ಫ್ಯಾಕ್ಟ್ಚೆಕ್: ಎಲ್.ಕೆ. ಅತೀಕ್ ವಿಧಾನ ಪರಿಷತ್ತಿಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು ಎಂದು ಸುಳ್ಳು ಸುದ್ದಿ ಹಂಚಿಕೆ
ಎಲ್.ಕೆ. ಅತೀಕ್ ವಿಧಾನ ಪರಿಷತ್ತಿಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು ಎಂದು ಸುಳ್ಳು ಸುದ್ದಿ ಹಂಚಿಕೆ

Claim :
ಎಲ್.ಕೆ. ಅತೀಕ್ ವಿಧಾನ ಪರಿಷತ್ತಿಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸುFact :
ಎಲ್.ಕೆ ಅತೀಕ್ ತಮ್ಮ ಏಕ್ಸ್ ಖಾತೆಯಲ್ಲಿ ಬಿ.ಟಿವಿ ಕನ್ನಡ ಮಾಧ್ಯಮ ಸುಳ್ಳು ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟನೆ
1991 ರ ಬ್ಯಾಚ್ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ಜನವರಿ 31ರಂದು ನಿವೃತ್ತರಾಗಲಿರುವ ಹಿರಿಯ ಐಎಎಸ್ ಅಧಿಕಾರಿ ಎಲ್. ಕೆ. ಅತೀಕ್ ಅವರ ಸೇವೆಯನ್ನು ಮುಂದುವರೆಸಲಾಗಿದ್ದು, ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಸಮಯದಲ್ಲಿ ಈ ನೇಮಕ ಬಹಳ ಮಹತ್ವ ಪಡೆದಿತ್ತು. ಎಲ್. ಕೆ. ಅತೀಕ್ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರ ಬಳಿ, ವಿಶ್ವಬ್ಯಾಂಕ್ನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದವರು. ಆರ್ಥಿಕ ವಿಚಾರದಲ್ಲಿ ಅವರು ಅಪಾರ ಅನುಭವ ಹೊಂದಿದ್ದರು. ಅತೀಕ್ ಅವರ ನಿವೃತ್ತಿ ನಂತರ ಉತ್ತರಾಧಿಕಾರಿ ಹುಡುಕುವುದು ಅಷ್ಟು ಸುಲಭದ ಮಾತಲ್ಲ ಎಂಬ ಚರ್ಚೆಗಳು ಸರ್ಕಾರದ ವಲಯದಲ್ಲಿಯೇ ಕೇಳಿ ಬಂದಿತ್ತು. 1991ರ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ ಎಲ್. ಕೆ. ಅತೀಕ್ 2007ರಲ್ಲಿ ಪ್ರಧಾನ ಮಂತ್ರಿ ಕಚೇರಿ ನಿರ್ದೇಶಕರಾಗಿದ್ದರು. 2007 ರಿಂದ 2012ರ ತನಕ ಅವರು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು, ಕೃಷಿ, ಶಿಕ್ಷಣ, ಪೋಷಣೆ, ಕೌಶಲ್ಯ ತರಬೇತಿ ಮುಂತಾದ ವಿಚಾರಗಳಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಭಾಷಣಗಳನ್ನು ತಯಾರು ಮಾಡಿದ್ದಾರೆ. ಇದೀಗ ಬೆಂಗಳೂರು ಬಿಸಿನೆಸ್ ಕಾರಿಡಾರ್ನ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಹೇಳಾಗುತ್ತಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಎಲ್.ಕೆ. ಅತೀಕ್ರವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ವೈರಲ್ ಆದ ಪೊಸ್ಟ್ನಲ್ಲಿ ʼಬಿಗ್ ಬ್ರೇಕಿಂಗ್ ನ್ಯೂಸ್ʼ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ವಿಧಾನ ಪರಿಷತ್ತಿಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು” ಎಂದು ಉಲ್ಲೇಖಿಸಿ ಬಿ.ಟಿವಿ ಕನ್ನಡ ಸುದ್ದಿ ವಾಹಿನಿಯೊಂದು ಪೋಸ್ಟರ್ ಅನ್ನು ಹಂಚಿಕೊಂಡಿರುವುದನ್ನು ನಾವೀ ಪೊಸ್ಟ್ನಲ್ಲಿ ನೋಡಬಹುದು. ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಖುದ್ದು ಎಲ್.ಕೆ ಅತೀಕ್ ತಮ್ಮ ಏಕ್ಸ್ ಖಾತೆಯಲ್ಲಿ ಬಿ.ಟಿವಿ ಕನ್ನಡ ಮಾಧ್ಯಮ ಸುಳ್ಳು ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು, ನಾವು ವಿಧಾನ ಪರಿಷತ್ಗೆ ಎಲ್.ಕೆ ಅತೀಕ್ ಅವರು ನಾಮನಿರ್ದೇಶನಗೊಂಡಿದ್ದಾರೆಯೇ ಎಂದು ಪರಿಶೀಲಿಸಲು ವಿವಿಧ ಕೀ ವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವರದಿಯಾಗಿಲಿ, ಸುದ್ದಿಯಾಗಲಿ ಕಂಡು ಬಂದಿಲ್ಲ. ಒಂದು ವೇಳೆ ಬಿಟಿವಿ ಕನ್ನಡ ಪೋಸ್ಟರ್ ನಿಜವಾಗಿದ್ದರೆ ಇತರೇ ಮಾಧ್ಯಮಗಳು ಕೂಡ ವರದಿಯನ್ನು ಮಾಡುತ್ತಿದ್ದವು. ಹಾಗಾಗಿ ವೈರಲ್ ಪೋಸ್ಟರ್ ಸಾರ್ವಜನಿಕರ ದಾರಿ ತಪ್ಪಿಸುತ್ತಿರುವುದು ನಮಗೆ ಖಚಿತವಾಗಿದೆ.
ಮತ್ತಷ್ಟು ಮಾಹಿತಿಗಾಗಿ ಎಲ್.ಕೆ ಅತೀಕ್ ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಪರಿಶೀಲನೆ ನಡೆಸಿದಾಗ ಅತೀಕ್ರವರ ಎಕ್ಸ್ ಖಾತೆಯಲ್ಲಿ ಬಿ.ಟಿವಿಯ ಪೊಸ್ಟ್ನ್ನು ಹಂಚಿಕೊಂಡು ʼBTV is running fake news. It is not true. I hope they will desist from this mischief @btvnewsliveʼ ಎಂಬ ಶೀರ್ಷಿಕೆಯನ್ನೀಡಿ ಬಿಟಿವಿ ನ್ಯೂಸ್ನ್ನು ಟ್ಯಾಗ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕಕ್ಕೆ ಅನುವಾದಿಸಿದಾಗ ʼಬಿಟಿವಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಇದು ನಿಜವಲ್ಲ. ಅವರು ಇಂತಹ ದುಷ್ಕೃತ್ಯದಿಂದ ದೂರವಿರುತ್ತಾರೆ ಎಂದು ನಾನು ಭಾವಿಸುತ್ತೇನೆʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ಜೂನ್ 06, 2025ರಂದು ಪ್ರಜಾವಾಣಿ ವೆಬ್ಸೈಟ್ನಲ್ಲಿ ʼಎಂ.ಎಲ್.ಸಿ ಸ್ಥಾನ: ನನ್ನ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ- ಎಲ್.ಕೆ ಅತೀಕ್ʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼ: ತಮ್ಮ ಬಗ್ಗೆ ಬಿ ಟಿ.ವಿ ಸುಳ್ಳು ಸುದ್ದಿ ಹರಡಿದೆ ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ಗರಂ ಆಗಿದ್ದಾರೆ. 'ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ವಿಧಾನ ಪರಿಷತ್ಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು' ಎಂದು ಅತೀಕ್ ಅವರ ಫೋಟೊ ಸಮೇತ ಬಿ ಟಿ.ವಿ ಹೆಸರಿನಲ್ಲಿರುವ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ತಮ್ಮ ಎಕ್ಸ್ ಖಾತೆಯಲ್ಲಿ ಜೂನ್ 5 ರಂದು ಈ ಪೋಸ್ಟರ್ ಹಂಚಿಕೊಂಡಿರುವ ಅತೀಕ್ ಅವರು, 'ಇದೊಂದು ಸುಳ್ಳು ಸುದ್ದಿ, ಬಿ ಟಿ.ವಿ ಸುಳ್ಳು ಸುದ್ದಿ ಹರಡುತ್ತಿದೆ. ಇದನ್ನು ನಂಬಬೇಡಿ. ಬಿ ಟಿ.ವಿ ಅವರು ಇಂತಹ ದುಷ್ಕೃತ್ಯಗಳಿಂದ ದೂರ ಇರುತ್ತಾರೆಂದು ನಾನು ನಂಬುತ್ತೇನೆ' ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಪೋಸ್ಟ್ ಅನ್ನು ಬಿ ಟಿ.ವಿ ಕನ್ನಡ ಎಕ್ಸ್ ಅಕೌಂಟ್ಗೆ ಟ್ಯಾಗ್ ಮಾಡಿದ್ದಾರೆ. ಆದರೆ ಬಿ ಟಿ.ವಿ ಪ್ರತಿಕ್ರಿಯೆ ನೀಡಿಲ್ಲ. ಎಲ್.ಕೆ. ಅತೀಕ್ ಅವರು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದರುʼ ಎಂದು ಬರೆದಿರುವುದನ್ನು ನೋಡಬಹುದು.
ಜೂನ್ 06, 2025ರಂದು ʼವಾರ್ತಾ ಭಾರತಿʼ ತನ್ನ ವೆಬ್ಸೈಟ್ನಲ್ಲಿ "ಇದು ಸುಳ್ಳು ಸುದ್ದಿ": ವಿಧಾನ ಪರಿಷತ್ ಸ್ಥಾನ ಕುರಿತ ಸುದ್ದಿಗೆ ಎಲ್.ಕೆ.ಅತೀಕ್ ಸ್ಪಷ್ಟನೆ ಎಂಬ ಶೀರ್ಷಿಕೆಯೊಂದಿಗೆ ವರದಿ ನೋಡಿರುವುದನ್ನು ನೋಡಬಹುದು. ವರದಿಯಲ್ಲಿ ತಮ್ಮ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಹರಡಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಲ್.ಕೆ.ಅತೀಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದಾರೆ. ‘ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ವಿಧಾನ ಪರಿಷತ್ಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು‘ ಎಂದು ಅತೀಕ್ ಅವರ ಫೋಟೊ ಸಮೇತ ಬಿ ಟಿ.ವಿ ಹೆಸರಿನಲ್ಲಿರುವ ಪೋಸ್ಟರ್ ಇದಾಗಿದ್ದು, ಈ ಸಂಬಂಧ ಎಲ್.ಕೆ.ಅತೀಕ್ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ವರದಿ ಮಾಡಿರುವುದನ್ನು ನೋಡಬಹುದು.
ʼಪ್ರಸ್ತುತʼ ವೆಬ್ಸೈಟ್ನಲ್ಲಿಯೂ ʼಎಲ್.ಕೆ. ಅತೀಕ್ ವಿಧಾನ ಪರಿಷತ್ಗೆ ನಾಮಕರಣ ಎಂದು ಸುಳ್ಳು ಸುದ್ದಿ: ಬಿಟಿವಿ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ಗರಂʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸ್ವತಃ ಎಲ್.ಕೆ ಅತೀಕ್ ತಮ್ಮ ಏಕ್ಸ್ ಖಾತೆಯಲ್ಲಿ ಬಿ.ಟಿವಿ ಕನ್ನಡ ಮಾಧ್ಯಮ ಸುಳ್ಳು ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.