ಫ್ಯಾಕ್ಟ್ಚೆಕ್: ಡಾ. ಬಿ ಆರ್ ಅಂಬೇಡ್ಕರ್ರವರು ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ರೊಂದಿಗೆ ಬೈಕ್ನಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂದು ಎಐ ಚಿತ್ರ ಹಂಚಿಕೆ
ಡಾ. ಬಿ ಆರ್ ಅಂಬೇಡ್ಕರ್ರವರು ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ರೊಂದಿಗೆ ಬೈಕ್ನಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂದು ಎಐ ಚಿತ್ರ ಹಂಚಿಕೆ

Claim :
ಡಾ. ಬಿಆರ್ ಅಂಬೇಡ್ಕರ್ ಅವರು ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ರೊಂದಿಗೆ ಬೈಕ್ನಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆFact :
ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ರವರ ಮೋಟಾರ್ ಬೈಕ್ನಲ್ಲಿ ಪ್ರಯಾಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಈ ಫೋಟೋವನ್ನು ಕ್ರಿಸ್ಟೋಫರ್ ಜೆಮಿನಿ ಎಂಬುವವರು ತೆಗೆದಿದ್ದಾರೆ ಎಂದು ಬರೆದುಕೊಳ್ಳಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಮೇ 04, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼभारत रत्न पूज्यनीय डा० बाबा साहब भीमराव रामजी अम्बेडकर और RSS के संस्थापक पूज्यनीय केशवराव बलिराम हेडगेवार जी एक ही मोटर साइकिल पे .दुर्लभ चित्र. आज दौर में इस चित्र का विशेष महत्व है RSS को लेकर कैसी-कैसी भ्रांतियां गढ़ी गई है , जबकि इस चित्र से सब कुछ साफ है कि दोनों महापुरुषों के मन में हिंदू समाज को लेकर चिंता थी । चित्र कभी झूठ नहीं बोलतेʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತ ರತ್ನ ಪೂಜ್ಯ ಡಾ. ಬಾಬಾಸಾಹೇಬ್ ಭೀಮರಾವ್ ರಾಮ್ಜಿ ಅಂಬೇಡ್ಕರ್ ಮತ್ತು ಆರ್ಎಸ್ಎಸ್ ಸಂಸ್ಥಾಪಕ ಪೂಜ್ಯ ಕೇಶವರಾವ್ ಬಲಿರಾಮ್ ಹೆಡ್ಗೆವಾರ್ ಅವರು ಒಂದೇ ಮೋಟಾರ್ ಸೈಕಲ್ನಲ್ಲಿ. ಅಪರೂಪದ ಛಾಯಾಚಿತ್ರ. ಇಂದಿನ ಯುಗದಲ್ಲಿ, ಈ ಛಾಯಾಚಿತ್ರವು ವಿಶೇಷ ಮಹತ್ವವನ್ನು ಹೊಂದಿದೆ. ಆರ್ಎಸ್ಎಸ್ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಹೆಣೆಯಲಾಗಿದೆ, ಆದರೆ ಈ ಛಾಯಾಚಿತ್ರವು ಇಬ್ಬರೂ ಮಹಾನ್ ಪುರುಷರು ಹಿಂದೂ ಸಮಾಜದ ಬಗ್ಗೆ ಕಾಳಜಿ ವಹಿಸಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಛಾಯಾಚಿತ್ರಗಳು ಎಂದಿಗೂ ಸುಳ್ಳು ಹೇಳುವುದಿಲ್ಲʼ ಎಂಬ ಶೀರ್ಷಿಕೆಯೊಂದಿಗಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 02, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼಡಾ. ಹೆಡ್ಗೆವಾರ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ರವರುʼ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋವಿನಲ್ಲಿ ಕ್ಯಾಪ್ಷನ್ ಆಗಿ ʼHonorable Dr Hegdevar & Honorable Dr BR. Ambedkar Photo by: Christopher Gemini. RARE TO RARE PHOTO AVAILABLEʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಫೋಟೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಏಪ್ರಿಲ್ 28, 2025ರಂದು ಎಕ್ಸ್ ಖಾತೆದಾರರೊಬ್ಬರು ಸಹ ಇದೇ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ಪೊಸ್ಟ್ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ಚಿತ್ರವನ್ನು ಎಐ ಬಳಸಿ ರಚಿಸಲಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ವೈರಲ್ ಫೋಟೋ ಕುರಿತು ಯಾವುದೇ ವಿಶ್ವಾಸಾರ್ಹ ಸುದ್ದಿಗಳು, ಆರ್ಕೈವ್ಗಳು, ಇತಿಹಾಸ ಪುಸ್ತಕಗಳು ಅಥವಾ ಡಾ. ಅಂಬೇಡ್ಕರ್ ಅಥವಾ ಹೆಡ್ಗೆವಾರ್ ಅವರಿಗೆ ಸಂಬಂಧಿಸಿದ ಅಧಿಕೃತ ಸಂಗ್ರಹಗಳಲ್ಲಿ ಲಭ್ಯವಾಗಿಲ್ಲ. ಬದಲಾಗಿ, ಇದು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ಆನ್ಲೈನ್ ವೇದಿಕೆಗಳಲ್ಲಿ ಮಾತ್ರ ಕಂಡುಬರುತ್ತದೆ, ಯಾವುದೇ ವಿಶ್ವಾಸಾರ್ಹ ಮೂಲವಿಲ್ಲ. ಇದು ನಿಜವಾದ ಐತಿಹಾಸಿಕ ಛಾಯಾಚಿತ್ರವಾಗಿದ್ದರೆ, ಅದು ಬಹುತೇಕ ವಸ್ತುಸಂಗ್ರಹಾಲಯ ಸಂಗ್ರಹ, ಜೀವನಚರಿತ್ರೆ ಅಥವಾ ರಾಷ್ಟ್ರೀಯ ಆರ್ಕೈವ್ಗಳ ಭಾಗವಾಗಿರುತ್ತಿತ್ತು.
ಪೋಸ್ಟ್ನಲ್ಲಿರುವ ಫೋಟೊ ಕೃಪೆಯ “ಕ್ರಿಸ್ಟೋಫರ್ ಜೆಮಿನಿ” ಹೆಸರಿನ ಮೂಲಕ ಸರ್ಚ್ ಮಾಡಿದಾಗ, ಐತಿಹಾಸಿಕ ಆರ್ಕೈವ್ಗಳು ಅಥವಾ ವಿಶ್ವಾಸಾರ್ಹ ಮೂಲಗಳಲ್ಲಿ ಅಂತಹ ಯಾವುದೇ ಛಾಯಾಗ್ರಾಹಕರ ದಾಖಲೆ ಕಂಡುಬಂದಿಲ್ಲ. ಈ ವೈರಲ್ ಚಿತ್ರದಲ್ಲಿ ಮಾತ್ರವೇ ಹೆಸರು ಕಾಣಿಸಿಕೊಳ್ಳುತ್ತದೆ, ಯಾವುದೇ ಹಿನ್ನೆಲೆ, ಪೋರ್ಟ್ಫೋಲಿಯೊ ಅಥವಾ ಭಾರತೀಯ ಇತಿಹಾಸಕ್ಕೆ ಸಂಬಂಧಿಸಿಲ್ಲ.
ನಂತರ ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದಾಗ ಇದರ ಮೂಲ ಫೋಟೋ ಲಭ್ಯವಾಗಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದೆರೆಡು ವಾರಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ಗಳು ಮಾತ್ರ ಕಂಡು ಬಂದಿದೆ. ಹೀಗಾಗಿ ವೈರಲ್ ಫೋಟೋ ವಿವಿಧ ಅನುಮಾನಗಳಿಗೆ ಕಾರಣವಾಯಿತು. ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಎಕ್ಸ್ ಖಾತೆದಾರರೊಬ್ಬರು ʼYour journalism is as fake as this photo. This is Chitra Tripathi's merit. Even a child could tell the photo is AI-generated, but to them, it seems original. Just get them to preach against the caste censusʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಿಮ್ಮ ಪತ್ರಿಕೋದ್ಯಮವು ಈ ಫೋಟೋದಷ್ಟೇ ನಕಲಿ. ಇದು ಚಿತ್ರಾ ತ್ರಿಪಾಠಿ ಅವರ ಅರ್ಹತೆ. ಒಂದು ಮಗು ಕೂಡ ಈ ಫೋಟೋವನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಬಹುದು, ಆದರೆ ಅವರಿಗೆ ಅದು ಮೂಲದಂತೆ ತೋರುತ್ತದೆ. ಜಾತಿ ಜನಗಣತಿಯ ವಿರುದ್ಧ ಅವರನ್ನು ಬೋಧಿಸುವಂತೆ ಮಾಡಿʼ ಎಂದು ಬರೆದಿರುವುದನ್ನು ನೋಡಬಹುದು. ಇದರಲ್ಲಿ ಚಿತ್ರವನ್ನು ಎಐ ಬಳಸಿ ರಚಿಸಲಾಗಿದೆ ಎಂದು ಬರೆದಿರುವುದನ್ನು ನೋಡಬಹುದು.
ಇನ್ನು ವೈರಲ್ ಫೋಟೋವನ್ನು ನಾವು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ಇದರ ನೋಂದಣಿ ಸಂಖ್ಯೆ 78787655 ಎಂದು ಇರುವುದು ಕಂಡುಬಂದಿದೆ. ಆದರೆ ಈ ರೀತಿಯ ನೋಂದಣಿ ಸಂಖ್ಯೆ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಭಾರತದಲ್ಲಿ ಇರಲಿಲ್ಲ ಎಂಬುದು ಕಂಡು ಬಂದಿದೆ. ಇದರ ಬದಲು ಪ್ರಾಂತೀಯ ಕೋಡ್ಗಳನ್ನು ಆಧರಿಸಿ ಆಲ್ಫಾನ್ಯುಮೆರಿಕ್ ಸ್ವರೂಪವನ್ನು ಬ್ರಿಟಿಷರ ಅವಧಿಯಲ್ಲಿ ಅನುಸರಿಸಲಾಗುತ್ತಿತ್ತು. ಉದಾಹರಣೆಗೆ ಮೈಸೂರಿಗೆ MYS XXXX, ಬಾಂಬೆಗೆ B XXXX ಎಂಬ ಕೋಡ್ಗಳು ಇರುತ್ತಿದ್ದವು. ಆದರೆ ಎಂಟು ಅಂಕಿಯ ಸಂಖ್ಯೆಯ ನೋಂದಣಿ ವ್ಯವಸ್ಥೆ ಆ ಕಾಲಘಟ್ಟದಲ್ಲಿ ಇರಲಿಲ್ಲ.
ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಫೋಟೊವನ್ನು AI ಮೂಲಕ ಅಥವಾ ಡಿಜಿಟಲ್ ಟ್ಯಾಂಪರಿಂಗ್ನ ವಿಶಿಷ್ಟ ಚಿಹ್ನೆಗಳು ಕಂಡುಬರುತ್ತವೆ. ಮಸುಕಾದ ಅಥವಾ ಅಪೂರ್ಣ ಮುಖಗಳು, ಅಸ್ವಾಭಾವಿಕ ದೇಹದ ಭಂಗಿಗಳು. ಬೈಕ್ನಲ್ಲಿರುವ ಇಬ್ಬರು ವ್ಯಕ್ತಿಗಳು ಅಸಾಧಾರಣವಾಗಿ ಗಟ್ಟಿಯಾಗಿ ಕಾಣುತ್ತಾರೆ, ಹಿನ್ನೆಲೆಗೆ ಹೊಂದಿಕೆಯಾಗದ ಬೆಳಕಿರುವುರಿಂದ, ಫೋಟೋ ಅಧಿಕೃತವಲ್ಲ ಎಂದು ಸೂಚಿಸುತ್ತದೆ.
ನಾವು ವೈರಲ್ ಆದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 52.1 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಈ ಲೋಪಗಳನ್ನು ಆಧರಿಸಿ ವೈರಲ್ ಫೋಟೋವನ್ನು was it AI ಎಂಬ ಎಐ ಫೋಟೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು ಎಐನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗುತ್ತಿದೆ.

