ಫ್ಯಾಕ್ಟ್ಚೆಕ್: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯದ್ದು ಎಂದು ನಕಲಿ ವೆಬ್ಸೈಟ್ ಹಂಚಿಕೆ
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯದ್ದು ಎಂದು ನಕಲಿ ವೆಬ್ಸೈಟ್ ಹಂಚಿಕೆ

Claim :
ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ 18 ರಿಂದ 50 ವರ್ಷದೊಳಗಿನ ಜನರಿಗೆ ಸರ್ಕಾರ ಎರಡು ಸಾವಿರ ರೂಪಾಯಿಗಳ ಆರ್ಥಿಕ ನೆರವುFact :
ವೈರಲ್ ಆಗಿರುವ ವೆಬ್ಸೈಟ್ ಲಿಂಕ್ ನಕಲಿಯದ್ದು
ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಬರುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯು ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಾಗಿ ಉದ್ದೇಶಿಸಲಾದ ಸರ್ಕಾರಿ ಯೋಜನೆಯಾಗಿದೆ. 2019 ರ ಮಧ್ಯಂತರ ಬಜೆಟ್ನಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ನನ್ನು ಪರಿಚಯಿಸಲಾಯಿತು. ಇದು ಸ್ವಯಂಪ್ರೇರಿತ ಮತ್ತು ಪಿಂಚಣಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಫಲಾನುಭವಿಗಳು 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ಕನಿಷ್ಠ 3000/- ರೂ.ಗಳ ಖಚಿತ ಪಿಂಚಣಿಯನ್ನು ಪಡೆಯುತ್ತಾರೆ ಮತ್ತು ಫಲಾನುಭವಿಯು ಮರಣಹೊಂದಿದರೆ, ಫಲಾನುಭವಿಯ ಸಂಗಾತಿಯು ಪಿಂಚಣಿಯ 50% ಅನ್ನು ಕುಟುಂಬ ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ 18 ರಿಂದ 50 ವರ್ಷದೊಳಗಿನ ಜನರಿಗೆ ಸರ್ಕಾರ ಎರಡು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೊಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಜನರು ತಮ್ಮ ಖಾತೆಗಳಲ್ಲಿ ಹಣವನ್ನು ಪಡೆಯಲು ಲಿಂಕ್ ಅನ್ನು ಕ್ಲಿಕ್ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಜುಲೈ 5, 2025 ರಂದು ಫೇಸ್ಬುಕ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼShram Yogi Maandhan Yojana: Financial Assistance ₹2000 Creditedʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಶ್ರಮ ಯೋಗಿ ಮಾನ್ ಧನ್ ಯೋಜನೆ: ₹2000 ಠೇವಣಿ ಆರ್ಥಿಕ ನೆರವು" ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಶ್ರಮ ಯೋಗಿ ಮಾನ್ ಧನ್ ಯೋಜನೆಯ ಹೆಸರಿನಲ್ಲಿ ವೈರಲ್ ಆಗಿರುವ ಲಿಂಕ್ ನಕಲಿ ವೆಬ್ಸೈಟ್ನದ್ದು.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡಸಿದೆವು. ಹುಡುಕಾಟದಲ್ಲಿ ನಮಗೆ ಯಾವಿದೇ ಮಾಹಿತಿಯಾಗಲಿ, ವರದಿಯಾಗಲಿ ಕಾಣಸಿ ಸಿಗಲಿಲ್ಲ.
ನಾವು ವೈರಲ್ ಪೋಸ್ಟ್ನಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದೇವೆ ಅದರ URL summer24cool.store ಎಂದು ನಮಗೆ ಕಂಡುಬಂದಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ, URL dotgov.in, nic.in ಅಥವಾ dotin ಆಗಿರುತ್ತಿತ್ತು. ಇದು ನಮಗೆ ಈ ಪೋಸ್ಟ್ ಅನ್ನು ಅನುಮಾನಾಸ್ಪದವಾಗಿ ಕಂಡು ಬರಲು ಕಾರಣವಾಗಿತ್ತು. ನಾವು ನಿಜವಾದ ವೆಬ್ಸೈಟ್ ಅನ್ನು ಪರಿಶೀಲಿಸಿದಾಗ , ನಿಜವಾದ ವೆಬ್ಸೈಟ್ನ URL mandhan.in ಎಂದು ನಮಗೆ ಕಂಡುಬಂದಿದೆ.
ಲಿಂಕ್ ಕ್ಲಿಕ್ ಮಾಡಿದಾಗ ,ವೆಬ್ಸೈಟ್ನ ಮುಖ ಪುಟದಲ್ಲಿ ಪ್ರಧಾನ ಮಂತ್ರಿ ಅನುದನ್ ಯೋಜನೆ ಎಂದು ಬರೆದಿರುವುದನ್ನು ನೋಡಬಹುದು. ಪ್ರಧಾನ ಮಂತ್ರಿ ಅನುದನ್ ಯೋಜನೆಯಡಿಯಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ಐದು ಸಾವಿರ ರೂಪಾಯಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಿಮ್ಮ ಖಾತೆಗೆ ಹಣವನ್ನು ಪಡೆಯಲು ಕೆಳಗೆ ನೀಡಲಾದ ಸ್ಕ್ರ್ಯಾಚ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ ಎಂದು ಬರೆಯಲಾಗಿತ್ತು.
ಶ್ರಮ ಯೋಗಿ ಮಾನ್ ಧನ್ ಯೋಜನೆಯ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , “ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಎಂಬುದು ಅಸಂಘಟಿತ ಕಾರ್ಮಿಕರಿಗೆ (ಯುಡಬ್ಲ್ಯೂ) ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಸರ್ಕಾರಿ ಯೋಜನೆಯಾಗಿದೆ. ಇದು ಸ್ವಯಂಪ್ರೇರಿತ ಮತ್ತು ಪಿಂಚಣಿ ಕೊಡುಗೆ ನೀಡಲಾಗುತ್ತದೆ. ಈ ಯೋಜನೆ 18 ರಿಂದ 40 ವರ್ಷ ವಯಸ್ಸಿನ ಜನರಿಗೆ ಇದ್ದು, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಅರ್ಜಿದಾರರು 60 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ. 55 ರಿಂದ ರೂ. 200 ರವರೆಗೆ ಮಾಸಿಕ ಹಣ ಪವಾತಿ ಮಾಡಬೇಕಾಗಿದೆ. ಆದರೆ ವೈರಲ್ ಆಗಿರುವ ಲಿಂಕ್ನಲ್ಲಿ ಈ ಯಾವ ಮಾಹಿತಿ ಕೂಡ ಇಲ್ಲ. ಇದು ವೈರಲ್ ಆಗಿರುವ ವೆಬ್ಸೈಟ್ ನಕಲಿ ಎಂಬುದನ್ನು ಸ್ಪಷ್ಟ ಪಡಿಸಿದೆ,
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ 18 ರಿಂದ 50 ವರ್ಷದೊಳಗಿನ ಜನರಿಗೆ ಸರ್ಕಾರ ಎರಡು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದೆ ಎಂಬುದದಲ್ಲಿ ಸತ್ಯಾಂಶವಿಲ್ಲ. ವೈರಲ್ ಪೋಸ್ಟ್ನಲ್ಲಿರುವ ಲಿಂಕ್ ನಕಲಿ ವೆಬ್ಸೈಟ್ನದ್ದಾಗಿದ್ದು, ಜನರಿಗೆ ಆರ್ಥಿಕ ನಷ್ಟವನ್ನುಂಟುಮಾಡಲು ಹಂಚಿಕೊಳ್ಳಲಾಗುತ್ತಿದೆ. ಶ್ರಮ ಯೋಗಿ ಮಾನ್ ಧನ್ ಯೋಜನೆ ವಾಸ್ತವವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆಯಾಗಿದೆ

