ಫ್ಯಾಕ್ಟ್ಚೆಕ್: ಪ್ರಧಾನಿ ಮೋದಿ ಜುಲೈ 1 ರಿಂದ ಪೆಟ್ರೋಲ್ ಬೆಲೆ ಲೀಟರ್ಗೆ 45 ರೂ.ಗೆ ಇಳಿಕೆ ಮಾಡುವುದಾಗಿ ಘೋಷಿಸಿಲ್ಲ
ಪ್ರಧಾನಿ ಮೋದಿ ಜುಲೈ 1 ರಿಂದ ಪೆಟ್ರೋಲ್ ಬೆಲೆ ಲೀಟರ್ಗೆ 45 ರೂ.ಗೆ ಇಳಿಕೆ ಮಾಡುವುದಾಗಿ ಘೋಷಿಸಿಲ್ಲ

Claim :
ಜುಲೈ 1 ರಿಂದ ಪೆಟ್ರೋಲ್ ಬೆಲೆ ಲೀಟರ್ಗೆ 45 ರೂ.ಗೆ ಇಳಿಕೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆFact :
1 ಜುಲೈ 2025 ರಿಂದ 1 ಲೀಟರ್ ಪೆಟ್ರೋಲ್ನ್ನು 45 ರೂಪಾಯಿಗೆ ಮಾರಾಟ ಮಾಡುವುದಾಗಿ ಮೋದಿಯವರು ಘೋಷಿಸಿಲ್ಲ
ಪೆಟ್ರೋಲ್, ಡೀಸೆಲ್ ಬೆಲೆ ಆಗಾಗ ಏರಿಳಿತ ಆಗುತ್ತಲಿರುತ್ತದೆ. ಇರಾನ್ ದೇಶದ ಮೇಲೆ ಇಸ್ರೇಲ್ ಏಕಾಏಕಿ ದಾಳಿ ಮಾಡಿರುವುದು ಜಾಗತಿಕವಾಗಿ ಮಾರುಕಟ್ಟೆಗಳನ್ನು ಆತಂಕಕ್ಕೆ ದೂಡಿದೆ. ಕಚ್ಛಾ ತೈಲ ಬೆಲೆ ಶೇ. 13ರಷ್ಟು ಏರಿಕೆ ಆಗಿದೆ. ಒಂದು ಬ್ಯಾರಲ್ ಕಚ್ಛಾ ತೈಲದ ಬೆಲೆ 76 ಡಾಲರ್ ಆಸುಪಾಸಿನಷ್ಟಿದೆ. ಇಸ್ರೇಲ್ ದಾಳಿ ಪರಿಣಾಮವಾಗಿ ಮಧ್ಯಪ್ರಾಚ್ಯ ದೇಶಗಳಿಂದ ತೈಲ ಸರಬರಾಜು ಕಡಿಮೆಗೊಳ್ಳುವ ಸಾಧ್ಯತೆ ಮನಗಂಡು ತೈಲ ಬೆಲೆ ಹೆಚ್ಚಳ ಆಗಿದೆ. ಇದರ ಪರಿಣಾಮವಾಗಿ ಭಾರತವೂ ಒಳಗೊಂಡಂತೆ ಜಾಗತಿಕವಾಗಿ ಪೆಟ್ರೋಲ್ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಇದೆ. ಈಗಾಗಲೇ ಇರಾನ್ ಸ್ಟ್ರೇಟ್ ಆಫ್ ಹರ್ಮೂಜ್ ಮುಚ್ಚುವ ಪ್ರಸ್ತಾಪವನ್ನು ಇರಾನ್ ಸರ್ಕಾರ ಅನುಮೋದಿಸಿದ್ದು ಒಂದು ವೇಳೆ ಇರಾನ್ ಇದರಲ್ಲಿ ಸಫಲವೇ ಆದಲ್ಲಿ ಭಾರತ ಸೇರಿ ಹಲವು ಪ್ರಮುಖ ರಾಷ್ಟ್ರಗಳಿಗೆ ಇಂಧನದ ಬಿಸಿ ತಟ್ಟಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾತೈಲದ ಮೀಸಲು ಹೊಂದಿರುವುದರಿಂದ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎನ್ನಲಾಗುತ್ತಿದ್ದರೂ ಪ್ರಸ್ತುತ ನಡೆಯುತ್ತಿರುವ ಯುದ್ಧ ದೀರ್ಘಾವಧಿಗೆ ಮುಂದುವರೆದರೆ ಮುಂದೆ ಭಾರತದಲ್ಲೂ ಇಂಧನ ದರ ಹೆಚ್ಚಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದರ ನಡುವೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ವೊಂದು ವೈರಲ್ ಆಗುತ್ತಿದೆ. ವೈರಲ್ ಪೊಸ್ಟ್ನ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು 1 ಜುಲೈ 2025 ರಿಂದ ಪೆಟ್ರೋಲ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಇಳಿಸುವುದಾಗಿ ಹೇಳಿದ್ದರು. ಅದರಲ್ಲೂ ಪ್ರಮುಖವಾಗಿ ಲೀಟರ್ಗೆ 45 ರೂಪಾಯಿ ರೀತಿ ಮಾರಾಟ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ ಈಗ ಆ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡುತ್ತಿದ್ದಾರೆ.
ಜೂನ್ 28, 2025ರಂದು ಇನ್ಸ್ಟಾಗ್ರಾಮ್ ಬಳಕೆದಾರರು ಪ್ರಧಾನಿ ಮೋದಿಯವರ ಫೋಟೋದೊಂದಿಗೆ ʼ1 जुलाई से होगा 45 रुपया प्रति लीटर पेट्रोलʼ ಎಂಬ ಶಿರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜುಲೈ 1, 2025ರಿಂದ ಪೆಟ್ರೋಲ್ ಲೀಟರ್ಗೆ 45 ರೂ. ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತೊಂದು ಯೂಟ್ಯೂಬ್ ಖಾತೆಯಲ್ಲಿ ʼ5 जुलाई 2025 को मोदी ने किया नया ऐलान कियाʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ʼ5 जुलाई 2025 को मोदी जी ने किया नया ऐलान किया कि पेट्रोल प्रति लीटर 100 रुपया हैं लेकिन 5 जुलाई से होगा 60 रूपया प्रति लीटर पेट्रोलʼ ಎಂಬ ಕ್ಯಾಪ್ಷನ್ನ್ನೀಡಿರುವುದನ್ನು ನೋಡಬಹುದು. ಕ್ಯಾಪ್ಷನ್ ಮತ್ತು ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದರೆ ʼಜುಲೈ 5, 2025 ರಂದು ಮೋದಿ ಜೀ ಪೆಟ್ರೋಲ್ ಲೀಟರ್ಗೆ 100 ರೂಪಾಯಿ ಎಂದು ಹೊಸ ಘೋಷಣೆ ಮಾಡಿದರು ಆದರೆ ಜುಲೈ 5 ರಿಂದ ಲೀಟರ್ ಪೆಟ್ರೋಲ್ಗೆ 60 ರೂಪಾಯಿʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇನ್ನೂ ಕೆಲವರು ಪ್ರಧಾನಿ ಮೋದಿಯವರು ಜುಲೈ 1 ರಿಂದ ಕೆಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಅನ್ನು ಲೀಟರಿಗೆ 45 ರೂಪಾಯಿಗೆ ಪ್ರಾಯೋಗಿಕವಾಗಿ ಮಾರಾಟ ಮಾಡಲು ಸೂಚಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಪ್ರಧಾನಿ ಮೋದಿ ನರೇಂದ್ರ ಮೋದಿ ಈ ಹಿಂದೆ 1 ಜುಲೈ 2025 ರಿಂದ 1 ಲೀಟರ್ ಪೆಟ್ರೋಲ್ ಅನ್ನು 45 ರೂಪಾಯಿಗೆ ಮಾರಾಟ ಮಾಡುವುದಾಗಿ ಘೋಷಿಸಿಲ್ಲ ಹಾಗೆ, ಪ್ರಾಯೋಗಿಕವಾಗಿ ಭಾರತದ ಕೆಲವು ನಗರಗಳಲ್ಲಿ 45 ರೂಪಾಯಿಗೆ 1 ಲೀಟರ್ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯಲ್ಲೂ ಸತ್ಯಾಂಶವಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಸುದ್ದಿ ಮಾಧ್ಯಮಗಳ ವರದಿಗಾಗಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ಒಂದು ವೇಳೆ ವೈರಲ್ ಪೋಸ್ಟ್ ನಿಜವಾಗಿದ್ದರೆ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ ನಮಗೆ ಆ ರೀತಿಯ ಯಾವುದೇ ವರದಿಗಳು ಕಂಡುಬಂದಿಲ್ಲ. ಹೀಗಾಗಿ ವೈರಲ್ ಪೋಸ್ಟ್ ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಡೇಟಾಗಳನ್ನು ಬಳಸಿಕೊಂಡು ಜುಲೈ 10, 2025 ರಂದು ನಾವು ನಿಜವಾದ ಪೆಟ್ರೋಲ್ ಬೆಲೆಗಳನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ಕೆಲ ವರದಿಗಳು ಕಂಡು ಬಂದಿವೆ. ಜುಲೈ 10, 2025 ರ ಹೊತ್ತಿಗೆ ಪೆಟ್ರೋಲ್ ಬೆಲೆಗಳು ದೆಹಲಿಯಲ್ಲಿ ಪ್ರತಿ ಲೀಟರ್ಗೆ 94.72 ರಿಂದ ಮುಂಬೈನಲ್ಲಿ ಪ್ರತಿ ಲೀಟರ್ಗೆ 104.21, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ಗೆ 103.94, ಚೆನ್ನೈನಲ್ಲಿ ಪ್ರತಿ ಲೀಟರ್ಗೆ 100.85, ಬೆಂಗಳೂರಿನಲ್ಲಿ ಪ್ರತಿ ಲೀಟರ್ಗೆ 99.84 ಮತ್ತು ಹೈದರಾಬಾದ್ನಲ್ಲಿ ಪ್ರತಿ ಲೀಟರ್ಗೆ 107.41 ವರೆಗೆ ಇವೆ. ಇದರ ಪ್ರಕಾರ ಭಾರತದ ಯಾವುದೇ ನಗರವು ಲೀಟರ್ಗೆ 45 ರೂಪಾಯಿ ರೀತಿ ಮಾರಾಟ ಮಾಡುತ್ತಿಲ್ಲ. ಹಾಗಾಗಿ ವೈರಲ್ ಫೋಟೋದಲ್ಲಿ ಉಲ್ಲೇಖಿಸಿದಂತೆ ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಲೀಟರ್ಗೆ 45 ರೂಪಾಯಿ ರೀತಿ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ ಎಂಬುದು ಕೂಡ ಸಂಪೂರ್ಣವಾಗಿ ಸುಳ್ಳಾಗಿದೆ.
ಮತ್ತಷ್ಟು ಹುಡುಕಾಟ ನಡೆಸಿದಾಗ ನಾವು ವೈರಲ್ ಪೋಸ್ಟ್ ಮಾಡಿದ ಬಳಕೆದಾರರ ಹ್ಯಾಂಡಲ್ನ್ನು ನಾವು ಪರಿಶೀಲಿಸಿದೆವು. ಉಮೇಶ್ ಕುಶ್ವಾಹ ಎಂಬ ಈ ಬಳಕೆದಾರರ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ , ವಿಭಿನ್ನ ದಿನಾಂಕಗಳನ್ನು ಹೊಂದಿರುವ ವೈರಲ್ ವೀಡಿಯೊಗೆ ಹೋಲುವ ರೀಲ್ಗಳು ನಮಗೆ ಕಂಡುಬಂದಿವೆ. ಇವುಗಳಲ್ಲಿ, ಕೆಲವೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡಲಾಗುತ್ತಿತ್ತು, ಕೆಲವು ರೀಲ್ಗಳಲ್ಲಿ ಬೆಲೆ ಇಳಿಕೆಯ ಬಗ್ಗೆ ಉಲ್ಲೇಖಿಸಲಾಗಿತ್ತು.
ತನಿಖೆಯ ಸಮಯದಲ್ಲಿ, ನಾವು ಇಂದಿನ (ಜುಲೈ 11, 2025) ಪೆಟ್ರೋಲ್ ಬೆಲೆಯನ್ನು ಪರಿಶೀಲಿಸಿದ್ದೇವೆ . ಯಾವುದೇ ನಗರದಲ್ಲಿ ಲೀಟರ್ಗೆ 45 ರೂ.ಗಳ ಬೆಲೆ ಇರುವುದು ನಮಗೆ ತಿಳಿದು ಬಂದಿಲ್ಲ. ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಬೆಲೆಗಳನ್ನು ಕೆಳಗೆ ನೋಡಬಹುದು
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಹಾಗೆ, ಪ್ರಧಾನಿ ಮೋದಿರವರು ಈ ಹಿಂದೆ ಜುಲೈ 1, 2025 ರಿಂದ 1 ಲೀಟರ್ ಪೆಟ್ರೋಲ್ನ್ನು 45 ರೂಪಾಯಿಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದರೂ ಎಂಬುದು ಸುಳ್ಳು, ಹಾಗೆ ಪ್ರಾಯೋಗಿಕವಾಗಿ ಭಾರತದ ಕೆಲವು ನಗರಗಳಲ್ಲಿ 45 ರೂಪಾಯಿಗೆ 1 ಲೀಟರ್ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ಕೂಡ ಸುಳ್ಳಾಗಿದೆ.

