ಫ್ಯಾಕ್ಟ್‌ಚೆಕ್: ಮತ ಕಳ್ಳತನವು ದೆಹಲಿ ಮಾಲಿನ್ಯಕ್ಕೆ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸುಳ್ಳು ಹೇಳಿಕೆ ಹಂಚಿಕೆ
ಮತ ಕಳ್ಳತನವು ದೆಹಲಿ ಮಾಲಿನ್ಯಕ್ಕೆ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸುಳ್ಳು ಹೇಳಿಕೆ ಹಂಚಿಕೆ
ಡಿಸೆಂಬರ್ 14 ರಂದು ಕಾಂಗ್ರೆಸ್ ಪಕ್ಷವು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಟೀಕಿಸಿತು. ಕೇಂದ್ರದಲ್ಲಿರುವ ಆರ್‌ಎಸ್‌ಎಸ್ ಮತ್ತು ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯುವುದಾಗಿ ಪ್ರತಿಜ್ಞೆ ಮಾಡಿತು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಹಲವು ನಾಯಕರು ಇದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರು ಬಿಜೆಪಿ ಮತ್ತು ಭಾರತೀಯ ಚುನಾವಣಾ ಆಯೋಗವನ್ನು ಟೀಕಿಸಿದರು, ಚುನಾವಣೆಯಲ್ಲಿ ಮತ ಕಳ್ಳತನವಾಗಿದೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ದೆಹಲಿಯಲ್ಲಿ ಮಾಲಿನ್ಯವು ಮತ ಕಳ್ಳತನದಿಂದ ಉಂಟಾಗಿದೆ ಎಂದು ಅವರು ಹೇಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ರಾಹುಲ್ ಗಾಂಧಿ ʼಈ ಮಾಲಿನ್ಯ ನೋಡಿ, ಇದೆಲ್ಲವೂ ಅವರು ಮತಗಳನ್ನು ಕದಿಯುತ್ತಿರುವುದರಿಂದ ನಡೆಯುತ್ತಿದೆʼ ಎಂದು ಹೇಳುವುದನ್ನು ನೋಡಬಹುದು
ಡಿಸಂಬರ್ 15, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಸಾಮಾನ್ಯ ಜ್ಞಾನವೂ ಇಲ್ಲದ ವಿರೋಧ ಪಕ್ಷ ನಾಯಕ ಎಂದೆನಿಸಿಕೊಂಡಿರುವ ಮಂದ ಬುದ್ಧಿಯ ಬಾಲಕ ರಾಹುಲ್ ಗಾಂಧಿಯ ಹೊಸ ಅನ್ವೇಷಣೆ. ಮತಗಳ್ಳತನದಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆಯಂತೆ! ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಇವರ ಮಾತುಗಳ ಮೇಲೆ ಇವರಿಗೇ ಲಂಗು-ಲಗಾಮಿಲ್ಲದಂತಾಗಿದೆ!ʼ ಎಂದು ಬರೆದು ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ವಿಡಿಯೋವಿನ ಪೋಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ದೆಹಲಿಯ ಮಾಲಿನ್ಯ ಸೇರಿದಂತೆ ದೇಶದ ಹಲವಾರು ಸಮಸ್ಯೆಗಳಿಗೆ ರಾಹುಲ್ ಬಿಜೆಪಿಯನ್ನು ದೂಷಿಸಿದ್ದಾರೆ. ಈ ವೀಡಿಯೊದಲ್ಲಿ ಮತ ಕಳ್ಳತನ ಮತ್ತು ಮಾಲಿನ್ಯದ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ʼವೋಟ್ ಚೋರಿ, ಗಡ್ಡಿ ಚೋಡ್ʼ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹಾಗೆ ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವಯ. ಹುಡುಕಾಟದಲ್ಲಿ ನಮಗೆ, ಡಿಸಂಬರ್ 15, 2025ರಂದು ಸುವರ್ಣ ನ್ಯೂಸ್ ವೆಬ್‌ಸೈಟ್‌ನಲ್ಲಿ ʼಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ 'ಮೋದಿ ತೇರಿ ಕಬರ್ ಖುದೇಗಿ' ಎಂಬ ಘೋಷಣೆ ಕೂಗಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘೋಷಣೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಮೊಘಲರಂತೆ ಅಂತ್ಯ ಕಾಣಲಿದೆ ಎಂದು ಹೇಳಿದೆ. ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಆತ್ಮವಿಶ್ವಾಸ ಕುಸಿದಿದೆ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕೈಗಳು ನಡುಗುತ್ತಿವೆ ಬಿಜೆಪಿಗೆ ತನ್ನ ಕಳ್ಳತನ ಬಹಿರಂಗವಾಗಿದೆ ಎಂದು ತಿಳಿದಿದೆ ಎಂದು ಅವರು ದೂರಿದ್ದಾರೆ. ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ಸುಖ್‌ಬೀರ್ ಸಿಂಗ್ ಮತ್ತು ವಿವೇಕ್ ಜೋಶಿ ಅವರು ಬಿಜೆಪಿ ಜೊತೆ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರಧಾನಿ ಅವರಿಗಾಗಿ ಕಾನೂನನ್ನು ಬದಲಾಯಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ನಾವು ಈ ಕಾನೂನನ್ನು ಬದಲಾಯಿಸುತ್ತೇವೆ ಮತ್ತು ಈ ಜನರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅವರು ಬಿಜೆಪಿಯವರಲ್ಲ, ಭಾರತದ ಚುನಾವಣಾ ಆಯುಕ್ತರು ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದು ರಾಹುಲ್ ದೂರಿದ್ದಾರೆʼ ಎಂದು ವರದಿಯಾಗಿದೆ
ಡಿಸಂಬರ್ 14 ,2025ರಂದು ʼಈಟಿವಿ ಭಾರತ್ʼ ತನ್ನ ವೆಬ್‌ಸೈಟ್‌ನಲ್ಲಿ ʼ'ಮತಗಳ್ಳತನ' ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪ್ರತಿಭಟನೆ: 'RSS-ಮೋದಿ ಸರ್ಕಾರ' ಕಿತ್ತೊಗೆಯಲು ಶಪಥʼ ಎಂಬ ಶೀರಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಪಕ್ಷದ ನಾಯಕ ರಾಹುಲ್ ಗಾಂಧಿ, ನಾವು ಸತ್ಯ ಮತ್ತು ಅಹಿಂಸೆಯ ಮೂಲಕ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತುಹಾಕಲು ಪ್ರತಿಜ್ಞೆ ಮಾಡಿದ್ದೇವೆ ಎಂದು ಹೇಳಿದರು. ನಮ್ಮ ಕಡೆ ಸತ್ಯ ಇದ್ದರೆ, ಅವರ ಕಡೆ ಸತ್ತ (ಅಧಿಕಾರ) ಇದೆ. ಇದನ್ನು ಬಳಸಿಕೊಂಡು ಮತಗಳ್ಳತನ ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಬಿಜೆಪಿ 10 ಸಾವಿರ ರೂಪಾಯಿಗಳನ್ನು ವರ್ಗಾಯಿಸಿದೆ. ಇದರ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವು ಬಿಜೆಪಿ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಇದು ಸತ್ಯ ಮತ್ತು ಅಸತ್ಯದ ನಡುವಿನ ಹೋರಾಟ ಎಂದು ಗುಡುಗಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಹೆಸರನ್ನು ಉಲ್ಲೇಖಿಸಿ, ಈ ಮೂವರೂ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ʼ ಎಂದು ವರದಿಯಾಗಿರುವುದನ್ನು ನೋಡಬಹುದು
ಡಿಸಂಬರ್ 16, 2025ರಂದು ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼಬಿಜೆಪಿ ಹೇಳಿಕೆ ತಿರುಚಿ ಅಪಪ್ರಚಾರ ಮಾಡುವುದರಲ್ಲಿ ನಿಮ್ಮನ್ನು ಮೀರಿಸುವವರು ಮತ್ತೊಬ್ಬರುಂಟೆ? ಖಂಡಿತಾ ಇಲ್ಲ. ನಿಮಗೆ ಎಂಥಹ ಬೌದ್ಧಿಕ ದಾರಿದ್ರ್ಯ ಬಂದಿದೆ ಎಂದು ನಿಮ್ಮ ಈ ಹೇಳಿಕೆ ತಿರುಚುವ ಪೋಸ್ಟ್ ಸಾಕ್ಷಿಯಾಗಿದೆ. ರಾಹುಲ್ ಗಾಂಧಿ ಅವರು ಮತಗಳ್ಳತನದಿಂದ ದೆಹಲಿಯ ವಾಯುಮಾಲೀನ್ಯ ಹೆಚ್ಚುತ್ತಿದೆ ಎಂದು ಹೇಳಿಲ್ಲ.ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿರುವ ನಿಮ್ಮ ಸರ್ಕಾರದ ಕೊಡುಗೆ ಏನು ಎಂದು ಹೇಳಿದ್ದಾರೆ. ನಾವು ಈ ಹೇಳಿಕೆಯ ಭಾಗವನ್ನು ಹಾಕುತ್ತಿದ್ದೇವೆ. ನಿಮ್ಮ ಕೇಂದ್ರ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದು ಮಾಡಿರುವ ಸಾಧನೆಯನ್ನು ರಾಹುಲ್ ಗಾಂಧಿ ವಿವರಿಸಿದ್ದಾರೆ. ನೀವೇ ಕೇಳಿ. ಯಥಾ ರಾಜ ತತಾ ಪ್ರಜಾ ಎಂಬಂತೆ, ಸುಳ್ಳಿನ ಸರದಾನನ್ನೇ ಶ್ರೇಷ್ಠ ಎಂದು ಬಿಂಬಿಸುವ ನಿಮ್ಮಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ನಿಮ್ಮ ಯೋಗ್ಯತೆ ರಾಜ್ಯದ ಜನರಿಗೆ ಗೊತ್ತಾಗಿದೆ. ಇನ್ನು ಈ ಪಿತೂರಿಗಳು ನಡೆಯುವುದಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ನವದೆಹಲಿಯ ರಾಮಲೀಲಾ ಮೈದಾನದಲ್ಲಿ 'ವೋಟ್ ಚೋರ್, ಗಡ್ಡಿ ಛೋಡ್' ರ್ಯಾಲಿಯ ಬಂದು ಕ್ಲಿಪ್‌ನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.
ಮತ್ತಷ್ಟು ಈ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಹುಡುಕಾಡಿದೆವು. ಹುಡುಕಾಟದಲ್ಲಿ ನಮಗೆ, ಡಿಸೆಂಬರ್ 14 ರಂದು ರಾಹುಲ್ ಗಾಂಧಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ʼLIVE: Vote Chor, Gaddi Chhod Maha Rally | Ramlila Maidan, Delhiʼ ಎಂಬ ಶೀರ್ಷಿಕೆಯ ಕಾರ್ಯಕ್ರಮದ ಎರಡು ಗಂಟೆಗಳಿಗೂ ಹೆಚ್ಚು ಅವಧಿಯ ವೀಡಿಯೊ ನೇರಪ್ರಸಾರವಾಗಿರುವ ವಿಡಿಯೋ ದೊರಕಿತು. ರ್ಯಾಲಿಯಲ್ಲಿ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ಮಾತನಾಡಿದರು, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೊನೆಯ ಭಾಷಣಕಾರರಾಗಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಖರ್ಗೆ, ಅವರು ಸಂವಿಧಾನವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಜನರು ಮತ್ತೆ ಬಡವರನ್ನು ಗುಲಾಮರನ್ನಾಗಿ ಮಾಡಲು ಬಯಸುತ್ತಾರೆ ಎಂದಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ (ಸಿಇಸಿ), ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿಂದಿನ ಕ್ರಮ ಮತ್ತು ಹಿಂದಿನ ಕಾನೂನು ಜಾರಿಗೆ ಬರುವ ಬಗ್ಗೆ ಎಚ್ಚರಿಕೆ ನೀಡಿರುವುದನ್ನು ನೋಡಬಹುದು. ಈ ಪೂರ್ತಿ ವಿಡಿಯೋದಲ್ಲಿ ರಾಹುಲ್‌ಗಾಂಧಿ ದೆಹಲಿಯ ಮಾಲಿನ್ಯ ಸೇರಿದಂತೆ ದೇಶದ ಹಲವಾರು ಸಮಸ್ಯೆಗಳಿಗೆ ರಾಹುಲ್ ಬಿಜೆಪಿಯನ್ನು ದೂಷಿಸಿದ್ದಾರೆ. ಈ ವೀಡಿಯೊದಲ್ಲಿ ಮತ ಕಳ್ಳತನ ಮತ್ತು ಮಾಲಿನ್ಯದ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ವೀಡಿಯೊ ಆರಂಭವಾದ ಒಂದು ಗಂಟೆ ಮೂವತ್ತೊಂಬತ್ತು ನಿಮಿಷಗಳ ನಂತರ, ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, "ಬಿಜೆಪಿ ಮತಗಳನ್ನು ಕದಿಯುವ ಮೂಲಕ ಈ ಸರ್ಕಾರವನ್ನು ನಡೆಸುತ್ತಿದ್ದಾರೆ, ಅವರು ಸಣ್ಣ ವ್ಯಾಪಾರಿಗಳನ್ನು ನಾಶಪಡಿಸಿದ್ದಾರೆ, ತಪ್ಪು ಜಿಎಸ್ಟಿಯನ್ನು ಜಾರಿಗೆ ತಂದಿದ್ದಾರೆ, ನೋಟು ರದ್ದತಿ ಮಾಡಿದ್ದಾರೆ, ನಿರುದ್ಯೋಗ ಉಂಟುಮಾಡಿದ್ದಾರೆ, ಈ ಮಾಲಿನ್ಯವನ್ನು ನೋಡಿ. ಇದೆಲ್ಲವೂ ಅವರು ಮತಗಳನ್ನು ಕದಿಯುತ್ತಿರುವುದರಿಂದ ನಡೆಯುತ್ತಿದೆ, ಏಕೆಂದರೆ ಅವರು ಮತಗಳನ್ನು ಕದಿಯುತ್ತಿಲ್ಲದಿದ್ದರೆ ಸಾರ್ವಜನಿಕರು ಐದು ನಿಮಿಷಗಳಲ್ಲಿ ಅವರನ್ನು ಸರ್ಕಾರದಿಂದ ತೆಗೆದುಹಾಕುತ್ತೀರಿ" ಎಂದು ಹೇಳುವುದನ್ನು ಕೇಳಬಹುದು. ರಾಹುಲ್ ಗಾಂಧಿಯವರು ಮತ ಕಳ್ಳತನ ನೇರವಾಗಿ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಿಲ್ಲ. ಬಿಜೆಪಿ ಅಧಿಕಾರ ಪಡೆಯಲು ಮತ ಕಳ್ಳತನದಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ ಮತ್ತು ಅವರು ಅಧಿಕಾರದಲ್ಲಿರುವುದರಿಂದ ಮಾಲಿನ್ಯ, ನಿರುದ್ಯೋಗ ಮತ್ತು ಸಣ್ಣ ವ್ಯಾಪಾರಿಗಳ ನಾಶ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡುವ ನೀತಿಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿರುವುದನ್ನು ನೋಡಬಹುದು.
ರಾಹುಲ್ ಗಾಂಧಿ ತಮ್ಮ ಪೂರ್ಣ ಭಾಷಣದಲ್ಲಿ, ನೋಟು ರದ್ದತಿ, ಜಿಎಸ್‌ಟಿ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸಾಮಾನ್ಯ ಜನರ ಜೀವನದ ಮೇಲೆ ಈ ನೀತಿಗಳ ವ್ಯಾಪಕ ಪರಿಣಾಮದಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ನಾಗರಿಕರು ಎದುರಿಸುತ್ತಿರುವ ಅನೇಕ ಬಗೆಹರಿಯದ ಸಮಸ್ಯೆಗಳಲ್ಲಿ ಮಾಲಿನ್ಯವೂ ಒಂದು ಎಂದು ಅವರು ಉಲ್ಲೇಖಿಸಿದ್ದರೂ, ಮತ ಕಳ್ಳತನವು ನೇರವಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಲಿಲ್ಲ ಅಥವಾ ಸೂಚಿಸಲಿಲ್ಲ. ದಾರಿತಪ್ಪಿಸುವ ವೀಡಿಯೊವು ಅವರ ಹೇಳಿಕೆಗಳನ್ನು ಆಯ್ದವಾಗಿ ಕತ್ತರಿಸಿ ಅವರು ಎಂದಿಗೂ ಮಾಡದ ನಿರೂಪಣೆಯನ್ನು ತಳ್ಳಲು ಸುಳ್ಳು ಶೀರ್ಷಿಕೆಯೊಂದಿಗೆ ಪ್ರಸ್ತುತಪಡಿಸುತ್ತದೆ. ಇಂತಹ ಸಂಪಾದಿತ ಕ್ಲಿಪ್‌ಗಳನ್ನು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲು ಮತ್ತು ರಾಜಕೀಯ ಹೇಳಿಕೆಗಳನ್ನು ವಿರೂಪಗೊಳಿಸಲು ಹೆಚ್ಚಾಗಿ ಬಳಸಲಾಗುತ್ತದೆ
ಇದರಿಂದ ಸಾಭೀತಾಗಿದ್ದೇನೆಂದರೆ, ರಾಹುಲ್ ಗಾಂಧಿ ವಾಯು ಮಾಲಿನ್ಯದಿಂದ ಮತಗಳ್ಳತನವಾಗುತ್ತಿದೆ ಎಂದು ಎಲ್ಲಿಯೂ ಹೇಳಿಲ್ಲ. ಕೆಲವು ಮಾತುಗಳನ್ನು ಸಂಪೂರ್ಣವಾದ ಸಂದರ್ಭವನ್ನು ತೋರಿಸದೆ, ಹೇಳಿಕೆಯನ್ನು ತಿರುಚಿ ಬೇರೆ ಅರ್ಥ ಬರುವ ಹಾಗೆ ಹಂಚಿಕೊಳ್ಳಲಾಗುತ್ತಿದೆ.