ಫ್ಯಾಕ್ಟ್ಚೆಕ್: ಮಹಾಕುಂಭ ಮೇಳದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಷಣ ಎಂದು ಹಳೆಯ ವಿಡಿಯೋ ಹಂಚಿಕೆ
ಮಹಾಕುಂಭ ಮೇಳದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಷಣ ಎಂದು ಹಳೆಯ ವಿಡಿಯೋ ಹಂಚಿಕೆ

Claim :
ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆFact :
2019ರಲ್ಲಿ ಋಷಿಕೇಶಷ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದ ವಿಡಿಯೋವದು
ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. ಆದರೆ ಈ ಬಾರಿಯ ಮಹಾಕುಂಭ ಮೇಳ ಬಹಳ ವಿಶೇಷವಾಗಿದ್ದು, 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿ ಪ್ರಯಾಗರಾಜ್ದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯಲಿದೆ. ಸದ್ಯ ಮಹಾಕುಂಭ ಮೇಳಕ್ಕೆ ದೇಶವೇ ಭರದಿಂದ ಸಂಭ್ರಮದಿಂದ ಸಜ್ಜಾಗುತ್ತಿದೆ. 12 ವರ್ಷಗಳ ನಂತರ ಬರುವ ಮಹಾಕುಂಭ ಮೇಳ ಇದಾಗಿದ್ದು, ನಡೆಯಲಿರುವ ಮಹಾ ಕುಂಭಮೇಳಕ್ಕೆ 40-45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ
ಮಹಾ ಕುಂಭಮೇಳದಲ್ಲಿ ಅಖಿಲೇಶ್ ಯಾದವ್ ಯಾರೂ ಇಲ್ಲದ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶಾಹೀ ಸ್ನಾನ ಮಾಡಿದ್ದಾರೆ ಎಂದು ಪೋಸ್ಟ್ನ್ನು ಹಂಚಿಕೊಂಡ ಬೆನ್ನಲ್ಲೆ, ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಸಂಸದ ತೇಜಸ್ವಿ ಸೂರ್ಯ ಮಹಾ ಕುಂಭಮೇಳದಲ್ಲಿ ಮಾತನಾಡಿದ್ದಾರೆ, ಈ ರೀತಿಯ ನಾಯಕರು ಇನ್ನಷ್ಟು ಸೃಷ್ಟಿಯಾಗಬೇಕು ಎಂಬ ಶೀರ್ಷಿಕೆಯಿಂದಗೆ 3.46 ನಿಮಿಷದ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್ನ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
- ಜನವರಿ 20 ,2025ರಂದು ಸಿಎನ್ಎನ್ ನ್ಯೂಸ್ ಎಂಬ ಯೂಟ್ಯೂಬ್ನಲ್ಲಿ ʼಎಲ್ಲವೂ ಒಂದೇ ಸೂರಿ ನಡೆಗೆ... ಅದುವೆ ನಿಮ್ಮ CNN2023 ನಲ್ಲಿ ಮಾತ್ರʼ ಎಂಬ ಶೀರ್ಷಿಕೆಯೊಂದಿಗೆ ಕುಂಭಮೇಳದಲ್ಲಿ ಕರ್ನಾಟಕದ ಸಂಸದ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2019ರಲ್ಲಿ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದ ವಿಡಿಯೋವನ್ನು ಮಹಾ ಕುಂಭಮೇಳದಲ್ಲಿ ಮಾತನಾಡಿದ್ದಾರೆಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕಕೊಳ್ಳಲಾಗುತ್ತಿದೆ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಮೇ 18, 2019ರಂದು ʼGanga Aarti | Buddha Purnima Special | 18th May 2019ʼ ಎಂಬ ಶೀರ್ಷಿಕೆಯೊಂದಿಗೆ 40.09 ನಿಮಿಷಗಳನ್ನು ಒಳಗೊಂಡ ವಿಡಿಯೋವೊಂದು ಕಂಡುಬಂದಿತು. ಈ ವಿಡಿಯೋದಲ್ಲಿ ವೈರಲ್ ವಿಡಿಯೋದಲ್ಲಿ ಕಾಣುವ ಸಂತರಾದ ಸ್ವಾಮಿ ಚಿದಾನಂತ ಸರಸ್ವತಿಯೊಬ್ಬರೇ ಇರುವುದನ್ನು ನಾವು ನೋಡಬಹುದು.
ಹುಡುಕಾಟದಲ್ಲಿ ನಮಗೆ ಜುಲೈ 03, 2019ರಂದು ʼಪರಮಾರ್ಥ ನಿಕೇತನ್ʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼShri Tejasvi Surya speech || Ganga Aarti || Parmarth Niketan Ashram || July 2019ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನ ಕ್ಯಾಪ್ಷನ್ನಲ್ಲಿ ʼಬಿಜೆಪಿಯ ಅತ್ಯಂತ ಕಿರಿಯ ಸಂಸದ, 28 ವರ್ಷದ ತೇಜಸ್ವಿ ಸೂರ್ಯರವರನ್ನು ಗಂಗಾ ಮಾತೆಯ ದಡದಲ್ಲಿ ಪವಿತ್ರ ಗಂಗಾ ಆರತಿಗಾಗಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಅವರು ಪೂಜ್ಯ ಸ್ವಾಮಿ ಚಿದಾನಂದ್ ಸರಸ್ವತಿ ಜೀ ಅವರೊಂದಿಗೆ ಗೌರವಾನ್ವಿತ ಶ್ರೀ ನರೇಂದ್ರ ಮೋದಿಜೀ ಅವರ ನಾಯಕತ್ವ ಮತ್ತು ದೂರದೃಷ್ಟಿಯ ಅಡಿಯಲ್ಲಿ ರಾಷ್ಟ್ರದ ದಿಕ್ಕು ಮತ್ತು ಉಜ್ವಲ ಭವಿಷ್ಯದ ಬಗ್ಗೆ ಸುಂದರವಾದ ಮಾತನಾಡಿದರು. ತೇಜಸ್ವಿ ಸೂರ್ಯ ಆರತಿಯ ಸಮಯದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅದೃಷ್ಟದ ಬಗ್ಗೆ ಬಹಳ ಗೌರವ ಮತ್ತು ಕೃತಜ್ಞತೆಯಿಂದ ಮಾತನಾಡಿದರು ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು. 3.46 ಸೆಕೆಂಡ್ಗಳನ್ನು ಒಳಗೊಂಡ ಈ ವಿಡಿಯೋವನ್ನು ಮಹಾ ಕುಂಭಮೇಳದಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವೈರಲ್ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜುಲೈ 8, 2019ರಂದು ತೇಜಸ್ವಿ ಸೂರ್ಯರವರ ಎಕ್ಸ್ ಖಾತೆಯಲ್ಲಿ ʼತಾಯಿ ಗಂಗಾ ಅನೇಕ ವಿಧಗಳಲ್ಲಿ ಹಿಂದೂ ನಾಗರಿಕತೆಯ ಆದರ್ಶ ಸಂಕೇತವಾಗಿದೆ – ದೀರ್ಘಕಾಲಿಕ ಮತ್ತು ಯಾವಾಗಲೂ ಯೌವನಿಕೆಯದ್ದಾಗಿದೆ. ಪರಮಾರ್ಥ ನಿಕೇತನ, ಋಷಿಕೇಶಕ್ಕೆ ಭೇಟಿ ನೀಡಲು ಮತ್ತು ಸ್ವಾಮಿ ಜಿಯವರ ನೇತೃತ್ವದಲ್ಲಿ ಅವರು ಮಾಡುತ್ತಿರುವ ಸ್ಫೂರ್ತಿದಾಯಕ ಕೆಲಸವನ್ನು ನೋಡಲು ನನಗೆ ಅವಕಾಶವೊಂದು ಸಿಕ್ಕಿತು. ಈ ಸಂದರ್ಭದಲ್ಲಿ ನನ್ನ ಭಾಷಣʼ ಎಂಬ ಶೀರ್ಷಿಕೆಯನ್ನೀಡಿ ಪರಮಾರ್ಥ ನಿಕೇತನದ ಯೂಟ್ಯೂಬ್ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ಪರಮಾರ್ಥ ನಿಕೇತನ ಆಶ್ರಮದ ವೆಬ್ಸೈಟ್ನ್ನು ಪರಿಶೀಲಿಸಿದಾಗ ಪವಿತ್ರ ಗಂಗಾ ಆರತಿ ಮತ್ತು ಯಜ್ಞ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ವಿವರಗಳಿದ್ದು ಗಂಗಾ ಆರತಿಯು ಪ್ರತಿದಿನ ಸೂರ್ಯಾಸ್ತದ ಸಮಯದಲ್ಲಿ ಮಾಡಲಾಗುತ್ತದೆ ಎಂದು ವರದಿ ಮಾಡಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2019ರಲ್ಲಿ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದ ವಿಡಿಯೋವನ್ನು ಮಹಾ ಕುಂಭಮೇಳದಲ್ಲಿ ಮಾತನಾಡಿದ್ದಾರೆಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕಕೊಳ್ಳಲಾಗುತ್ತಿದೆ.