ಫ್ಯಾಕ್ಟ್ಚೆಕ್: ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿ ಸರ್ಕಾರಿ ಪರೀಕ್ಷೆಯಲ್ಲಿ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾಳೆ ಎಂದು ಸುಳ್ಳು ಸುದ್ದಿ ಹಂಚಿಕೆ
ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿ ಸರ್ಕಾರಿ ಪರೀಕ್ಷೆಯಲ್ಲಿ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾಳೆ ಎಂದು ಸುಳ್ಳು ಸುದ್ದಿ ಹಂಚಿಕೆ

Claim :
ಸರ್ಕಾರಿ ಪರೀಕ್ಷೆಯ ಸಮಯದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ನಕಲು ಮಾಡುತ್ತಾ ಸಿಕ್ಕಿಬಿದ್ದಿದ್ದಾಳೆFact :
ನಕಲು ಮಾಡಿ ಸಿಕ್ಕಿ ಬಿದ್ದ ಆರೋಪಿಗಳು ಹಿಂದೂಗಳು ಎಂದು ಪೊಲೀಸರು ದೃಢಪಡಿಸಿದ್ದಾರೆ
ದೇಶದಾದ್ಯಂತ ಸದಾ ಯಾವುದಾದರೂ ಸರ್ಕಾರಿ ಹುದ್ದೆಗಳ ನೇಮಕ ಪರೀಕ್ಷೆಗಳಲ್ಲಿ ಅಕ್ರಮ, ನಕಲು ಆರೋಪಗಳು ಕೇಳಿಬರುತ್ತಲೇ ಇವೆ. ಇದರ ನಡುವೆ ಇತ್ತೀಚಿಗೆ ಸರ್ಕಾರಿ ಉದ್ಯೋಗದ ಪರೀಕ್ಷೆಯ ಸಮಯದಲ್ಲಿ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಅಭ್ಯರ್ಥಿಯೊಬ್ಬರು ನಕಲು ಮಾಡಲು ಸಹಾಯ ಮಾಡಲು ಮಹಿಳೆಯೊಬ್ಬರು ಹೈಟೆಕ್ ಉಪಕರಣಗಳನ್ನು ಬಳಸಿದ್ದಾರೆ. ನಕಲು ಮಾಡಲು ಮಹಿಳೆಯರು ಸ್ಪೈ ಕ್ಯಾಮೆರಾ, ವಾಕಿ-ಟಾಕಿಯಂತಹ ಸಾಧನಗಳನ್ನು ಬಳಸಿದ್ದಾರೆ. ಒಬ್ಬರು ಪರೀಕ್ಷಾ ಹಾಲ್ನಲ್ಲಿದ್ದಾಗ, ಮತ್ತೊಬ್ಬ ಮಹಿಳೆ ವಾಕಿ-ಟಾಕಿ ಮೂಲಕ ಉತ್ತರಗಳನ್ನು ಹೇಳಿಕೊಡುವ ಮೂಲಕ ವಂಚನೆ ಮಾಡಿದ್ದಾತೆ ಎಂದು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜುಲೈ 16, 2025ರಂದು ಫೇಸ್ಬುಕ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼʼಬುರ್ಖಾ ಧರಿಸಿ ಪರೀಕ್ಷೆ ಬರೆಯುವುದರಿಂದಾಗುವ ಅನುಕೂಲಗಳು. ಬಿಲಾಸ್ಪುರ ಜಿಲ್ಲೆಯ ರಾಮ್ ದುಲಾರೆ ಶಾಲೆಯಲ್ಲಿ ಪಿಡಬ್ಲ್ಯೂಡಿ ಸಿವಿಲ್ ಎಂಜಿನಿಯರ್ ಪರೀಕ್ಷೆ ಬರೆಯುತ್ತಿದ್ದ ಮುನ್ನಾ ಭಾಭಿ ಅವರ ಕಾಲರ್ನಲ್ಲಿ ಮೈಕ್ರೋ ಕ್ಯಾಮೆರಾ ಮತ್ತು ವಾಕಿ-ಟಾಕಿ ಇತ್ತು. ಎರಡನೇ ಅತ್ತಿಗೆ ಆಟೋದಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. #ಸ್ಪರ್ಧಾತ್ಮಕ ಪರೀಕ್ಷೆಗಳು... ಸರಕಾರಿ ಕೆಲಸ ಎಲ್ಲಿಂದ ಸಿಗುತ್ತೆ ನಿಯತ್ತಾಗಿ ಪರೀಕ್ಷೆ ಬರೆದವರಿಗೆ ಹೇಳಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ ೧೬, 2025ರಂದು ಫೇಸ್ಬುಕ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼ ಬುರ್ಖಾ ಧರಿಸಿ ಪರೀಕ್ಷೆ ಬರೆಯುವುದರಿಂದಾಗುವ ಅನುಕೂಲಗಳುಬಿಲಾಸ್ಪುರ ಜಿಲ್ಲೆಯ ರಾಮ್ ದುಲಾರೆ ಶಾಲೆಯಲ್ಲಿ ಪಿಡಬ್ಲ್ಯೂಡಿ ಸಿವಿಲ್ ಎಂಜಿನಿಯರ್ ಪರೀಕ್ಷೆ ಬರೆಯುತ್ತಿದ್ದ ಮುನ್ನಾ ಭಾಭಿ ಅವರ ಕಾಲರ್ನಲ್ಲಿ ಮೈಕ್ರೋ ಕ್ಯಾಮೆರಾ ಮತ್ತು ವಾಕಿ-ಟಾಕಿ ಇತ್ತು. ಎರಡನೇ ಅತ್ತಿಗೆ ಆಟೋದಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.#ಸ್ಪರ್ಧಾತ್ಮಕ ಪರೀಕ್ಷೆಗಳುʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮತ್ತೊಂದು ಪೊಸ್ಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಪೊಸ್ಟ್ನಲ್ಲಿ ಹೇಳಿದ ಹಾಗೆ ಸರ್ಕಾರಿ ಉದ್ಯೋಗಕ್ಕಾಗಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಯುವತಿ ಮುಸ್ಲಿಂ ಹುಡುಗಿ ಅಲ್ಲ, ಆಕೆಯ ಹೆಸರು ಅನುಸೂರ್ಯ ಇನ್ನೊಬ್ಬಳ ಹೆಸರು ಅನುರಾಧಾ ಇಬ್ಬರೂ ಹಿಂದೂಗಳು. ಪ್ರಕರಣದ ಆರೋಪಿಗಳು ಹಿಂದೂಗಳು ಎಂದು ಪೊಲೀಸರು ದೃಢಪಡಿಸಿದ್ದಾರೆ.
ನಾವು ವೈರಲ್ ಆದ ಪೊಸ್ಟ್ನ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜುಲೈ 14, 2025ರಂದು ಟೈಮ್ಸ್ ಆಫ್ ಇಂಡಿಯಾ ವೆಬ್ಸೈಟ್ನಲ್ಲಿ ʼChhattisgarh PWD exam scam: 2 sisters held with gadgets; candidate caught using spy camʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಬಿಲಾಸ್ಪುರದಲ್ಲಿ ನಡೆದ ಪಿಡಬ್ಲ್ಯೂಡಿ ಸಬ್-ಇಂಜಿನಿಯರ್ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ನಕಲು ಮಾಡಿದ್ದಕ್ಕಾಗಿ ಛತ್ತೀಸ್ಗಢದ ಜಶ್ಪುರದ ಇಬ್ಬರು ಸಹೋದರಿಯರನ್ನು ಬಂಧಿಸಲಾಗಿದೆ. 21 ವರ್ಷದ ಅಭ್ಯರ್ಥಿಯು ಗುಪ್ತ ಸ್ಪೈ ಕ್ಯಾಮೆರಾ ಮತ್ತು ಇಯರ್ಪೀಸ್ ಧರಿಸಿ ಪರೀಕ್ಷಾ ಹಾಲ್ಗೆ ಪ್ರವೇಶಿಸಿ, ಆಟೋರಿಕ್ಷಾದಲ್ಲಿ ಹೊರಗೆ ನಿಂತಿದ್ದ ತನ್ನ 19 ವರ್ಷದ ಸಹೋದರಿಗೆ ಪ್ರಶ್ನೆ ಪತ್ರಿಕೆಯನ್ನು ರವಾನಿಸಿದಳು. ಟ್ಯಾಬ್ಲೆಟ್, ಬ್ಲೂಟೂತ್ ಸಾಧನಗಳು ಮತ್ತು ವಾಕಿ-ಟಾಕಿಯೊಂದಿಗೆ, ತಂಗಿ ಉತ್ತರಗಳನ್ನು ಹುಡುಕಿ ಅವುಗಳನ್ನು ಹಿಂತಿರುಗಿಸಿದಳು. ಜಾಗೃತ ಟ್ಯಾಕ್ಸಿ ಚಾಲಕನೊಬ್ಬ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿ ವಿದ್ಯಾರ್ಥಿ ಕಾರ್ಯಕರ್ತರನ್ನು ಎಚ್ಚರಿಸಿದಾಗ ಹಗರಣ ಬಯಲಾಯಿತು, ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅನುಸೂರ್ಯ ಮತ್ತು ಅನುರಾಧ ಎಂಬ ಇಬ್ಬರು ಸಹೋದರಿಯರನ್ನು ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳೊಂದಿಗೆ ಬಂಧಿಸಲಾಯಿತು ಮತ್ತು ಐಟಿ ಕಾಯ್ದೆ, ಭಾರತೀಯ ನ್ಯಾಯ ಸಂಹಿತಾ ಮತ್ತು ಛತ್ತೀಸ್ಗಢ ಪರೀಕ್ಷಾ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು, ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಂಚನೆ ಜಾಲಗಳ ಹೆಚ್ಚುತ್ತಿರುವ ಅತ್ಯಾಧುನಿಕತೆಯನ್ನು ಬಹಿರಂಗಪಡಿಸಿತುʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಜುಲೈ 15, 2025ರಂದು ಇಂಡಿಯನ್ ಎಕ್ಸ್ಪ್ರೆಸ್ ಈ ಘಟನೆಯ ಕುರಿತು ಸಂಕ್ಷಿಪ್ತ ವರದಿ ಮಾಡಿರುವುದು ನಾವು ಕಂಡುಕೊಂಡಿದ್ದೇವೆ. ‘‘ಛತ್ತೀಸ್ಗಢ ವೃತ್ತಿಪರ ಪರೀಕ್ಷಾ ಮಂಡಳಿಯು ಬಿಲಾಸ್ಪುರದಲ್ಲಿ ಸಾರ್ವಜನಿಕ ಕಾರ್ಯ ಇಲಾಖೆಯಲ್ಲಿ 113 ಉಪ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ನಡೆಸಿತು. ಸರ್ಕಂಡದ ಸರ್ಕಾರಿ ರಾಮ್ದುಲಾರೆ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರೀಕ್ಷೆಯ ಸಮಯದಲ್ಲಿ, ಹೈಟೆಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅನುಸೂರ್ಯ ಮತ್ತು ಅನುರಾಧ ಎಂಬ ಇಬ್ಬರು ಸಹೋದರಿಯರನ್ನು ಬಂಧಿಸಿದರು. ಅಧಿಕಾರಿಗಳ ಪ್ರಕಾರ, ಪರೀಕ್ಷಾ ಹಾಲ್ನೊಳಗಿನ ಅಭ್ಯರ್ಥಿಯು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ ಗುಪ್ತ ಕ್ಯಾಮೆರಾವನ್ನು ಬಳಸಿಕೊಂಡು ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ಹೊರಗಿನ ತನ್ನ ಸಹೋದರಿಗೆ ರವಾನಿಸಿದಳು, ಈಕೆಯ ಕಿವಿಯಲ್ಲಿ ಈಯರ್ ಫೋನ್ ಕೂಡ ಇತ್ತು. ನಂತರ ಅವರು ವಾಕಿ-ಟಾಕಿ ಮೂಲಕ ಉತ್ತರಗಳನ್ನು ಪ್ರಸಾರ ಮಾಡಿದರು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಪಿ. ಮಂಡಲ್ ನೀಡಿದ ದೂರಿನ ಆಧಾರದ ಮೇಲೆ, ಬಿಲಾಸ್ಪುರದ ಸರ್ಕಂಡ ಪೊಲೀಸರಲ್ಲಿ ಬಿಎನ್ಎಸ್, ಐಟಿ ಕಾಯ್ದೆ ಮತ್ತು ಛತ್ತೀಸ್ಗಢ ಪರೀಕ್ಷಾ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಔಪಚಾರಿಕ ಪ್ರಕರಣ ದಾಖಲಿಸಲಾಗಿದೆ’’ ಎಂದು ವರದಿಯಾಗಿರುವುದನ್ನು ನೋಡಬಹುದು.
ಜುಲೈ 14 ರಂದು ಈಟಿವಿ ಭಾರತ್ ವೈರಲ್ ವೀಡಿಯೊದ ಸ್ಕ್ರೀನ್ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದನ್ನು ನೋಡಬಹುದು. ಬಿಲಾಸ್ಪುರದ ಸರ್ಕಂಡದಲ್ಲಿ ನಡೆದ ಸಬ್ ಎಂಜಿನಿಯರ್ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಇಬ್ಬರು ಸಹೋದರಿಯರು ವಂಚನೆ ಮಾಡುತ್ತಿರುವುದು ಕಂಡುಬಂದಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಅವರಲ್ಲಿ ಒಬ್ಬರು ಪರೀಕ್ಷೆ ಬರೆಯುತ್ತಿದ್ದರೆ, ಕೇಂದ್ರದ ಹೊರಗೆ ಆಟೋದಲ್ಲಿ ಕುಳಿತಿದ್ದ ಇನ್ನೊಬ್ಬರು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಅವರನ್ನು ಸಂಪರ್ಕಿಸುತ್ತಿದ್ದರು ಎಂದು ವರದಿ ತಿಳಿಸಿದೆ.
ಅನುಸೂರ್ಯ ತನ್ನ ಬಟ್ಟೆಯೊಳಗೆ ಕ್ಯಾಮೆರಾವನ್ನು ಬಚ್ಚಿಟ್ಟು, ಅದರ ಮೂಲಕ ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ತನ್ನ ಸಹೋದರಿ ಅನುರಾಧಾಗೆ ಕಳುಹಿಸಿದಳು. ಅವಳು ಆನ್ಲೈನ್ನಲ್ಲಿ ಉತ್ತರಗಳನ್ನು ಹುಡುಕಿ, ತಾನು ಧರಿಸಿದ್ದ ಮೈಕ್ರೋ-ಇಯರ್ಪೀಸ್ಗೆ ಸಂಪರ್ಕಗೊಂಡಿರುವ ವಾಕಿ-ಟಾಕಿ ಮೂಲಕ ಹಂಚಿಕೊಳ್ಳುತ್ತಿದ್ದಳು. ರಹಸ್ಯ ಕ್ಯಾಮೆರಾ, ಮೈಕ್ರೊಫೋನ್, ಬ್ಲೂಟೂತ್ ಸಾಧನ, ವಾಕಿ-ಟಾಕಿಗಳು, ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್ಗಳು ಸೇರಿದಂತೆ ಏಳು ಎಲೆಕ್ಟ್ರಾನಿಕ್ ಸಾಧನಗಳನ್ನು ಇಬ್ಬರು ಸಹೋದರಿಯರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ’’ ಎಂದು ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ನಲ್ಲಿ ವರದಿಯಾಗಿದೆ.
ಬಂಧಿತ ಅನುರಾಧ ಮತ್ತು ಅನುಸೂರ್ಯ ಅವರ ವಿವರಗಳನ್ನು ಒಳಗೊಂಡಂತೆ ಬಿಲಾಸ್ಪುರ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ವಿವರಣೆಯನ್ನು ನೀಡಿದ್ದಾರೆ. ಅನುರಾಧ ಮತ್ತು ಅನುಸೂರ್ಯ ಛತ್ತೀಸ್ಗಢದ ಜಶ್ಪುರ ಜಿಲ್ಲೆಯ ಕುಪರ್ಕಪ ಗ್ರಾಮದ ನಿವಾಸಿ ಕಾಲೇಶ್ವರ ರಾಮ್ ಅವರ ಮಕ್ಕಳು ಎಂಬ ಮಾಹಿತಿ ಇದರಲ್ಲಿದೆ. ಜುಲೈ 15, 2025 ರಂದು ಬಿಲಾಸ್ಪುರ ಪೊಲೀಸರು ಹಂಚಿಕೊಂಡ ಪೋಸ್ಟ್ ಅನ್ನು ಕೆಳಗೆ ನೋಡಬಹುದು.
ಜುಲೈ 14,2025ರಂದು ಎಬಿಪಿ ನ್ಯೂಸ್ ಯೂಟ್ಯೂಬ್ ಖಾತೆಯಲ್ಲಿ ʼSpy Cam Cheating: इंजीनियरिंग Exam में अंडरगारमेंट में मिला Spy Cam, दो बहनें गिरफ्तार!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ವರದಿಯನ್ನು ನೋಡಬಹುದು
ಇದರಿಂದ ಸಾಭೀತಾಗಿದ್ದೇನೆಂದರೆ, ಬಿಲಾಸ್ಪುರದಲ್ಲಿ ಸರ್ಕಾರಿ ಪರೀಕ್ಷೆಯ ಸಮಯದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ನಕಲು ಮಾಡುತ್ತಾ ಸಿಕ್ಕಿಬಿದ್ದಿದ್ದಾಳೆ ಎಂದು ಆರೋಪಿಸುತ್ತಿರುವ ವೈರಲ್ ಪೋಸ್ಟ್ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಇಲ್ಲಿ ನಕಲು ಮಾಡುತ್ತಿದ್ದ ಯುವತಿ ಮುಸ್ಲಿಂ ಅಲ್ಲ. ಆಕೆಯ ಹೆಸರು ಅನುಸೂರ್ಯ ಇನ್ನೊಬ್ಬಳ ಹೆಸರು ಅನುರಾಧಾ ಇಬ್ಬರೂ ಹಿಂದೂಗಳು. ಪ್ರಕರಣದ ಆರೋಪಿಗಳು ಹಿಂದೂಗಳು ಎಂದು ಪೊಲೀಸರು ದೃಢಪಡಿಸಿದ್ದಾರೆ.

