ಫ್ಯಾಕ್ಟ್ಚೆಕ್: ಪಹಲ್ಗಾಮ್ ದಾಳಿಯ ಬಂಧಿತ ಭಯೋತ್ಪಾದಕ ಆರ್ಎಸ್ಎಸ್ನಿಂದ ಹಣ ಪಡೆದುಕೊಂಡಿದ್ದ ಎಂದು 2016ರ ಫೋಟೋ ಹಂಚಿಕೆ
ಪಹಲ್ಗಾಮ್ ದಾಳಿಯ ಬಂಧಿತ ಭಯೋತ್ಪಾದಕ ಆರ್ಎಸ್ಎಸ್ನಿಂದ ಹಣ ಪಡೆದುಕೊಂಡಿದ್ದ ಎಂದು 2016ರ ಫೋಟೋ ಹಂಚಿಕೆ

Claim :
ವೈರಲ್ ಚಿತ್ರವು ಪಹಲ್ಗಾಮ್ನ ಭಯೋತ್ಪಾದಕರಿಗೆ ಆರ್ಎಸ್ಎಸ್ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂದು ಒಪ್ಪಿಕೊಂಡ ವ್ಯಕ್ತಿಯನ್ನು ಬಂಧಿಸಲಾಗಿದೆFact :
ವೈರಲ್ ಆಗಿರುವ ಫೋಟೋ 2016 ರಲ್ಲಿ ಬಿಎಸ್ಎಫ್ ಸೆರೆಹಿಡಿದ ಪಾಕಿಸ್ತಾನಿ ಭಯೋತ್ಪಾದಕನದ್ದು
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಹಿಂದೂ ಪ್ರವಾಸಿಗರನ್ನು ಅವರ ಧರ್ಮದ ಬಗ್ಗೆ ಕೇಳಿ ಹಿಂದೂಗಳ ಮೇಲೆ ಗುಂಡು ಹಾರಿಸಲಾಯಿತು. ಅದರ ನಂತರ, ಈ ಹೇಡಿತನದ ಕೃತ್ಯಕ್ಕೆ ಪ್ರತಿಕ್ರಿಯಿಸಲು, ಭಾರತವು ಏಪ್ರಿಲ್ 22, 2025 ರಂದು ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತವು ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸಂಘಟನೆಗಳ ನೆಲೆಗಳನ್ನು ಪುಡಿಗಟ್ಟಿತ್ತು.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಬಿಎಸ್ಎಫ್ ಸೈನಿಕರ ವಶದಲ್ಲಿರುವ ಭಯೋತ್ಪಾದಕನನ್ನು ತೋರಿಸುವ ಚಿತ್ರವೊಂದು ವೈರಲ್ ಆಗುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಬಂಧಿತ ಭಯೋತ್ಪಾದಕನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಸೃಷ್ಟಿಸಲು ಹಿಂದೂಗಳನ್ನು ಕೊಲ್ಲಲು ಶಸ್ತ್ರಾಸ್ತ್ರ ಮತ್ತು ಹಣವನ್ನು ಒದಗಿಸುತ್ತದೆ ಎಂದು ಒಪ್ಪಿಕೊಂಡಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಏಪ್ರಿಲ್ 22 ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼviral##tranding##vide## Allahu Akbarʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ನಾವು ಕ್ಯಾಪ್ಷನ್ನ್ನು ಸಹ ನೋಡಬಹುದು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಇಬ್ಬರು ಅರೆಸೈನಿಕ ಸಿಬ್ಬಂದಿಯ ವಶದಲ್ಲಿರುವ ಗಡ್ಡಧಾರಿ ವ್ಯಕ್ತಿಯನ್ನು ತೋರಿಸುವ ಚಿತ್ರವೊಂದು ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಸೆರೆಹಿಡಿಯಲಾದ ‘ಕಾಶ್ಮೀರ ಭಯೋತ್ಪಾದಕ’ ಆರೆಸ್ಸೆಸ್ನಿಂದ ಶಸ್ತ್ರಾಸ್ತ್ರಗಳು ಮತ್ತು ಹಣಕಾಸು ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ಇನ್ನೂ ಕೆಲವರು ಆರ್ಎಸ್ಎಸ್ ಈ ಭಯೋತ್ಪಾದಕರ ಹಿಂದಿರುವ ಉದ್ದೇಶ, ಕೋಮುದ್ವೇಷವೇ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 01, 2025ರಂದು ಎಕ್ಸ್ ಖಾತೆದಾರರೊಬ್ಬರು ʼपकड़े गए जिंदा कश्मीरी आतंकी ने पूछताछ के दौरान कहा कि RSS हमे हथियार और पैसा मुहैया कराती है और हिंदुओं को मारने के लिए कहती है, ताकि हिन्दुओ के दिमाग मे मुसलमानों के लिए नफरत भरी जा सकेʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜೀವಂತವಾಗಿ ಸಿಕ್ಕಿಬಿದ್ದ ಕಾಶ್ಮೀರಿ ಭಯೋತ್ಪಾದಕ ವಿಚಾರಣೆಯ ಸಮಯದಲ್ಲಿ RSS ನಮಗೆ ಶಸ್ತ್ರಾಸ್ತ್ರ ಮತ್ತು ಹಣವನ್ನು ಒದಗಿಸುತ್ತದೆ ಮತ್ತು ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಮರ ಮೇಲಿನ ದ್ವೇಷವನ್ನು ತುಂಬಲು ಹಿಂದೂಗಳನ್ನು ಕೊಲ್ಲಲು ಹೇಳುತ್ತದೆʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ಪೊಸ್ಟ್ಗಳನ್ನು ನೀವಿಲ್ಲಿ ನೋಡಬಹುದು.
ಕೆಲವು ಪಾಕಿಸ್ತಾನಿ ಖಾತೆಗಳಲ್ಲಿ ಕೂಡ ಈ ಫೋಟೋವನ್ನು ಹಂಚಿಕೊಂಡು ಆರ್ಎಸ್ಎಸ್ನಿಂದ ಭಯೋತ್ಪಾದಕರಿಗೆ ಹಣ ನೀಡಲಾಗಿದೆ ಎಂದು ಬರೆದುಕೊಳ್ಳಲಾಗಿದೆ. ಈ ಪೋಸ್ಟ್ಗಳನ್ನು ನೋಡಿದ ಸಾಕಷ್ಟು ಮಂದಿ ಜನ ಸಾಮಾನ್ಯರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಪೊಸ್ಟ್ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ, ವೈರಲ್ ಆದ ಚಿತ್ರವು 2016ರದ್ದಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಎಸ್ಎಫ್ ಸೆರೆಹಿಡಿದ ಪಾಕಿಸ್ತಾನಿ ಪ್ರಜೆ ಮತ್ತು ಎಲ್ಇಟಿ ಕಾರ್ಯಕರ್ತ ಅಬ್ದುಲ್ ಖಯೂಮ್ ಅವರನ್ನು ತೋರಿಸುತ್ತದೆ.
ನಾವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಪೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಸೆಪ್ಟೆಂಬರ್ 23, 2016 ರಂದು ಡಿಎನ್ಎ ಇಂಡಿಯಾ ʼBSF catch LeT activist from Pakistan near borderʼ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ ಫೋಟೋದೊಂದಿಗಿರುವ ವರದಿಯೊಂದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ ʼಅಂತರರಾಷ್ಟ್ರೀಯ ಗಡಿಯ ಬಳಿ ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನಿ ಪ್ರಜೆಯೊಬ್ಬರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಆ ವ್ಯಕ್ತಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ) ಜೊತೆ ಸಂಬಂಧ ಹೊಂದಿದ್ದ. ವರದಿಯ ಪ್ರಕಾರ, ಆ ವ್ಯಕ್ತಿಯನ್ನು ಪಾಕಿಸ್ತಾನದ ಸಿಯಾಲ್ಕೋಟ್ ಜಿಲ್ಲೆಯ ಪುಲ್ ಬಜುವಾನ್ ಗ್ರಾಮದ ನಿವಾಸಿ ಭಾಗ್ ಅಲಿ ಅವರ ಮಗ 32 ವರ್ಷದ ಅಬ್ದುಲ್ ಖಯೂಮ್ ಎಂದು ಗುರುತಿಸಲಾಗಿದೆ. ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು ಮತ್ತು ಆತನ ಬಳಿ ಡ್ಯುಯಲ್ ಸಿಮ್ ನೋಕಿಯಾ ಮೊಬೈಲ್ ಫೋನ್ ಇತ್ತು ಎಂದು ತಿಳಿದು ಬಂದಿದೆ" ಎಂದು ತಿಳಿಸಿದ್ದಾರೆ
ಸೆಪ್ಟೆಂಬರ್ 24, 2016 ರಂದು ʼಇಂಡಿಯಾ ಟಿವಿʼ ಪ್ರಕಟಿಸಿದ ವೀಡಿಯೊ ವರದಿಯಲ್ಲಿ ಈ ಚಿತ್ರ ಕಂಡು ಬಂದಿದೆ. ವರದಿಯ ಪ್ರಕಾರ, ಚಿತ್ರದಲ್ಲಿರುವ ವ್ಯಕ್ತಿ ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ ಕಯೂಮ್, ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ಭಾರತದ ಕಡೆಗೆ ದಾಟಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ. ಆತನಿಗೆ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಖಯೂಮ್ ಬಂಧನದ ಬಗ್ಗೆ ನ್ಯೂಸ್ 18 ಇಂಡಿಯಾ ವರದಿ ಮಾಡಿದ್ದ ವಿವರಗಳು ಸಹ ಲಭ್ಯವಾಗಿದ್ದು ಈ ವರದಿಗಳಲ್ಲಿ ಕೂಡ ಖಯೂಮ್ ಲಷ್ಕರ್-ಎ-ತೈಬಾ ಸ್ಥಾಪಕ ಹಫೀಜ್ ಸಯೀದ್ ಜೊತೆ ನಿಕಟ ಸಂಬಂಧ ಹೊಂದಿರುವ ಕಟ್ಟಾ ಭಯೋತ್ಪಾದಕನಂತೆ ಕಾಣುತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಆಯೋಜಿಸಲಾಗುತ್ತಿದೆ ಎಂಬ ಹೇಳಿಕೆಗೆ ಇದು ಮತ್ತಷ್ಟು ಪುರಾವೆಗಳನ್ನು ಒದಗಿಸಿದ್ದರಿಂದ, ಆತನ ಬಂಧನವನ್ನು ಬಿಎಸ್ಎಫ್ಗೆ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ ಎಂಬ ಅಂಶವನ್ನು ಕೂಡ ಈ ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಸೆಪ್ಟಂಬರ್ 26,2016ರಂದು ʼBSF troops arrested a Pakistani national while trying to cross LoC, says he is an activist of LeTʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಲ್ಲಿ (ಅಕ್ಟೋಬರ್ ವರೆಗೆ) 17 ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಮತ್ತು 31 ಒಳನುಸುಳುವವರು ಕೊಲ್ಲಲ್ಪಟ್ಟಿದ್ದಾರೆ ಎಂದು ಅದು ಉಲ್ಲೇಖಿಸಿದೆ. ಇನ್ಖಬರ್ ಅಧಿಕಾರಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಬಂಧನದ ಕುರಿತು ವೀಡಿಯೊ ವರದಿಯನ್ನು ಪ್ರಕಟಿಸಿದ್ದರು.
ಸಂಬಂಧಿತ ಕೀವರ್ಡ್ಗಳನ್ನು ಹುಡುಕಿದ ಮೂಲಕ ಹೆಚ್ಚಿನ ತನಿಖೆ ನಡೆಸಿದಾಗ, ವೈರಲ್ ಚಿತ್ರದಲ್ಲಿ ಕಂಡುಬರುವ ವ್ಯಕ್ತಿಯ ಫೋಟೋಗಳು ಮತ್ತು ವೀಡಿಯೊಗಳೊಂದಿಗೆ 8 ವರ್ಷಗಳ ಹಿಂದೆ ಪ್ರಕಟವಾದ ಹಲವಾರು ಮಾಧ್ಯಮ ವರದಿಗಳು ನಮಗೆ ಕಂಡುಬಂದವು. ಎಲ್ಲಾ ವರದಿಗಳು ಹೇಳುವಂತೆ, ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ನಿಂದ ಬಿಎಸ್ಎಫ್ ಅವರನ್ನು ಬಂಧಿಸಲಾಯಿತು. ತನಿಖೆಯ ಸಮಯದಲ್ಲಿ ಈ ಭಯೋತ್ಪಾದಕನ ಹೆಸರು ಅಬ್ದುಲ್ ಖಯ್ಯೂಮ್ ಎಂದು ತಿಳಿದುಬಂದಿದೆ ಮತ್ತು ಅವನು ಪಾಕಿಸ್ತಾನದ ಸಿಯಾಲ್ಕೋಟ್ ನಿವಾಸಿ ಎಂದು ತಿಳಿದುಬಂದಿದೆ. ಆ ಸಮಯದಲ್ಲಿ, ಈ ವಿಷಯದ ಬಗ್ಗೆ ಪತ್ರಿಕಾ, ಇಂಡಿಯಾ ಟುಡೇ ಮತ್ತು ಕ್ವಿಂಟ್ ಸಹ ವರದಿಗಳನ್ನು ಪ್ರಕಟಿಸಿದ್ದವು.
ಇದರಿಂದ ಸಾಭೀತಾಗಿದ್ದೇನೆಂದರೆ, 2016 ರಲ್ಲಿ ಬಿಎಸ್ಎಫ್ನಿಂದ ಸೆರೆಹಿಡಿಯಲ್ಪಟ್ಟ ಅಬ್ದುಲ್ ಖಯೂಮ್ ಎಂಬ ಪಾಕಿಸ್ತಾನಿ ಪ್ರಜೆಯನ್ನು, ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಯನ್ನು ಸೆರೆಹಿಡಿದಾಗ, ರಾಷ್ಟ್ರೀಯ ಸ್ವಯಂಸೇವಕ ಸಂಘ ತಮಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂದು ಮಾಹಿತಿ ನೀಡಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

