ಫ್ಯಾಕ್ಟ್ಚೆಕ್: ಇಸ್ರೇಲ್ಗೆ ಬೆಂಬಲ ನೀಡಿದ ಮೋದಿಗೆ ಇಸ್ರೇಲಿನ ಜನರು ಧನ್ಯವಾದ ಹೇಳಿದರು ಎಂದು 2024ರ ವಿಡಿಯೋ ಹಂಚಿಕೆ
ಇಸ್ರೇಲ್ಗೆ ಬೆಂಬಲ ನೀಡಿದ ಮೋದಿಗೆ ಇಸ್ರೇಲಿನ ಜನರು ಧನ್ಯವಾದ ಹೇಳಿದರು ಎಂದು 2024ರ ವಿಡಿಯೋ ಹಂಚಿಕೆ

Claim :
ಇಸ್ರೇಲ್ಗೆ ಬೆಂಬಲ ನೀಡಿದ ಮೋದಿಗೆ ಇಸ್ರೇಲಿನ ಜನರು ಧನ್ಯವಾದ ಹೇಳಿದರುFact :
ವೈರಲ್ ಆದ ವಿಡಿಯೋ 2024ರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು
ಇಸ್ರೇಲ್ ಧ್ವಜವನ್ನು ಧರಿಸಿರುವ ವಿದೇಶಿಯೊಬ್ಬ “ಜೈ ಶ್ರೀ ರಾಮ್” ಎಂದು ಕೂಗುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೆಲವರು ಈಗ ನಡೆಯುತ್ತಿರುವ ಅಮೆರಿಕಾ–ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ಸಂಬಂಧಿಸಿದ ವಿಡಿಯೋವೆಂದು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಬೆಂಬಲ ನೀಡಿರುವುದರಿಂದ ಇಸ್ರೇಲಿನ ಜನರು ಭಾರತಕ್ಕೆ ಧನ್ಯವಾದ ಹೇಳುತ್ತಿದ್ದಾರೆ ಮತ್ತು ಅದಕ್ಕಾಗಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಮಾರ್ಚ್ 02, 2026ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವಿಡಿಯೋವಿಗೆ ಶೀರ್ಷಿಕೆಯಾಗಿ ʼThank You Modi Ji for standing with Israelʼ ಎಂದು ಬರೆದಿರುವುದನ್ನು ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼಇಸ್ರೇಲ್ ಜೊತೆ ಭಾರತ ಇರುತ್ತೆ ಅಂತ ನರೇಂದ್ರ ಮೋದಿ ಅವರು ಹೇಳಿದ ಸಂದರ್ಭದಲ್ಲಿ ಇಸ್ರೇಲ್ ಜನರ ಖುಷಿ ನೋಡಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮಾರ್ಚ್ 04, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThank You Modi Ji for standing with Israelʼ ಎಂದು ಬರೆದಿರುವುದನ್ನಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಬೆಂಬಲ ನೀಡಿರುವುದರಿಂದ ಇಸ್ರೇಲಿನ ಜನರು ಭಾರತಕ್ಕೆ ಧನ್ಯವಾದʼ ಎಂದು ಹೇಳಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ 2024ರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು.
ನಾವು ವೈರಲ್ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ಲೆನ್ಸ್ ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮೇ 01, 2024ರಂದು ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ನಲ್ಲಿ ʼViral: Pro-Israel protester chants ‘Jai Shri Ram’ slogan at US university, here's what happenedʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ಈ ವರದಿಯಲ್ಲಿ ʼಅಮೆರಿಕದ ಒಂದು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರೊ-ಪ್ಯಾಲೆಸ್ಟೈನ್ ಪ್ರತಿಭಟನೆಗಳ ವೇಳೆ, ಇಸ್ರೇಲ್ ಪರವಾಗಿ ನಿಂತಿದ್ದ ಒಬ್ಬ ವ್ಯಕ್ತಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ಯಾಲೆಸ್ಟೈನ್ ಪರವಾಗಿ ದೊಡ್ಡ ಮಟ್ಟದ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿತ್ತು. ಈ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಸಮುದಾಯದ ಜನರು ಮತ್ತು ಶಿಕ್ಷಕರೂ ಭಾಗವಹಿಸುದ್ದರು. ಕೆಲವೆಡೆ ಈ ಪ್ರತಿಭಟನೆಗಳ ವೇಳೆ ವಿಶ್ವವಿದ್ಯಾಲಯ ಆವರಣದಲ್ಲಿ ತಂಗಿದ್ದ ನೂರಾರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆಗಳೂ ನಡೆದಿದೆ. ಈ ನಡುವೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಡೆದ ಒಂದು ಘಟನೆ ವೇಳೆ ಪ್ಯಾಲೆಸ್ಟೈನ್ ಪರ ಮತ್ತು ಇಸ್ರೇಲ್ ಪರವಾಗಿ ನಿಂತಿದ್ದ ಗುಂಪುಗಳ ನಡುವೆ ಘರ್ಷಣೆ ಕೂಡ ನಡೆದಿದೆ. ಇದೇ ವೇಳೆ, ಕೆಲವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದರೆಂದು ಹೇಳಲಾಗುತ್ತಿದ್ದು, ಅದಕ್ಕೆ ಪ್ರತಿಕ್ರಿಯೆಯಾಗಿ ಆ ವ್ಯಕ್ತಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿದನು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 29,2024ರಂದು ʼಇಂಡಿಯಾ ಟುಡೆʼ ಎಕ್ಸ್ ಖಾತೆಯಲ್ಲಿ ʼA video went viral on social media where a pro-Israel protester at the University of California in Los Angeles is heard chanting "Jai Shri Ram" in response to anti-India rhetoric during the pro-Palestine demonstrations. Watch the video to know moreʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ತುಂಬಾ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರತಿಭಟನೆ ಸಮಯದಲ್ಲಿ, ಇಸ್ರೇಲ್ ಪರವಾಗಿ ನಿಂತಿದ್ದ ಒಬ್ಬ ವ್ಯಕ್ತಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವುದು ಕಾಣಿಸುತ್ತದೆ. ಆ ಸಮಯದಲ್ಲಿ ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವರು ಭಾರತ ವಿರುದ್ಧ ಮಾತುಗಳನ್ನಾಡಿದ್ದಾರೆ ಎಂಬ ಮಾತುಗಳಿವೆ. ಅದಕ್ಕೆ ಪ್ರತಿಕ್ರಿಯೆಯಾಗಿ ಆ ವ್ಯಕ್ತಿ “ಜೈ ಶ್ರೀ ರಾಮ್” ಎಂದು ಕೂಗಿದ್ದಾನೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 29, 2024ರಂದು ʼಆರ್ ಡಿಜಿಟಲ್ʼ ಯೂಟ್ಯೂಬ್ ಚಾನೆಲ್ನಲ್ಲಿ ʼWhy Did Israeli Supporters Chant Slogans Of ‘Jai Shri Ram’? | Israel-Hamas Warʼ ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮೇ 01, 2024 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಅನೇಕ ಮಾಧ್ಯಮ ಸುದ್ದಿ ಹಾಗೂ ವೀಡಿಯೊ ವರದಿ ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಸ್ರೇಲ್ ಜೊತೆ ನಿಂತಿದ್ದಕ್ಕೆ ಇಸ್ರೇಲಿಗರು ಮೋದಿಗೆ ಧನ್ಯವಾದ ಹೇಳುತ್ತಿದ್ದಾರೆ ಎಂದು 2024ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

