ಫ್ಯಾಕ್ಟ್ಚೆಕ್: ಕಾರವಾರದಲ್ಲಿ ವೃದ್ದನ ಮೇಲೆ ಹಸುಗಳು ದಾಳಿ ಎಂದು ನಾಸಿಕ್ ಜಿಲ್ಲೆಗೆ ಸಂಬಂಧಿಸಿದ ವಿಡಿಯೋ ಹಂಚಿಕೆ
ಕಾರವಾರದಲ್ಲಿ ವೃದ್ದನ ಮೇಲೆ ಹಸುಗಳು ದಾಳಿ ಎಂದು ನಾಸಿಕ್ ಜಿಲ್ಲೆಗೆ ಸಂಬಂಧಿಸಿದ ವಿಡಿಯೋ ಹಂಚಿಕೆ

Claim :
ಕಾರವಾರದಲ್ಲಿ 85 ವರ್ಷದ ವೃದ್ದನ ಮೇಲೆ ಹಸುಗಳು ದಾಳಿ ಮಾಡಿ ಕೊಂದಿದೆFact :
ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಸುಗಳು ದಾಳಿ ಮಾಡಿದ್ದ ವಿಡಿಯೋವದು
ನಗರದ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚುತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ದೊಡ್ಡ ಮಟ್ಟದ ಸಮಸ್ಯೆಯನ್ನು ತಂದೊಡ್ಡಿದೆ. ದನಗಳು ಬೆಳಗ್ಗಿನಿಂದ ಸಂಜೆವರೆಗೆ ನಗರದ ಮುಖ್ಯ ರಸ್ತೆಗಳಲ್ಲಿ ಆಹಾರ ಅರಸುತ್ತ ಸಂಚರಿಸುತ್ತವೆ. ಇದರಿಂದ ಕೆಲವು ಸಂದರ್ಭ ದನಗಳ ಸಮೂಹ ಸಾಲಾಗಿ ಮುಖ್ಯರಸ್ತೆಯನ್ನು ದಾಟುವುದರಿಂದ ಅಥವಾ ಕೆಲವು ದನಗಳು ರಸ್ತೆ ನಡುವೆ ನಿಂತುಕೊಳ್ಳುವುದರಿಂದ ಹಾಗೂ ರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುವುದರಿಂದ ವಾಹನ ಸವಾರರಿಗೆ ಇವುಗಳನ್ನು ದಾಟಿ ಮುಂದೆ ಸಾಗುವುದು ಸವಾಲಿನ ಕೆಲಸವಾಗಿದೆ. ಇನ್ನು ಕೆಲವು ಸಂದರ್ಭದಲ್ಲಿ ಪರಸ್ಪರ ದನಗಳು ಗುದ್ದಿಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಎರಗುವ ಸನ್ನಿವೇಶವೂ ಸೃಷ್ಟಿಯಾಗುತ್ತಿದೆ.
ಇತ್ತೀಚಿಗೆ ವ್ಯಕ್ತಿಯೊಬ್ಬನ ಮೇಲೆ ಹಸುಗಳು ದಾಳಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ಕಾರವಾರದಲ್ಲಿ, ತಿರುಪತಿಯಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಜೂನ್ 30, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಬೀದಿ ದನಗಳಿಂದ ಹುಷಾರಾಗಿರಿ. ಕಾರವಾರದಲ್ಲಿ ನಿನ್ನೆ ನಡೆದ ಘಟನೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
onlyhumanityisreligion ಎಂಬ ವೆಬ್ಸೈಟ್ನಲ್ಲಿ ʼಬೀದಿ ದನಗಳಿಂದ ಹುಷಾರಾಗಿರಿ ಕಾರವಾರದಲ್ಲಿ ನಿನ್ನೆ ನಡೆದ ಘಟನೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಸರ್ಕಾರದ ಗೋ ಶಾಲೆಗಳ ಸ್ಥಿತಿ ಏನಾಗಿದೆ? ಇಂತಹ ಬೀಡಾಡಿ ದನ, ಹಸು, ಹೋರಿಗಳನ್ನು ಅಲ್ಲಿ ಸಾಕಾಗಬಹುದು ಅಲ್ಲವೇ? ಎಂಬ ಕ್ಯಾಪ್ಷನ್ನ್ನೀಡಿ ಹಂಚಿಕೊಂಡಿದ್ದಾರೆ. ಇದಕ್ಕೆ ವಿಡಿಯೋವನ್ನು ಸಹ ಹೊಂದಿಸಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.
ಇದೇ ವಿಡಿಯೋವನ್ನು ಇನ್ನು ಕೆಲವರು ಈ ಘಟನೆ ತಿರುಪತಿಯಲ್ಲಿ ನಡೆದಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.
ಜೂನ್ 29, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼతిరుపతి: అవులే కదా అని ఏ మాత్రం అజాగ్రత్తగా ఉండకండి ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼತಿರುಪತಿ: ಹಸುಗಳೇ ಅಲ್ವಾ ಎಂದು ಅಜಾಗರೂಕರಾಗಿರಬೇಡಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 27, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼఈరోజు తిరుపతిలో జరిగిన సంఘటనʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 28, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼఈరోజు తిరుపతిలో జరిగిన సంఘటన. ఆవులే కదా అని ఏమాత్రం ఆజాగ్రత్తగా ఉండకండిʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇಂದು ತಿರುಪತಿಯಲ್ಲಿ ನಡೆದ ಘಟನೆ. ಹಸು ಎಂದು ಭಾವಿಸಿ ಹೆಚ್ಚು ಜಾಗರೂಕರಾಗಿರಬೇಡಿʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ ನಡೆದ ಘಟನೆಯದು.
ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜೂನ್ 24, 2025ರಂದು ಮರಾಠಿ ಮಾಧ್ಯಮ ಸಂಸ್ಥೆ ‘ಲೋಕಸತ್ತ‘ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ವರದಿ ಮಾಡುವ ಲೇಖನ ಕಂಡುಬಂದಿದೆ. ಈ ಲೇಖನದ ಪ್ರಕಾರ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ 85 ವರ್ಷದ ವ್ಯಕ್ತಿಯ ಮೇಲೆ ಹಸುಗಳು ದಾಳಿ ಮಾಡಿ ಕೊಂದ ಘಟನೆಯನ್ನು ಈ ವೀಡಿಯೊ ತೋರಿಸುತ್ತದೆ.
ಇದರ ಆಧಾರದ ಮೇಲೆ, ಸೂಕ್ತ ಕೀವರ್ಡ್ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಟ ನಡೆಸಿದಾಗ ಈ ಘಟನೆಗೆ ಸಂಬಂಧಿಸಿದ ಹಲವಾರು ಸುದ್ದಿ ಲೇಖನಗಳು ಕಂಡುಬಂದಿವೆ. ಈ ಲೇಖನಗಳ ಪ್ರಕಾರ, ಈ ಘಟನೆ ಜೂನ್ 23, 2025 ರಂದು ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದ ಓಲ್ಡ್ ಓತೂರ್ ರಸ್ತೆಯಲ್ಲಿರುವ ಕಲ್ವಾನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ಮುಂದೆ ನಡೆದಿದೆ. ಕಲ್ವಾನ್ನ ಛತ್ರಪತಿ ಶಿವಾಜಿ ನಗರದ ನಿವಾಸಿ ಭಾಲಚಂದ್ರ ರಘುನಾಥ್ ಮಲ್ಪುರೆ (85) ತನ್ನ ದ್ವಿಚಕ್ರ ವಾಹನದಿಂದ ಇಳಿದ ತಕ್ಷಣ, ಕೋಪಗೊಂಡ ಎರಡು ಹಸುಗಳು ಇದ್ದಕ್ಕಿದ್ದಂತೆ ಅವರ ಮೇಲೆ ದಾಳಿ ಮಾಡಿ ನೆಲದ ಮೇಲೆ ಎಸೆದು, ಕೊಂಬುಗಳಿಂದ ತಿವಿದು, ಕಾಲಿನಿಂದ ಒದ್ದವು. ಹತ್ತಿರದ ಜನರು ಕೋಲುಗಳು ಮತ್ತು ಕಲ್ಲುಗಳಿಂದ ಹಸುಗಳನ್ನು ಓಡಿಸಲು ಪ್ರಯತ್ನಿಸಿದರು, ಆದರೆ ಹಸುಗಳು ಅವನ ಮೇಲೆ ದಾಳಿ ಮಾಡುತ್ತಲೇ ಇದ್ದವು. ಕೊನೆಗೆ, ಅವರೆಲ್ಲರೂ ಹೇಗೋ ವೃದ್ಧನನ್ನು ಪಕ್ಕಕ್ಕೆ ಎಳೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಹಸುಗಳು ಅವನನ್ನು ಬಿಡುವ ಬದಲು, ಅವುಗಳ ಮೇಲೆ ಧಾವಿಸಿ ಮತ್ತಷ್ಟು ದಾಳಿ ಮಾಡಲು ಪ್ರಯತ್ನಿಸಿದವು. ಈ ಅನುಕ್ರಮದಲ್ಲಿ, ದಾರಿಯಲ್ಲಿ ಬಂದ ಇನ್ನೊಬ್ಬ ವ್ಯಕ್ತಿಯ ಮೇಲೂ ಅವರು ದಾಳಿ ಮಾಡಿದರು. ಕೊನೆಗೆ, ಅವರೆಲ್ಲರೂ ದೊಡ್ಡ ಕೋಲುಗಳಿಂದ ಅವುಗಳನ್ನು ಓಡಿಸಿದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಲ್ಪುರೆ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಕಲ್ವಾನ್ ಗ್ರಾಮೀಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದರು. ಮಾಲ್ಪುರೆ ಅವರನ್ನು ರಕ್ಷಿಸಲು ಯತ್ನಿಸಿದ ಅಬಾ ಮೋರೆ ಎಂಬ ವ್ಯಕ್ತಿ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜೂನ್ 24, 2025ರಂದು ʼದಿ ಫ್ರೀ ಪ್ರೆಸ್ ಜರ್ನಲ್ʼ ಎಂಬ ವೆಬ್ಸೈಟ್ನಲ್ಲಿ ʼVIDEO: 85-Year-Old Man Gored, Trampled To Death By Stray Cattle In Nashik's Kalwanʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಪ್ರಕಾರ, ಕಲ್ವಾನ್ ನಗರದ ಓಲ್ಡ್ ಓತೂರ್ ರಸ್ತೆಯಲ್ಲಿರುವ ಕಲ್ವಾನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿರುವ ಶ್ರೀ ಸೈಬರ್ ಕೆಫೆ ಬಳಿ ಎರಡು ಬೀದಿ ಹಸುಗಳು ಡಿಕ್ಕಿ ಹೊಡೆಯುತ್ತಿರುವುದು ಕಂಡುಬಂದಿದೆ. ಆ ಸಮಯದಲ್ಲಿ, ಕಲ್ವಾನ್ನ ಛತ್ರಪತಿ ಶಿವಾಜಿ ನಗರದ ನಿವಾಸಿ ಭಾಲಚಂದ್ರ ರಘುನಾಥ್ ಮಲ್ಪುರೆ (85) ದ್ವಿಚಕ್ರ ವಾಹನದ ಹಿಂಬದಿ ಸವಾರಿ ಮಾಡುತ್ತಿದ್ದರು. ಅವರು ಬೈಕ್ನಿಂದ ಇಳಿಯುತ್ತಿದ್ದಂತೆ, ಹಸುಗಳು ತಮ್ಮ ಕೊಂಬುಗಳಿಂದ ಮಲ್ಪುರೆಯನ್ನು ಎತ್ತಿ ರಸ್ತೆಯಲ್ಲಿ ದಾಳಿ ಮಾಡಿದವು. ಪಕ್ಕದಲ್ಲಿದ್ದವರು ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ಹಸುಗಳು ಅವರ ಮೇಲೆ ದಾಳಿ ಮಾಡುತ್ತಲೇ ಇದ್ದವು. ಗಂಭೀರವಾಗಿ ಗಾಯಗೊಂಡಿದ್ದ ಮಾಲ್ಪುರೆ ಅವರನ್ನು ಸ್ಥಳೀಯ ನಿವಾಸಿಗಳು ಕಲ್ವಾನ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಈ ಘಟನೆಯು ಕಲ್ವಾನ್ ನಗರದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಬೀದಿ ದನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳು ಬಲಗೊಳ್ಳುತ್ತಿವೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಆಂಧ್ರಜ್ಯೋತಿ ವೆಬ್ಸೈಟ್ನಲ್ಲಿ ಜೂನ್ 27, 2025ರಂದು ʼఅయ్యో.. ఎంత ఘోరం.. ఈ ఆవులు ఏం చేశాయో చూడండిʼ ಹೆಡ್ಲೈನ್ನೊಂಡಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ನಗರದಲ್ಲಿ ಭಾಲಚಂದ್ರ ಮಾಲ್ಪುರೆ ಎಂಬ ವೃದ್ಧ ಬೈಕ್ನಲ್ಲಿ ಬಂದು ರಸ್ತೆ ಬದಿಗೆ ಇಳಿದಾಗ ಆ ಸಮಯದಲ್ಲಿ ಅಲ್ಲೇ ಇದ್ದ ಎರಡು ಹಸುಗಳು ಆ ವೃದ್ಧನ ಮೇಲೆ ದಾಳಿ ಮಾಡಿದವು. ದಾರಿಯಲ್ಲಿ ಬಂದ ಇನ್ನೊಬ್ಬ ವ್ಯಕ್ತಿಯ ಮೇಲೂ ದಾಳಿ ಮಾಡಿತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಾಲ್ಪುರೆಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತುʼ ಎಂದು ವರದಿ ಮಾಡಲಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಸುಗಳು ದಾಳಿ ಮಾಡಿ ಕೊಂದ ಘಟನೆ ನಡೆದದ್ದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ ಕರ್ನಾಟಕದ ಕಾರವಾರದಲ್ಲೋ ಅಥವಾ ಆಂಧ್ರದಲ್ಲಿರುವ ತಿರುಪತಿಯಲ್ಲೋ ನಡೆದಿಲ್ಲ.

