ಫ್ಯಾಕ್ಟ್ಚೆಕ್: ಆಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಎಐ ವಿಡಿಯೋ ಹಂಚಿಕೆ
ಆಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಎಐ ವಿಡಿಯೋ ಹಂಚಿಕೆ

Claim :
ಆಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.Fact :
ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ
ಇತ್ತೀಚೆಗೆ ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನದ ಅಪಘಾತದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿದೆ. ಇದೀಗ ಆಗ್ರಾ ವಿಮಾನ ನಿಲ್ದಾಣದ ಹೆಸರಿನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋವನ್ನು ನೋಡುವುದಾದರೆ, ವಿಮಾನವೊಂದು ಲ್ಯಾಂಡ್ ಆಗುವ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವುದನ್ನು ನೋಡಬಹುದು. ಭಾರತದ ಆಗ್ರಾ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ನೈಜ ಘಟನೆಯನ್ನು ಚಿತ್ರಿಸಲಾಗಿದೆ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಲಾಗುತ್ತಿದೆ.
ಜುಲೈ 1, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ಆಗ್ರಾದಿಂದ ಬಂದದ್ದು ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್ ಮಾಡಿ, ʼCrash Landing. Agra k airport par bhut badha hadsha hua aj. Btaya ja Raha ki lending ke doran tayar se chingari se Aag Igaʼ ಎಂಬ ಕ್ಯಾಪ್ಷನ್ನ್ನೀಡಿ ಪೊಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಆಗ್ರಾ ವಿಮಾನ ನಿಲ್ದಾಣದಲ್ಲಿ ಒಂದು ದೊಡ್ಡ ಘಟನೆ ಸಂಭವಿಸಿದೆ. ಲ್ಯಾಂಡಿಂಗ್ ಸಮಯದಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 18,2025ರಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ರನ್ವೇಯಲ್ಲಿ ಇಳಿದ ಕೂಡಲೇ ವಿಮಾನವೊಂದು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಗ್ರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನದ ಚಕ್ರಗಳಿಂದ ಬಂದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಈ ವಿಡಿಯೋವನ್ನು ಎಐ ಬಳಸಿ ರಚಿಸಲಾಗಿದೆ.
ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಯಾವುದೇ ಫಲಿತಾಂಶ ಸಿಗಲಿಲ್ಲ. ನಂತರ ನಾವು ವೈರಲ್ ಕ್ಲೇಮ್ಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿ ಕೀವರ್ಡ್ಗಳೊಂದಿಗೆ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದ ಹೇಳಿಕೆಯನ್ನು ದೃಢೀಕರಿಸುವ ಒಂದೇ ಒಂದು ಸುದ್ದಿ ನಮಗೆ ಸಿಗಲಿಲ್ಲ. ಆಗ್ರಾದಲ್ಲಿ ಎಲ್ಲಿಯಾದರೂ ವಿಮಾನ ಅಪಘಾತಕ್ಕೀಡಾಗಿದ್ದರೆ, ಅದು ಖಂಡಿತವಾಗಿಯೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು.ಆದರೆ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ. ನಂತರ ನಾವು ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಡಿಯೋದಲ್ಲಿ ʼಎಕ್ಸ್ಟ್ರೀಮ್ ಡ್ರೈವ್ʼ ಎಂದು ಲೋಗೋ ವಾಟರ್ಮಾರ್ಕ್ ಇರುವುದನ್ನು ಕಾಣಬಹುದು.
ಇದನ್ನೇ ನಾವು ಸುಳಿವಾಗಿ ತೆಗೆದುಕೊಂಡು ನಾವು ಇನ್ಸ್ಟಾಗ್ರಾಮ್ನಲ್ಲಿ ʼಎಕ್ಸ್ಟ್ರೀಮ್ ಡ್ರೈವ್ʼ ಹೆಸರಿನ ಖಾತೆಯನ್ನು ಸರ್ಚ್ ಮಾಡಿದಾಗ, ಮೇ 1ರಂದು ಇಲ್ಲಿ ಅಪ್ಲೋಡ್ ಮಾಡಲಾದ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ.
ಅನೇಕ ಬಳಕೆದಾರರು ತಮ್ಮ ಕಾಮೆಂಟ್ಗಳಲ್ಲಿ ಇದನ್ನು AI ವಿಡಿಯೋ ಎಂದು ಕರೆದಿದ್ದಾರೆ. ಈ ವಿಡಿಯೋ ಹಲವಾರು ವೇದಿಕೆಗಳಲ್ಲಿ ಕಂಡುಬಂದಿದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ ವಿಭಿನ್ನ ದಿನಾಂಕಗಳಲ್ಲಿ ವಿಭಿನ್ನ ಹೇಳಿಕೆಯೊಂದಿಗೆ ವೈರಲ್ ಮಾಡಲಾಗಿದೆ.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಮಾನದ ಲೋಗೋ ವಿಚಿತ್ರವಾಗಿದೆ. ಲೋಗೋದ ಬದಲಿಗೆ ಅಸ್ಪಷ್ಟ ಪದಗಳನ್ನು ಬಳಸಲಾಗಿದೆ. ಅದೇ ರೀತಿ, ವಿಮಾನದ ಕಿಟಕಿಗಳು ಅಸ್ವಾಭಾವಿಕವಾಗಿ ಅಲುಗಾಡುತ್ತಿರುವುದು ನೋಡಬಹುದು. ವಿಮಾನ ಕೆಳಗೆ ಬಿದ್ದಾಗ ಅವು ತಮ್ಮ ಆಕಾರವನ್ನು ಬದಲಾಯಿಸುತ್ತವೆ. ಇದೆಲ್ಲವೂ ವೈರಲ್ ವೀಡಿಯೊ ನಿಜವಲ್ಲ ಎಂಬ ಅನುಮಾನ ಮೂಡಿತು. ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 96% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 87.2% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ಆಗ್ರಾದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.