ಫ್ಯಾಕ್ಟ್ಚೆಕ್: ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ನಡೆಸಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಿಂಬಿಸಿದ್ದಾನೆ
ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ನಡೆಸಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಿಂಬಿಸಿದ್ದಾನೆ

Claim :
ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆFact :
ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ನಡೆಸಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಿಂಬಿಸಿಕೊಂಡಿದ್ದಾನೆ
ಏಪ್ರಿಲ್ 21, 2025ರಂದು ಎಕ್ಸ್ ಖಾತೆದಾರರೊಬ್ಬರು, ʼನನ್ನ ಮೇಲೆ ಹಲ್ಲೆಯಾಗಿದೆ, ಕನ್ನಡ ಭಾಷೆಯ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ಡಿಆರ್ಡಿಒ ಸ್ಟಿಕರ್ ನೋಡಿ ಹಲ್ಲೆ ಮಾಡಿದ್ದಾರೆ. ಇದು ಕರ್ನಾಟಕದ ಪರಿಸ್ಥಿತಿ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬಾತ ವಿಡಿಯೋ ಮೂಲಕ ಹೇಳಿಕೆ ನೀಡಿದ್ದ. ಈ ವೇಳೆ ಆತನ ಹಣೆಯಿಂದ ರಕ್ತ ಸೋರುತ್ತಿತ್ತು. ಇದನ್ನು ನೋಡಿದ ಹಲವು ಮಂದಿ, ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ನಕಾರಾತ್ಮಕವಾಗಿ, ಆಕ್ರೋಶಭರಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ʼIndian Air Force Wing Commander Bose and his wife, Squadron Leader Madhumita, were assaulted in Bengaluru while heading to the airport. #Bose #Madhumita. The attack was sparked by a group of men who noticed a DRDO sticker on their car and began verbally abusing them. #DRDO #RespectOurForces. Wing Commander Bose was struck with a key, resulting in head injuries, and he voiced frustration over the lack of police action. This incident underscores the growing disrespect towards military personnel in civilian life. We must unite to ensure our defense members receive the respect they deserve.ʼ ಎಂಬ ಶಿರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಅದರಲ್ಲೂ ಕನ್ನಡಿಗರನ್ನು ಕಂಡು ಸದಾ ಕಾಲ ಉರಿದು ಬೀಳುತ್ತಿದ್ದ ಹಿಂದಿ ಚಾನೆಲ್ಗಳು ತುಚ್ಚ ಮಟ್ಟದ ಬರಹಗಳನ್ನು ಹಂಚಿಕೊಂಡು ಕರ್ನಾಟಕದ ಬಗ್ಗೆ ವಿಷಕಾರಿದ್ದರು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಟ್ನದನು ನೀವಿಲ್ಲಿ ನೋಡಬಹುದು. (ಆರ್ಕೈವ್)
ನ್ಯೂಸ್ 18 ಕನ್ನಡ ತನ್ನ ವೆಬ್ಸೈಟ್ನಲ್ಲಿ ʼ ಶಾಂತಿ ನೆಲೆಸಿರೋ ಬೆಂಗಳೂರಿನಲ್ಲಿ ಏನಾಗ್ತಿದೆ? ಸಿಕ್ಕ ಸಿಕ್ಕವರ ಮೇಲೆ ಹಲ್ಲೆ! ವಿಂಗ್ ಕಮಾಂಡರ್ಗೆ ಆರ್ಮಿ ಸಪೋರ್ಟ್!ʼ ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ , ಬೆಂಗಳೂರು ಲಕ್ಷಾಂತರ ಮಂದಿ ತಮ್ಮ ಊರು ಬಿಟ್ಟು ಇಲ್ಲಿ ಬಂದು ಜೀವನ ಕಟ್ಟಿಕೊಂಡಿದ್ದಾರೆ. ಜಾತಿ, ಭೇದವಿಲ್ಲದೇ ಎಲ್ಲಾ ವರ್ಗದ ಜನರು ಜೀವನ ನಡೆಸುತ್ತಿರೋದು ಇದೇ ಬೆಂಗಳೂರಿನಲ್ಲಿ. ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡಿಗರಿಗಿಂದ ಬೇರೆ ಭಾಷೆಯ ಜನರೇ ಹೆಚ್ಚಾಗಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಬೆಂಗಳೂರಿಗೆ ಬಂದು ನೆಲಸಿದ ಮೇಲೆ ಕನ್ನಡ ಮಾತಾಡಲೇಬೇಕು. ಆದರೆ ಕನ್ನಡವಷ್ಟೇ ಮಾತನಾಡಬೇಕು ಅಂತ ಯಾರನ್ನೂ ಫೋರ್ಸ್ ಮಾಡೋಕೆ ಸಾಧ್ಯವಿಲ್ಲ. ಕನ್ನಡದ ಬಗ್ಗೆ ಅವರಿಗೆ ಗೌರವವಿರಬೇಕು. ಬೆಂಗಳೂರಿನಂತಹ ನಗರದಲ್ಲಿ ಇತ್ತೀಚೆಗೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗ್ತಿದೆ. ಇವತ್ತು ಕೂಡ ವಿಂಗ್ ಕಮಾಂಡರ್ ಒಬ್ಬರು ರಕ್ತದ ಮಡುವಿನಲ್ಲೇ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆʼ ಎಂದು ವರದಿಯಾಗಿದೆ.
ನ್ಯೂಸ್ 1st ಕನ್ನಡ ವೆಬ್ಸೈಟ್ನಲ್ಲಿ ʼಬೆಂಗಳೂರಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆ; ಮುಖ ಮೂತಿ ನೋಡದೆ ಗುದ್ದಿದ ಬೈಕ್ ಸವಾರʼ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಮಾಡಿದ್ದಾರೆ. ವರದಿಯಲ್ಲಿ ʼCV ರಾಮನ್ ನಗರದಲ್ಲಿ ವಾಸವಾಗಿದ್ದ ದಂಪತಿ ಇಂದು ಏರ್ಪೋರ್ಟ್ ಹೋಗುತ್ತಿದ್ದರು. ಆಗ ದಿಢೀರ್ ಅಂತ ಹಿಂದೆಯಿಂದ ಬಂದ ಬೈಕ್ ಸವಾರ ವಿಂಗ್ ಕಮಾಂಡರ್ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾನಂತೆ. ಕಾರ್ ಮುಂದೆ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕಾರ್ ಮೇಲೆ DRDO ಸ್ಟಿಕ್ಕರ್ ನೋಡಿ ಕೋಪಕೊಂಡ ಬೈಕ್ ಸವಾರ ಕೀ ಕಿತ್ತುಕೊಂಡು ವಿಂಗ್ ಕಮಾಂಡರ್ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದಾನಂತೆ. ಇದಾದ ಬಳಿಕ ಒಂದಷ್ಟು ಜನ ಬಂದು ಮತ್ತೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ರಕ್ತ ಸುರಿಯುವಂತೆ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಸ್ಥಿತಿಯಲ್ಲಿ ವಿಂಗ್ ಕಮಾಂಡರ್ ರಕ್ತ ಸುರಿಯುತ್ತಿದ್ದರೂ ಅದರಲ್ಲೇ ವಿಡಿಯೋ ಮಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆʼ ಎಂದು ವರದಿಯಾಗಿರುವುದನ್ನು ನಾವಿಲ್ಲಿ ನೋಡಬಹುದು.
ಸುವರ್ಣ ನ್ಯೂಸ್ ಕನ್ನಡ ವೆಬ್ಸೈಟ್ನಲ್ಲಿ ʼಬೆಂಗಳೂರಿನಲ್ಲಿ ಲಾ & ಆರ್ಡರ್ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್ ಕಮಾಂಡರ್ ಮೇಲೆ ಬೈಕ್ ಸವಾರನ ಹಲ್ಲೆ!ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಬೆಂಗಳೂರಿನಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಅವರ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ್ದಾನೆ. ಏರ್ಪೋರ್ಟ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾರ್ ಡೋರ್ ಬೈಕ್ಗೆ ತಾಕಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆʼ ಎಂದು ವರದಿ ಮಾಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ನಡೆಸಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಿಂಬಿಸಿಕೊಂಡಿದ್ದಾನೆ. ಆದರೆ ಈತನೇ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದು, ಆದರ ವಿಡಿಯೋಗಳು ಸಾಮಾಜಿಕ ಜಾಲತಾಣ ವೈರಲ್ ಆಗಿದೆ.
ಈ ವೇಳೆ ಮಾಧ್ಯಮಗಳಲ್ಲಿ ಕನ್ನಡಿಗನಿಂದ ಭಾಷೆಯ ವಿಚಾರಕ್ಕೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬುವವರ ಮೇಲೆ ಹಲ್ಲೆಯಾಗಿದೆ, ಈ ಕುರಿತು ಶಿಲಾದಿತ್ಯ ಬೋಸ್ ಅವರೇ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ ಎಂದು ವರದಿಗಳು ಬರಲು ಆರಂಭವಾದವು. ಇನ್ನು ಈ ಶಿಲಾದಿತ್ಯ ಬೋಸ್ ಕೂಡ ಕನ್ನಡ ಭಾಷೆಯ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ಡಿಆರ್ಡಿಒ ಸ್ಟಿಕರ್ ನೋಡಿ ಹಲ್ಲೆ ಮಾಡಿದ್ದಾರೆ. ಇದು ಕರ್ನಾಟಕದ ಪರಿಸ್ಥಿತಿ ಎಂದು ಹೇಳಿರುವ ವಿಡಿಯೋವನ್ನು ಪರಿಶೀಲನೆ ಕೂಡ ನಡೆಸದೆ ಕನ್ನಡದ ಹಲವು ಮಾಧ್ಯಮಗಳು ವರದಿ ಮಾಡಿದ್ದವು, ಆದರೆ ಕೆಲ ಹೊತ್ತಿನಲ್ಲೇ ಹಲವು ಜನ ಕನ್ನಡ ಪರ ಹೋರಾಟಗಾರರು, ಸಾಮಾಜಿಕ ಜಾಲತಾಣದ ಬಳಕೆದಾರರು ವಿಂಗ್ ಕಮಾಂಡರ್ ಹಲ್ಲೆಗೊಳಗಾಗಿಲ್ಲ.. ಆತನೇ ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹಲವು ಸಿಸಿಟಿವಿ ವಿಡಿಯೋಗಳನ್ನು ಹಂಚಿಕೊಂಡರು. ರೂಪೇಶ್ ರಾಜಣ್ಣ ಎಂಬ ಎಕ್ಸ್ ಖಾತೆದಾರರೊಬ್ಬರು ʼವಿಡಿಯೋ ಗಮನಿಸಿ. ಎಂತಹ ಕ್ರೂರಿ ಇವನು ಸ್ವಲ್ಪ ಯಾಮಾರಿದ್ರು ಆ ಕನ್ನಡಿಗನ ಪ್ರಾಣ ತೆಗೆದುಬಿಡ್ತಿದ್ದ. ಕತ್ತನ್ನು ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನ ಮಾಡಿದ್ದಾನೆ. @BlrCityPolice ಕೂಡಲೇ ಇವನನ್ನು ಭಂದಿಸಿ ಜೈಲಿಗೆ ಅಟ್ಟಬೇಕು. ಇವನ ದೌರ್ಜನ್ಯ ಸಹಿಸಲು ಆಗಲ್ಲʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಿಜವಾದ ಸಂತ್ರಸ್ತ ಬೈಕ್ ಚಾಲಕ ವಿಕಾಸ್ ಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ, ಬಂಧಿಸಿದ್ದರು. ಇದರಿಂದ ಆಕ್ರೋಶಗೊಂಡ ಸಾಕಷ್ಟು ಮಂದಿ ಎಕ್ಸ್ ಬಳಕೆದಾರರು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು, ಇನ್ನು ಕೆಲ ಕನ್ನಡ ಪರ ಹೋರಾಟಗಾರರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಕೆಲವೇ ಗಂಟೆಗಳ ಮುನ್ನ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಪ್ರಾಥಮಿಕ ತನಿಖಾ ವರದಿಯನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಪ್ರಿಲ್ 22, 2025ರಂದು ಎಕ್ಸ್ ಖಾತೆದಾರರೊಬ್ಬರು ʼಕೊನೆಗೂ ಸುಳ್ಳನ ವಿರುದ್ಧ ಎಫ್ಐಆರ್ ದಾಖಲು ನೆನ್ನೆ ಇಡೀ ಒಕ್ಕೂಟ ಭಾರತ ಕನ್ನಡಿಗರ ಮೇಲೆ ಕೆಟ್ಟ ಅಭಿಪ್ರಾಯ ಹೊಂದುವಂತೆ ಸುಳ್ಳು ಆರೋಪ ಮಾಡಿ FIR ಮಾಡಿಸಿದ್ದ. ವಿಂಗ್ ಕಮಾಂಡರ್ ವಿರುದ್ಧ ತಡರಾತ್ರಿಯನ್ನೂ ಲೆಕ್ಕಿಸದೆ ಬಯ್ಯಪ್ಪನಹಳ್ಳಿ ಠಾಣೆಗೆ ತೆರಳಿ ಹೋರಾಡಿ FIR ಮಾಡಿಸಿ ಪಾಠ ಕಲಿಸಿದ @rajanna_rupesh ಹಾಗೂ @ajavgal ಎಲ್ಲರಿಗೂ ಧನ್ಯವಾದಗಳುʼ ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವಾಸ್ತವವಾಗಿ ನಡೆದದ್ದು ಏನೆಂದರೆ, ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಿಕಾಸ್ ಕುಮಾರ್ ಎಂಬುವವರು ಬೈಕ್ನಲ್ಲಿ ಕಾರ್ ಒಂದನ್ನು ಓವರ್ಟೇಕ್ ಮಾಡಿದ್ದಕ್ಕೆ, ಕಾರ್ನಲ್ಲಿದ್ದ ವಿಂಗ್ ಕಮಾಂಡರ್ ಪತ್ನಿ ಬೈದು ಕೂಗಾಡಿದ್ದಾಳೆ. ಕನ್ನಡಿಗ ವಿಕಾಸ್ ಈ ಬಗ್ಗೆ ಮಾತನಾಡಲು ಬೈಕ್ ಸೈಡಿಗೆ ಹಾಕಿದ್ದಾನೆ. ಆಗ ಏಕಾಏಕಿ ವಿಂಗ್ ಕಮಾಂಡರ್ ಕನ್ನಡಿಗನ ಮೇಲೆ ಹಲ್ಲೆ ಮಾಡಿ ಬೈಕ್ ಬೀಳಿಸಿದ್ದಾನೆ. ಆಗ ಕನ್ನಡಿಗ ಏಕೆ ಹೊಡಿತ್ತೀರಿ ಸರ್ ಎಂದು ಮಾತನಾಡಿರುವುದು ಕೇಳಿಸಿಕೊಳ್ಳಬಹುದು. ಜೊತೆಗೆ ಅಲ್ಲಿದ್ದವರಿಗೆ ಸರ್ ನಮ್ಮ ತಾಯಿ ಆಣೆಗೂ ನಾನು ತಪ್ಪು ಮಾಡಿಲ್ಲ, ಮಾತನಾಡಲು ಬಂದರೆ ಹಲ್ಲೆ ಮಾಡಿದ್ದಾರೆ ಎಂದು ಹೇಳುವಾಗಲೇ ವಿಂಗ್ ಕಮಾಂಡರ್ ಮತ್ತೆ ಹಲ್ಲೆ ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅಲ್ಲಿಗೆ ಮೊದಲು ಹಲ್ಲೆ ಮಾಡಿದ್ದು ವಿಂಗ್ ಕಮಾಂಡರ್ ಅಂತ ಇಲ್ಲಿ ಸ್ಪಷ್ಟವಾಗಿದೆ. ಆನಂತರ ಕನ್ನಡ ಮಾತನಾಡದ ಕಾರಣಕ್ಕೆ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಾಟಕ ಸೃಷ್ಟಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ನಂತರ ಪೊಲೀಸರು ವಿಕಾಸ್ ಕುಮಾರ್ ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ನಿಜವಾದ ಆರೋಪಿ ಶಿಲಾದಿತ್ಯ ಬೋಸ್ ತಲೆ ಮರೆಸಿಕೊಂಡಿದ್ದಾನೆ. ಆತ ಪಶ್ಚಿಮ ಬಂಗಾಳದಲ್ಲಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಏಪ್ರಿಲ್ 21, 2025ರಂದು ಎಕ್ಸ್ ಖಾತೆದಾರರೊಬ್ಬರು ʼVikas Kumar who is seen getting beaten in the video gets arrested and the IAF officer seen in the video brutally beating the Vikas isn't. Because the guy who made the video first playing the victim card and the media picked up his story as he is IAF Wing Commanderʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ನಡೆಸಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಿಂಬಿಸಿಕೊಂಡಿದ್ದಾನೆ. ಆದರೆ ಈತನೇ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದು, ಆದರ ವಿಡಿಯೋಗಳು ಸಾಮಾಜಿಕ ಜಾಲತಾಣ ವೈರಲ್ ಆಗಿದೆ.

