ಫ್ಯಾಕ್ಟ್ಚೆಕ್: ಅಹಮದಾಬಾದ್ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಹಂಚಿಕೆ
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಹಂಚಿಕೆ

Claim :
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಬಂಧಿಸಲಾಗಿದೆFact :
ವಿಶ್ವಾಸ್ ಕುಮಾ ರಮೇಶ್ ಅವರನ್ನು ಯಾವುದೇ ಪ್ರಕರಣದಲ್ಲೂ ಬಂಧಿಸಲಾಗಿಲ್ಲ
ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾಗಿದ್ದು ಇಡೀ ರಾಷ್ಟ್ರವೇ ಕಂಬನಿ ಮಿಡಿದಿತ್ತು. ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ AI171 ವಿಮಾನ, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ವಿಮಾನವು ಮಧ್ಯಾಹ್ನ 1:40 ಕ್ಕೆ ಮೇಘನಿ ನಗರ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜು ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 242 ಜನರ ಪೈಕಿ 241 ಜನರು ಸಾವನ್ನಪ್ಪಿದರು. ಅವರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬರು ಕೆನಡಾ ಪ್ರಜೆಯಿದ್ದರು. ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿರುವ ವಿಶ್ವಾಸ್ಕುಮಾರ್ ರಮೇಶ್ ಬದುಕುಳಿದಿದ್ದರು. ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದ ಕಪ್ಪು ಪೆಟ್ಟಿಗೆ ಹಾನಿಗೊಳಗಾಗಿದ್ದು, ದತ್ತಾಂಶ ಹೊರತೆಗೆಯುವ ಪ್ರಕ್ರಿಯೆಯನ್ನು ಮುಂದುವರಿಸಲು ಅದನ್ನು ಅಮೆರಿಕಕ್ಕೆ ಕಳುಹಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಈ ವಿಚಾರದಲ್ಲಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದೂ ಸ್ಪಷ್ಟಪಡಿಸಲಾಗಿದೆ. ಭಾರತ ಮೂಲದವರಾದರೂ ವಿಶ್ವಾಸ್ ಕುಮಾರ್ ರಮೇಶ್ ಬ್ರಿಟಿಷ್ ಪ್ರಜೆಯಾಗಿದ್ದು, ಲಂಡನ್ನಿಂದ ಕುಟುಂಬವನ್ನು ನೋಡಲು ಗುಜರಾತ್ಗೆ ಬಂದಿದ್ದರು. ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ವಾಪಸ್ ಲಂಡನ್ಗೆ ತೆರಳುತ್ತಿದ್ದರು. ಎ 11 ಸೀಟ್ನಲ್ಲಿ ಅವರು ಕುಳಿತು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಪಾರಾಗಿದ್ದು, ಅವರ ಎದೆ, ಕಣ್ಣು ಮತ್ತು ಕಾಲುಗಳಿಗೆ ಗಾಯಗಳಾಗಿವೆ.
ಇದರ ನಡುವೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ವಾಸ್ ಕುಮಾರ್ ರಮೇಶ್ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಏನಿದೆಯೆಂದರೆ ʼಏರ್ ಇಂಡಿಯಾ ವಿಮಾನ ಅಪಘಾತದ ಒಂದು ವಾರದ ನಂತರ, ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ರಮೇಶ್ ಕುಮಾರ್ ಅವರನ್ನು ದುರದೃಷ್ಟಕರ ವಿಮಾನದಲ್ಲಿದ್ದರೆಂದು ಸುಳ್ಳು ಹೇಳಿದ್ದಕ್ಕಾಗಿ ಅವರ ಮನೆಯಲ್ಲಿ ಬಂಧಿಸಲಾಗಿದೆʼ ಎಂದು ಹೇಳುವ ಆಡಿಯೋದೊಂದಿಗಿರುವ ವಿಡಯೋವನ್ನು ನಾವು ನೋಡಬಹುದು.
ಜೂನ್ 19,2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ಆಡಿಯೋದೊಂದಿಗಿರುವ ವಿಡಿಯೋವನ್ನು ಹಂಚಿಕೊಂಡು ʼTruth revealed: Survivor of Air India crash arrested for falsely claiming to be on board #ahamedabad #AirIndia #787dreamliner #aviation #crashedʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಹಮದಾಬಾದ್ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್ ಕುಮಾರ್ ರಮೇಶ್ ಅವರನ್ನು ಘಟನೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಬಂಧಿಸಲಾಗಿದೆ.ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 18, 2025ರಂದು ಮತ್ತೊಂದು ಇನ್ಸ್ಟಾಗ್ರಾಮ್ ಖಾತೆದಾರರೂ ಸಹ ವೈರಲ್ ಆ ವಿಡಿಯೋವನ್ನು ʼಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಏರ್ ಇಂಡಿಯಾದ AI171 ವಿಮಾನ ಬೋಯಿಂಗ್ 787 -8 ಡ್ರೀಮ್ಲೈನರ್ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ 242 ಜನರಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ವಿಮಾನದಲ್ಲಿ ಇರುವುದಾಗಿ ಸುಳ್ಳು ಹೇಳಿದ ನಂತರ ಅವರ ಮನೆಯಲ್ಲಿ ಬಂಧಿಸಲಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 20, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼTruth revealed: Survivor of Air India crash arrested for falsely claiming to be on board #AirIndiaʼ ಎಂದು ಬರೆದು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸತ್ಯ ಬಹಿರಂಗ: ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯನ್ನು #ಅಹಮದಾಬಾದ್ ವಿಮಾನದಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡಿದ್ದಕ್ಕಾಗಿ ಬಂಧಿಸಲಾಗಿದೆʼ ಎಂಬ ಶೀರ್ಷಿಕೆಯನ್ನಿಡಿರುವುದು ಕಾಣಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 16, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ಖಾತೆದಾರರೂ ಸಹ ವೈರಲ್ ಆ ವಿಡಿಯೋವನ್ನು ʼಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಬಂಧಿಸಲಾಗಿದೆ!!! ಘಟನೆಯ 48 ಗಂಟೆಗಳ ನಂತರ ಅವರನ್ನು ಅವರ ಮನೆಯಲ್ಲಿ ಬಂಧಿಸಲಾಯಿತುʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವಿಶ್ವಾಸ್ ಕುಮಾರ್ ರಮೇಶ್ರನ್ನು ಯಾವುದೇ ಪ್ರಕರಣದಲ್ಲೂ ಬಂಧಿಸಲಾಗಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವಿಶ್ವಾಸ್ ಕುಮಾರ್ ರಮೇಶ್ರನ್ನು ಬಂಧಿಸಲಾಗಿದೆ ಎಂದು ಯಾವುದೇ ವರದಿಯೂ ಕಂಡುಬಂದಿಲ್ಲ. ನಂತರ ನಾವು ಗುಜರಾತ್ ಡಿಜಿಪಿ , ಗುಜರಾತ್ ಪೊಲೀಸ್ ಮತ್ತು ಅಹಮದಾಬಾದ್ ಪೊಲೀಸರ ಅಧಿಕೃತ ಎಕ್ಸ್ ಖಾತೆಗಳನ್ನು ಪರಿಶೀಲಿಸಿದೆವು , ಅದರಲ್ಲೂ ನಮಗೆ ಅವರ ಬಂಧನದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಜೂನ್ 12 ರಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ್ದು, ಅದರಲ್ಲಿ ಬೋರ್ಡಿಂಗ್ ಪಾಸ್ನ ಚಿತ್ರವಿದ್ದು, ಅದರಲ್ಲಿ ಪ್ರಯಾಣಿಕನ ಹೆಸರು ವಿಶ್ವಶ್ ಕುಮಾರ್ ರಮೇಶ್ ಮತ್ತು ಅವರ ಸೀಟ್ ಸಂಖ್ಯೆ 11A ಅನ್ನು ಹೈಲೈಟ್ ಮಾಡಲಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವಿಶ್ವಶ್ ಕುಮಾರ್ ರಮೇಶ್ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಖಚಿತವಾಗಿದೆ. ಬೋರ್ಡಿಂಗ್ ಪಾಸ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ತನಿಖೆಯ ಮುಂದಿನ ಭಾಗದಲ್ಲಿ, ಅವರು ವಿಮಾನ ಹತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು, ನಾವು ಪ್ರಯಾಣಿಕರ ಪಟ್ಟಿಯನ್ನು ಹುಡುಕಿದೆವು. ಹುಡುಕಾಟದಲ್ಲಿ ನಮಗೆ, ಜೂನ್ 12, 2025ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್ಸೈಟ್ನಲ್ಲಿ ʼಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ: ಪ್ರಯಾಣಿಕರ ಸಂಪೂರ್ಣ ಪಟ್ಟಿ ಬಿಡುಗಡೆ, ಇದರಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಸೇರಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ಪ್ರಯಾಣಿಕರ ಪಟ್ಟಿಯನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಜೂನ್ 18, 2025ರಂದು ನ್ಯೂಸ್ ಫಸ್ಟ್ ಕನ್ನಡ ವೆಬ್ಸೈಟ್ನಲ್ಲಿ ʼವಿಮಾನ ದುರಂತದಿಂದ ಪಾರಾಗಿದ್ದ ವಿಶ್ವಾಸ್ ಕುಮಾರ್ ಡಿಸ್ಚಾರ್ಜ್.. ದುಃಖದಲ್ಲೇ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿʼ ಎಂಬ ಹೆಡ್ಲೈನ್ನೊಂಡಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ಕಾಣಬಹುದು. ವರದಿಯಲ್ಲಿ ʼಅಹಮದಾಬಾದ್ ವಿಮಾನ ಪತನಗೊಂಡ ವೇಳೆ 242 ಪ್ರಯಾಣಿಕರು ಜೀವ ಉಸಿರು ಚೆಲ್ಲಿದ್ದರು. ಈ ಪೈಕಿ ಓರ್ವ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಎನ್ನುವರು ಮಾತ್ರ ಬದುಕುಳಿದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಇದೀಗ ವಿಶ್ವಾಸ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆʼ ಎಂದು ವರದಿಯಾಗಿದೆ.
ಜೂನ್ 18. 2025ರಂದು ಪ್ರಜಾವಾಣಿ ವೆಬ್ಸೈಟ್ನಲ್ಲಿ Air India ವಿಮಾನ ದುರಂತ: ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ವಿಶ್ವಾಸ್ ರಮೇಶ್ʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼದಿಯು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬ್ರಿಟನ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅದೇ ದುರಂತದಲ್ಲಿ ಮೃತಪಟ್ಟ ಸಹೋದರ ಅಜಯ್ ರಮೇಶ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬ್ರಿಟನ್ನಿಂದ ದಿಯುಗೆ ಬಂದಿದ್ದ ಸಹೋದರರು ಜೂನ್ 12ರಂದು ಮರಳಿ ಲಂಡನ್ಗೆ ಹೊರಟಿದ್ದರು. ಈ ವೇಳೆ ವಿಮಾನ ಅಪಘಾತ ಸಂಭವಿಸಿತ್ತು. 'ವಿಶ್ವಾಸ್ ಅವರ ಕುಟುಂಬ ಈಗಾಗಲೇ ಬ್ರಿಟನ್ನಿಂದ ದಿಯುಗೆ ಆಗಮಿಸಿದೆ. ಮಂಗಳವಾರ ಸಂಜೆ 7.30ಕ್ಕೆ ವಿಶ್ವಾಸ್ ಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿದೆ. ಡಿಎನ್ಎ ಪರೀಕ್ಷೆ ಮೂಲಕ ಅವರ ಸಹೋದರ ಅಜಯ್ ಅವರ ಮೃತದೇಹದ ಗುರುತು ಪತ್ತೆ ಮಾಡಿದ್ದು, ಬುಧವಾರ ಮುಂಜಾನೆ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ' ಎಂದು ವೈದ್ಯ ರಾಕೇಶ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ದಿಯುವುನಲ್ಲಿ ಬುಧವಾರ ಅಜಯ್ ಅಂತ್ಯಕ್ರಿಯೆ ನಡೆದಿದ್ದು, ವಿಶ್ವಾಸ್ ಕೂಡ ಅಲ್ಲಿ ಹಾಜರಿದ್ದರು ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆʼ ಎಂದು ವರದಿಯಗಿದೆ.
ಜೂನ್ 18, 2025ರಂದು ಎಎನ್ಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ʼ#WATCH | Diu | Lone survivor of AI-171 flight crash, Vishwas Ramesh Kumar, mourns the death of his brother Ajay Ramesh, who was travelling on the same flight. Vishwas Ramesh Kumar is a native of Diu and is settled in the UKʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼAI-171 ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ರಮೇಶ್ ಕುಮಾರ್, ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಸಹೋದರ ಅಜಯ್ ರಮೇಶ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ವಿಶ್ವಾಸ್ ರಮೇಶ್ ಕುಮಾರ್ ಡಿಯು ಮೂಲದವರಾಗಿದ್ದು, ಯುಕೆಯಲ್ಲಿ ನೆಲೆಸಿದ್ದಾರೆ.ʼ ಎಂದು ಬರೆದಿರುವುದನ್ನು ನಾವಿಲ್ಲಿ ಕಾಣಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವಿಶ್ವಾಸ್ ಕುಮಾರ್ ರಮೇಶ್ರನ್ನು ಯಾವುದೇ ಪ್ರಕರಣದಲ್ಲೂ ಬಂಧಿಸಲಾಗಿಲ್ಲ. ವಿಶ್ವಾಸ್ ಕುಮಾರ್ AI 171 ವಿಮಾನವನ್ನು ಹತ್ತಿದ್ದರು ಮತ್ತು ವಿಮಾನ ಅಪಘಾತದಿಂದ ಬದುಕುಳಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಜೂನ್ 18, 2025 ರಂದು ಅವರು ತಮ್ಮ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.