಐನಿಂದ ರಚಿತವಾಗಿದೆ ಎಂದು ದೃಢಪಡಿಸಿವೆ. ಹೈವ್ ಮಾಡರೇಶನ್ ಪ್ರಕಾರ, ಇದು ಎಐ ರಚಿತವಾಗುವ ಸಾಧ್ಯತೆ ಶೇ. 98.1 ರಷ್ಟು ಇದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗುತ್ತಿದೆ.