ಫ್ಯಾಕ್ಟ್‌ಚೆಕ್: ಮದುವೆಗೂ ಮುನ್ನ ಮಾಜಿ ಪ್ರಿಯಕರನ ಭೇಟಿಯಾದ ವಧು ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಮದುವೆಗೂ ಮುನ್ನ ಮಾಜಿ ಪ್ರಿಯಕರನ ಭೇಟಿಯಾದ ವಧು ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಗೆ 2 ಗಂಟೆಗಳ ಮೊದಲು ಯುವತಿ ತನ್ನ ಪ್ರೇಮಿಯನ್ನು ಭೇಟಿಯಾಗಿರುವ ದೃಶ್ಯ ಕಂಡು ಬಂದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ವಧು ಮದುವೆ ಸೀರೆಯುಟ್ಟು, ಆಭರಣಗಳನ್ನು ಧರಿಸಿ ಸಿದ್ಧಳಾಗಿ ಕಾರಿನಲ್ಲಿ ಕುಳಿತಿರುತ್ತಾಳೆ. ಆದರೆ ಅವಳ ಮುಖದಲ್ಲಿ ಮದುವೆಯ ಕಳೆಗಿಂತ ಆತಂಕವೇ ಹೆಚ್ಚಾಗಿ ಕಾಣಿಸುತ್ತದೆ. ಪಕ್ಕದಲ್ಲೇ ಕುಳಿತಿರುವ ಆಕೆಯ ಸ್ನೇಹಿತೆ ಕ್ಯಾಮೆರಾ ನೋಡಿ ಮಾತನಾಡುತ್ತಾ, “ನಾವು ಅವಳ ಮಾಜಿ ಪ್ರೇಮಿಯನ್ನು ಕೊನೆಯದಾಗಿ ಭೇಟಿಯಾಗಲು ಹೋಗುತ್ತಿದ್ದೇವೆ. ಹಳೆಯ ಸಂಬಂಧಕ್ಕೆ ಒಂದು ಮುಕ್ತಾಯ ನೀಡಲು ಅವಳು ಈ ನಿರ್ಧಾರ ತೆಗೆದುಕೊಂಡಿದ್ದಾಳೆ” ಎಂದು ವಿವರಿಸುತ್ತಾಳೆ. ಕಾರು ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಂತಾಗ, ವಧು ಕೆಳಗಿಳಿದು ತನ್ನ ಮಾಜಿ ಪ್ರೇಮಿಯತ್ತ ನಡೆದು ಹೋಗುತ್ತಾಳೆ. ಇಬ್ಬರೂ ಭಾವುಕರಾಗಿ ಮಾತನಾಡುತ್ತಾರೆ. ಅವರ ಮಾತುಗಳು ಕೇಳಿಸದಿದ್ದರೂ, ಅವರ ಮುಖಭಾವದಲ್ಲಿನ ನೋವು ಸ್ಪಷ್ಟವಾಗಿ ಕಾಣುತ್ತದೆ. ಮಾತುಕತೆಯ ನಂತರ ಇಬ್ಬರೂ ಭಾವುಕರಾಗಿ ತಬ್ಬಿಕೊಳ್ಳುತ್ತಾರೆ
ಡಿಸಂಬರ್ 15, 2025ರಂದು ವಿಶ್ವವಾಣಿ ಎಂಬ ವೆಬ್‌ಸೈಟ್‌ನಲ್ಲಿ ʼಮದುವೆಗೆ 2 ಗಂಟೆ ಮೊದಲು ಮಾಜಿ ಪ್ರೇಮಿಯನ್ನು ಭೇಟಿಯಾದ ವಧು: ಈ ನಿಯತ್ತು ಮೊದಲು ಎಲ್ಲಿ ಹೋಗಿತ್ತು ಎಂದು ಕೇಳಿದ ನೆಟ್ಟಿಗರುʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಮದುವೆಗೆ 2 ಗಂಟೆಯ ಮೊದಲು ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾದ ಭಾವನಾತ್ಮಕ ಘಟನೆಯೊಂದು ನಡೆದಿದೆ. ವಿವಾಹ ಸಮಾರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿದ್ದಾಳೆʼ ಎಂದು ವರದಿ ಮಾಡಿದ್ದಾರೆ.
ವೈರಲ್ ಆದ ವರದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತೊಂದು ಕನ್ನಡ ವೆಬ್‌ಸೈಟ್‌ನಲ್ಲಿ ʼEx-Boyfriend ಮದುವೆಗೆ 2 ಗಂಟೆ ಮುಂಚೆ ಮಾಜಿ ಪ್ರೇಮಿಯನ್ನು ಭೇಟಿಯಾದ ವಧು! ವೈರಲ್ ವಿಡಿಯೋ ನೋಡಿ ನೆಟ್ಟಿಗರು ಗರಂʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ.
ವೈರಲ್ ಆದ ವರದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಡಿಸಂಬರ್ 14, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼಮದುವೆಯ ಕೊನೆ ಕ್ಷಣದಲ್ಲಿ ಮಾಜಿ ಲವ್ವರ್ನ್ ಭೇಟಿಯಾಗಿ ಕಣ್ಣೀರಿಟ್ಟ ಯುವತಿ! Notice : ಮದುವೆಗೆ ಮುನ್ನ ಅಥವಾ ಕೆಲವೊಮ್ಮೆ ಮದುವೆಯಾದ ನಂತರವೂ, ಕೆಲವರು ತಮ್ಮ ಹಳೆಯ ಪ್ರೇಮ ಸಂಬಂಧಗಳವರನ್ನು ಮತ್ತೆ ಭೇಟಿಯಾಗುತ್ತಾರೆ. ಇದನ್ನು ಕೆಲವರು ಕೇವಲ ಮಾತನಾಡಿಕೊಂಡು ಮುಗಿಸುವುದಕ್ಕೆ, ಅಂದರೆ ಕ್ಲೋಝರ್‌ಗಾಗಿ ಅಂತ ಹೇಳುತ್ತಾರೆ. ಆದರೆ ಕೆಲವರಿಗೆ ಇದರಲ್ಲಿ ಇನ್ನೂ ಮುಚ್ಚದೇ ಉಳಿದ ಭಾವನೆಗಳು ಇರಬಹುದೆಂಬ ಅನುಮಾನವೂ ಬರುತ್ತದೆ. ಹಳೆಯ ನೆನಪುಗಳು ಅಷ್ಟೇ ಸುಲಭವಾಗಿ ಮರೆಯುವುದಿಲ್ಲ. ಜೀವನದ ಮುಖ್ಯ ಹಂತಗಳಲ್ಲಿ ಅವು ಮತ್ತೆ ನೆನಪಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಮುಖ್ಯವಾದುದು ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವ. ಮುಂದಿನ ಜೀವನ ಸಂಗಾತಿಯೊಂದಿಗೆ ಸ್ಪಷ್ಟವಾಗಿರಬೇಕು ಮತ್ತು ಗಡಿ ರೇಖೆಗಳನ್ನು ಕಾಯ್ದುಕೊಳ್ಳಬೇಕು. ಮದುವೆ ಎಂದರೆ ನಂಬಿಕೆ ಮತ್ತು ಹೊಣೆಗಾರಿಕೆ. ಹಿಂದಿನ ಸಂಬಂಧಗಳು ಸಂಪೂರ್ಣವಾಗಿ ಮುಚ್ಚದೇ ಇದ್ದರೆ, ಅವು ಮುಂದೆ ನಡೆಯುವ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರಿಂದ, ಹೊಸ ಬದುಕಿಗೆ ಕಾಲಿಡುವಾಗ ಮನಸ್ಸು ಸ್ಪಷ್ಟವಾಗಿರುವುದು ತುಂಬಾ ಮುಖ್ಯʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಡಿಸಂಬರ್ 16, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIs it true that this girl came to meet her ex-boyfriend before her Rukhsati?ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ಹುಡುಗಿ ತನ್ನ ಮದುವೆಗೂ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದು ನಿಜವೇ?ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼA video circulating widely on social media has triggered intense debate after it showed a woman meeting her former boyfriend just two hours before her wedding. The emotionally charged clip has sparked strong reactions online, with many users questioning ideas of loyalty and boundaries of past relationships before marriageʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮಹಿಳೆಯೊಬ್ಬಳು ತನ್ನ ಮದುವೆಗೆ ಕೇವಲ ಎರಡು ಗಂಟೆಗಳ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗುವುದನ್ನು ತೋರಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೀಡಿಯೊ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾವನಾತ್ಮಕವಾಗಿ ಪ್ರಭಾವಿತವಾದ ಈ ಕ್ಲಿಪ್ ಆನ್‌ಲೈನ್‌ನಲ್ಲಿ ಬಲವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ, ಅನೇಕ ಬಳಕೆದಾರರು ಮದುವೆಗೆ ಮುಂಚಿನ ನಿಷ್ಠೆ ಮತ್ತು ಹಿಂದಿನ ಸಂಬಂಧಗಳ ಮಿತಿಗಳ ವಿಚಾರಗಳನ್ನು ಪ್ರಶ್ನಿಸುತ್ತಿದ್ದಾರೆ.ʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ಮತ್ತಷು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡಿಸಂಬರ್ 13, 2025ರಂದು ವೈರಲ್ ಆದ ವಿಡಿಯೋವನ್ನು ಡಿಜಿಟಲ್ ಕ್ರಿಯೇಟರ್ ಆರವ್ ಮಾವಿ ಹಂಚಿಕೊಂಡಿರುವುದನ್ನು ನೋಡಬಹುದು. ಈತನ ಬಯೋವಿನಲ್ಲಿ ʼTurning heartbreaks into timeless stories .. Every shattered heart has a story. Share yours with me!ʼಎಂದು ಬರೆದಿರುವುದನ್ನು ನೋಡಬಹುದು. ಕನ್ನಡಕ್ಕೆ ಅನುವಾದಿಸಿದಾಗ ʼಹೃದಯಾಘಾತಗಳನ್ನು ಕಾಲಾತೀತ ಕಥೆಗಳಾಗಿ ಪರಿವರ್ತಿಸುವುದು. ಪ್ರತಿ ಛಿದ್ರಗೊಂಡ ಹೃದಯಕ್ಕೂ ಒಂದು ಕಥೆ ಇದೆ. ನಿಮ್ಮದನ್ನು ನನ್ನೊಂದಿಗೆ ಹಂಚಿಕೊಳ್ಳಿ!" ಇದರರ್ಥ ವೀಡಿಯೊ ನಾಟಕೀಕರಣವಾಗಿರಬಹುದು, ನಿಜವಾದ ಘಟನೆಯಲ್ಲ.ʼ ಎಂದು ತಿಳಿದು ಬರುತ್ತದೆ
ಕಂಟೆಂಟ್ ಕ್ರಿಯೇಟರ್ ಆರವ್ ಮಾವಿ ಇನ್‌ಸ್ಟಾಗ್ರಾಮ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್‌ನ್ನು ಪರಿಶೀಲಿಸಿದಾಗ , ಪ್ರೀತಿಯಲ್ಲಿ ವಂಚನೆ, ಮೋಸ ಹೋದ ಘಟನೆಗಳು ಮತ್ತು ತ್ರಿಕೋನ ಪ್ರೇಮ ಕಥೆ ನಿರೂಪಣೆಗಳ ವಿಷಯಗಳ ಸುತ್ತ ಕೇಂದ್ರೀಕೃತವಾಗಿರುವ ಹಲವಾರು ವೀಡಿಯೋಗಳು ನಮಗೆ ಕಂಡುಬಂದವು. ವೀಕ್ಷಕರು ತನ್ನ ವೈಯಕ್ತಿಕ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ, ಅವರ ವಿಷಯವು ನಿಜ ಜೀವನದ ದೃಶ್ಯಗಳಿಗಿಂತ ನಾಟಕೀಯ ಕಥೆ ಹೇಳುವಿಕೆಯನ್ನು ಆಧರಿಸಿದೆ ಎಂದು ಇದರಲ್ಲಿ ತಿಳಿದುಬರುತ್ತದೆ. ಆತನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದು ನಮಗೆ ಸಿಕ್ಕಿದೆ, ಅದರಲ್ಲಿ ಆತ ಜನರು ತಮ್ಮ ಬಗ್ಗೆ ರೀಲ್‌ಗಳನ್ನು ರಚಿಸಲು ಇಚ್ಛಿಸಿದರೆ, ಅವರ ಕಥೆಗಳನ್ನು ಕಳುಹಿಸಲು ಮನವಿ ಮಾಡಿದ್ದಾರೆ. ಮಾವಿ ಆಗಾಗ ಪ್ರೀತಿ ಮತ್ತು ಸಂಬಂಧಗಳಂತಹ ವಿಷಯಗಳ ಕುರಿತು ಇಂತಹ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ರಚಿಸುತ್ತಾರೆ. ಅಂತಹ ಕೆಲವು ವೀಡಿಯೊಗಳನ್ನು ಈತನ ಖಾತೆಯಲ್ಲಿ ನೋಡಬಹುದು. ಆತನ ಖಾತೆಯಲ್ಲಿರುವ ಒಂದು ವೀಡಿಯೊದಲ್ಲಿ, ಕ್ಯಾಮೆರಾ ಮತ್ತು ಲೈಟ್‌ಗಳಂತಹ ಶೂಟಿಂಗ್ ಉಪಕರಣಗಳನ್ನು ಸಹ ಕಾಣಬಹುದು.
ಅಷ್ಟೇ ಅಲ್ಲ. ಡಿಸೆಂಬರ್ 16, 2025 ರಂದು, ಆರವ್ ಮಾವಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ವೈರಲ್ ಆಗಿರುವ ವಧುವಿನ ವೀಡಿಯೋ ನಿಜವಾದ ಘಟನೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೀಡಿಯೋದ ಶೀರ್ಷಿಕೆಯಲ್ಲಿ ʼThis story is inspired by real events. It’s just for awareness and to touch heartsʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಈ ಕಥೆಯು ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ಕೇವಲ ಜಾಗೃತಿಗಾಗಿ ಮತ್ತು ಹೃದಯಗಳನ್ನು ಸ್ಪರ್ಶಿಸಲು” ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ವೀಡಿಯೋದಲ್ಲಿ, ಮಾವಿ ಈ ಕ್ಲಿಪ್ ಅನ್ನು ಸ್ವತಃ ರಚಿಸಿದ್ದಾರೆ ಮತ್ತು ಅವರೊಂದಿಗೆ ಜನರು ಹಂಚಿಕೊಂಡ ನೈಜ ಕಥೆಗಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ. “ನೀವು ವಧು ಓಡಿಹೋಗುವ ವೀಡಿಯೋವನ್ನು ನೋಡಿರಬೇಕು. ನಾನು ಆ ವೀಡಿಯೋವನ್ನು ಮಾಡಿದ್ದೇನೆ ಮತ್ತು ಅದು ಇಷ್ಟೊಂದು ವೈರಲ್ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪ್ರಮುಖ ಸುದ್ದಿ ವಾಹಿನಿಗಳು ಸಂದರ್ಶನಗಳು ಮತ್ತು ಪಾಡ್‌ಕ್ಯಾಸ್ಟ್‌ಗಳಿಗಾಗಿ ನನ್ನನ್ನು ಕರೆಯುವ ಹಂತಕ್ಕೆ ಅದು ತಲುಪುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ವೀಡಿಯೋದ ಹಿಂದಿನ ಸತ್ಯವೇನು ಎಂದು ಅವರು ನನ್ನನ್ನು ಕೇಳುತ್ತಿದ್ದಾರೆ. ನಾನು ಸತ್ಯಕಥೆಯನ್ನು ಆಧರಿಸಿ, ಅವುಗಳ ಮೇಲೆ ವೀಡಿಯೋಗಳನ್ನು ಮಾಡುತ್ತೇನೆʼ ಎಂದು ಸ್ಪಷ್ಟ ಪಡಿಸಿದ್ದಾರೆ.
ನಾವು ಆರವ್ ಮಾವಿಯವರ ಇನ್‌ಸ್ಟಾಗ್ರಾಮ್ ಪೋಸ್ಟ್ ಗಳನ್ನು ಪರಿಶೀಲಿಸಿದಾಗ, ಅವರು ತಮ್ಮ ವೈಯಕ್ತಿಕ ಕಥೆಗಳನ್ನು ಕಳುಹಿಸಿದ ವ್ಯಕ್ತಿಗಳಿಂದ ಬಂದ ಸಂದೇಶಗಳ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವುಗಳನ್ನು ವೀಡಿಯೋ ಮಾಡುವಂತೆ ವಿನಂತಿಸಿದ್ದಾರೆ ಎಂದು ಗೊತ್ತಾಗಿದೆ.
ಅಷ್ಟೇ ಅಲ್ಲ ಈ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಇತರ ವೀಡಿಯೋಗಳಲ್ಲಿ, ವೈರಲ್ ಕ್ಲಿಪ್‌ನಲ್ಲಿ ಮಾಜಿ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡ ಅದೇ ವ್ಯಕ್ತಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇದರಿಂದ ಸಾಭೀತಾಗಿದ್ದೇನೆಂದರೆ. ವೈರಲ್ ಆದ ವೀಡಿಯೋ ಸ್ಕ್ರಿಪ್ಟೆಡ್ ಎನ್ನುವುದನ್ನು ಹೆಚ್ಚು ಖಚಿತಪಡಿಸುತ್ತದೆ.
ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.