ಫ್ಯಾಕ್ಟ್ಚೆಕ್: ಜಮ್ಮು-ಕಾಶ್ಮೀರದ ದೋಡಾದಲ್ಲಿ ಸೇನಾ ವಾಹನ ಉರುಳಿದೆ ಎಂದು ನೇಪಾಳದ ವಿಡಿಯೋ ಹಂಚಿಕೆ
ಜಮ್ಮು-ಕಾಶ್ಮೀರದ ದೋಡಾದಲ್ಲಿ ಸೇನಾ ವಾಹನ ಉರುಳಿದೆ ಎಂದು ನೇಪಾಳದ ವಿಡಿಯೋ ಹಂಚಿಕೆ

Claim :
ಜಮ್ಮು-ಕಾಶ್ಮೀರದ ದೋಡಾದಲ್ಲಿ ಕಂದಕಕ್ಕೆ ಸೇನಾ ವಾಹನ ಉರುಳಿದ್ದು ಎಂದು ವಿಡಿಯೋ ಹಂಚಿಕೆFact :
ನೇಪಾಳದಲ್ಲಿ ಸಂಭವಿಸಿದ ಹಳೆಯ ಸೇನಾ ಟ್ರಕ್ ಅಪಘಾತಕ್ಕೆ ಸಂಬಂಧಿಸಿದೆ ವಿಡಿಯೋ ವೈರಲ್
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವನ್ನು ಚಿತ್ರಿಸುವ ವೀಡಿಯೋವೊಂದು ವೈರಲ್ ಆಗುತ್ತಿದೆ. ವೀಡಿಯೊವನ್ನು ಗಮನಿಸಿದರೆ, ಸೇನಾ ಟ್ರಕ್ ಆಳವಾದ ಕಂದರಕ್ಕೆ ಬಿದ್ದಿರುವುದನ್ನು ಕಾಣಬಹುದು. ಸೈನಿಕರು ಟ್ರಕ್ನಿಂದ ಹೊರಬರಲು ಒಬ್ಬರಿಗೊಬ್ಬರು ಸಹಾಯ ಮಾಡುತ್ತಿರುವುದನ್ನು ನೋಡಬಹುದು. ದೋಡಾ ಅಪಘಾತದಲ್ಲಿ ಹತ್ತು ಸೈನಿಕರು ಹುತಾತ್ಮರಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಜನವರಿ 23, 2026ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಕಣಿವೆಗೆ ಉರುಳಿದ ಸೇನಾ ವಾಹನ 10ಯೋಧರ ದಾರುಣ ಸಾವುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಆಳವಾದ ಕಂದಕಕ್ಕೆ ಬಿದ್ದಿದ್ದು, 10 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ. ಮಧ್ಯಾಹ್ನ ಸುಮಾರು ಭದೇರ್ವಾ-ಚಂಬಾ ಅಂತರರಾಜ್ಯ ರಸ್ತೆಯ 9,000 ಅಡಿ ಎತ್ತರದ ಖನ್ನಿ ಟಾಪ್ನಲ್ಲಿ ಈ ಅವಘಾತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಗುಂಡು ನಿರೋಧಕ ಕ್ಯಾನ್ಸರ್ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ವಾಹನವು 200 ಅಡಿ ಆಳದ ಕಂದಕಕ್ಕೆ ಬಿದ್ದಿತುʼ ಎಂದು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಜನವರಿ 24, 2026ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ: 10 ಸೈನಿಕರು ಸಾ*..ವುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಜನವರಿ 24, 2026ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ: 10 ಸೈನಿಕರು ಸಾ*..ವು. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಆಳವಾದ ಕಂದಕಕ್ಕೆ ಬಿದ್ದಿದ್ದು, 10 ಸೈನಿಕರು ಸಾ*..ವನ್ನಪ್ಪಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ. ಮಧ್ಯಾಹ್ನ ಸುಮಾರು ಭದೇರ್ವಾ-ಚಂಬಾ ಅಂತರರಾಜ್ಯ ರಸ್ತೆಯ 9,000 ಅಡಿ ಎತ್ತರದ ಖನ್ನಿ ಟಾಪ್ನಲ್ಲಿ ಈ ಅಪ*..ಘಾತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಗುಂಡು ನಿರೋಧಕ ಕ್ಯಾಸ್ಪಿರ್ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ವಾಹನವು 200 ಅಡಿ ಆಳದ ಕಂದಕಕ್ಕೆ ಬಿದ್ದಿತುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ಘಟನೆಯದಲ್ಲ. ಈ ವಿಡಿಯೋ ನೇಪಾಳದಲ್ಲಿ ನಡೆದ ಹಳೆಯ ಸೇನಾ ಟ್ರಕ್ ಅಪಘಾತದದ್ದಾಗಿದ್ದು, ಇದನ್ನು ಭಾರತದ ದೋಡಾ ಜಿಲ್ಲೆಯ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.
ನಾವು ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಸೆಪ್ಟೆಂಬರ್ 16, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ವಿಡಿಯೋದಲ್ಲಿ ಕಾಣುವ ಕೆಲವು ಫೋಟೋಗಳನ್ನು ಹಂಚಿಕೊಂಡು ನೇಪಾಳಿ ಭಾಷೆಯಲ್ಲಿ ́दुखद् खबर : मकवानपुरको चुरियामाई नजिकै नेपाली सेनाको ट्रक दुर्घटना हुँदा १६ जना सेना घा:इते भएका छन्। घाइते मध्य ३ जनाको अवस्था गम्भीर रहेको प्रहरीले बताएको छ।ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ದುಃಖದ ಸುದ್ದಿ: ಮಕ್ವಾನ್ಪುರದ ಚುರಿಯಾಮೈ ಬಳಿ ನೇಪಾಳಿ ಸೇನೆಯ ಟ್ರಕ್ ಅಪಘಾತಕ್ಕೀಡಾಗಿದ್ದು, 16 ಸೈನಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ಕಾಣಬಹುದು.
ಇದೇ ವಿಡಿಯೋವನ್ನು ಸೆಪ್ಟೆಂಬರ್ 2025ರಂದು ನೇಪಾಳದ ಫೇಸ್ಬುಕ್ ಖಾತೆಗಳಲ್ಲಿ ಇದೇ ರೀತಿಯ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ಕಾಣಬಹುದು. ಚುರಿಯಾಮೈ ಪ್ರದೇಶದಲ್ಲಿ ನಡೆದ ನೇಪಾಳಿ ಸೇನೆಯ ಟ್ರಕ್ ಅಪಘಾತಕ್ಕೆ ಸಂಬಂಧಿಸಿದ ವೀಡಿಯೊವನ್ನು ನಾವಿಲ್ಲಿ ನೋಡಬಹುದು.
ಸೆಪ್ಟೆಂಬರ್ 16, 2025ರಂದು ʼನೇಪಾಳ್ ನ್ಯೂಸ್ʼ ಎಂಬ ವೆಬ್ಸೈಟ್ನಲ್ಲಿ ʼArmy truck accident in Makwanpur leaves 16 injuredʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಈ ವರದಿಯಲ್ಲಿ ʼಪೂರ್ವ-ಪಶ್ಚಿಮ ಹೆದ್ದಾರಿಯ ಚುರಿಯಾಮೈನ ಹೆತೌಡಾ ಸಬ್-ಮೆಟ್ರೋಪಾಲಿಟನ್ ಸಿಟಿ–15 ರಲ್ಲಿ ನೇಪಾಳ ಸೇನಾ ಟ್ರಕ್ ಅಪಘಾತಕ್ಕೀಡಾಗಿದ್ದು, 16 ಸಿಬ್ಬಂದಿ ಗಾಯಗೊಂಡಿದ್ದಾರೆ. ತನಹುನ್ನ ನಂ. 2 ರಾಜ್ದಲ್ ಬೆಟಾಲಿಯನ್ನ ಲೆಫ್ಟಿನೆಂಟ್ ಹರ್ಷ ಬಿಕ್ರಮ್ ಅಧಿಕಾರಿ ನೇತೃತ್ವದಲ್ಲಿ ಟ್ರಕ್ (ನೋಂದಣಿ ಸಂಖ್ಯೆ Lu1Ga 280), ಧನುಷಾ ಕಡೆಗೆ ಹೋಗುತ್ತಿದ್ದಾಗ ಚುರಿಯಾಮೈ ಸೇತುವೆಯಿಂದ ಸುಮಾರು 12 ಅಡಿ ಆಳದ ಹೊಳೆಗೆ ಬಿದ್ದಿತು. ಜಿಲ್ಲಾ ಪೊಲೀಸ್ ಕಚೇರಿ ವಕ್ತಾರ ಡಿಎಸ್ಪಿ ಶ್ಯಾಮು ಆರ್ಯಲ್ ಅವರ ಪ್ರಕಾರ, ಎಲ್ಲಾ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಹೆತೌಡಾ ಆಸ್ಪತ್ರೆಗೆ ದಾಖಲಿಸಲಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು.
ಜನವರಿ 22, 2026ರಂದು ಟಿವಿ9 ಕನ್ನಡ ವೆಬ್ಸೈಟ್ನಲ್ಲಿ ʼಜಮ್ಮು-ಕಾಶ್ಮೀರದ ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ, 10 ಸೈನಿಕರು ಸಾವುʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 10 ಮಂದಿ ಸೈನಿಕರು ಮೃತಪಟ್ಟಿದ್ದು, ಇನ್ನೂ 9 ಮಂದಿ ಗಾಯಗೊಂಡಿದ್ದಾರೆ. ಭದೇರ್ವಾ–ಚಂಬಾ ಅಂತಾರಾಜ್ಯ ರಸ್ತೆಯ ಖನ್ನಿ ಟಾಪ್ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ. ಒಟ್ಟು 17 ಮಂದಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನವು ಎತ್ತರದ ಪೋಸ್ಟ್ಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಮಾಹಿತಿ ದೊರಕಿದ ತಕ್ಷಣವೇ ಸೇನೆ ಮತ್ತು ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸ್ಥಳದಲ್ಲೇ ನಾಲ್ವರು ಸೈನಿಕರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಗಾಯಗೊಂಡಿದ್ದ ಉಳಿದ ಒಂಬತ್ತು ಸೈನಿಕರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಉಧಮ್ಪುರದ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ದೈನಿಕ ಜಾಗರಣ್ ವೆಬ್ಸೈಟ್ನಲ್ಲಿಯೂ ಸಹ ಇದೇ ಸುದ್ದಿಯ ವರದಿಯನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವಾಸ್ತವವಾಗಿ ʼಜಮ್ಮು-ಕಾಶ್ಮೀರದ ದೋಡಾದಲ್ಲಿ ಕಂದಕಕ್ಕೆ ಸೇನಾ ವಾಹನ ಉರುಳಿದ್ದು ನಿಜ. ಆದರೆ ವೈರಲ್ ಆದ ವಿಡಿಯೋವಿಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ನೇಪಾಳದಲ್ಲಿ ಸಂಭವಿಸಿದ ಹಳೆಯ ಸೇನಾ ಟ್ರಕ್ ಅಪಘಾತಕ್ಕೆ ಸಂಬಂಧಿಸಿದ್ದು.

