ಫ್ಯಾಕ್ಟ್ಚೆಕ್: ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಪೊಲೀಸರ ವಶಕ್ಕೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಪೊಲೀಸರ ವಶಕ್ಕೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

Claim :
ಹಿಂದೂ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆFact :
ಇದೊಂದು ಕಿರುಚಿತ್ರಕ್ಕೆ ಸಂಬಂಧಿಸಿ ಸ್ಕ್ರಿಪ್ಟೆಡ್ ವಿಡಿಯೋ
ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೀಲಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಮನೆಯಿಂದ ಓಡಿಹೋಗಲು ಯತ್ನಿಸುತ್ತಾನೆ. ಆದರೆ, ಪೊಲೀಸರು ಆತನ ಕಾಲರ್ ಹಿಡಿದು ಸೋಫಾದ ಮೇಲೆ ಕೂರಿಸುತ್ತಾರೆ. ವೀಡಿಯೊದಲ್ಲಿ ಪೊಲೀಸರ ಜೊತೆಗೆ ಬಿಳಿ ಶರ್ಟ್ ಧರಿಸಿದ ವ್ಯಕ್ತಿ ಮತ್ತು ನೀಲಿ ಕುರ್ತಾ ಧರಿಸಿದ ಮಹಿಳೆಯೂ ಕಾಣಿಸುತ್ತಾರೆ. ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ, ಪೊಲೀಸರಿಗೆ ರೆಡ್ಹ್ಯಾಂಡ್ಆಗಿ ಸಿಕ್ಕಿಬಿದ್ದ ಸಂದರ್ಭದಲ್ಲಿ ಓಡಿಹೋಗಲು ಯತ್ನಿಸಿದ ಘಟನೆ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಜುಲೈ 26, 2025ರಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ʼರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹಿಂದೂ-ಮುಸ್ಲಿಂ ಜೋಡಿ. ತನ್ನ ಹೆಸರು “ಗೌರವ್” ಎಂದು ಹೇಳಿ, ಹಿಂದೂ ಯುವತಿಯೊಡನೆ ಪ್ರೇಮ ವ್ಯವಹಾರ ಮಾಡುತ್ತಿದ್ದ ಸಲೀಂ ಎಂಬ ಮುಸ್ಲಿಂ ಯುವಕ ಪೊಲೀಸರ ಎದುರು ಸತ್ಯ ಗೊತ್ತಾದಾಗ, ಓಡಲು ಯತ್ನಿಸಿದ. ಮೋಸ ತಿಳಿದ ಹಿಂದೂ ಯುವತಿಗೆ ಆಶ್ಚರ್ಯ. ಈ ಘಟನೆ “ಸತ್ಯದ ಕನ್ನಡಿ”. ಹಿಂದೂ ಸಹೋದರಿಯರು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಉತ್ತಮವಾಗಿರುತ್ತದೆ’’ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.(ಆರ್ಕೈವ್)
ಜುಲೈ 24, 2025ರಂದು ಮತ್ತೊಂದು ಫೇಸ್ಬುಕ್ ಬಳಕೆದಾರರೊಬ್ಬರು ಸಹ ‘ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹಿಂದೂ-ಮುಸ್ಲಿಂ ಜೋಡಿ. ತನ್ನ ಹೆಸರು “ಗೌರವ್” ಎಂದು ಹೇಳಿ, ಹಿಂದೂ ಯುವತಿಯೊಡನೆ ಪ್ರೇಮ ವ್ಯವಹಾರ ಮಾಡುತ್ತಿದ್ದ ಸಲೀಂ ಎಂಬ ಮುಸ್ಲಿಂ ಯುವಕ ಪೊಲೀಸರ ಎದುರು ಸತ್ಯ ಗೊತ್ತಾದಾಗ, ಓಡಲು ಯತ್ನಿಸಿದ. ಮೋಸ ತಿಳಿದ ಹಿಂದೂ ಯುವತಿಗೆ ಆಶ್ಚರ್ಯ. ಈ ಘಟನೆ “ಸತ್ಯದ ಕನ್ನಡಿ”. ಹಿಂದೂ ಸಹೋದರಿಯರು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಕೃಷಿ ತೋಟ ಹಿಂದೂಗಳದ್ದಾಗಿರುತ್ತದೆ, ಮತ್ತು ಬೀಜಗಳು "ಜಿಹಾದಿ"ಗಳದ್ದಾಗಿರುತ್ತದೆ.!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.(ಆರ್ಕೈವ್)
ಜುಲೈ 23,2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲೂ ವೈರಲ್ ಆದ ಕ್ಲೈಮ್ನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.(ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ವೈರಲ್ ವಿಡಿಯೋ ಕಿರುಚಿತ್ರಕ್ಕೆ ಸಂಬಂಧಿಸಿದ್ದಾಗಿದೆ.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜುಲೈ 28, 2025 ರಂದು ʼಮಾಂಟಿ ದೀಪಕ್ ಶರ್ಮಾʼ ಎಂಬ ಫೇಸ್ಬುಕ್ ಖಾತೆಯಲ್ಲಿ ʼआख बंद कर किसी पर भरोसा मत करोʼ ಎಂಬ ಶೀರ್ಷಿಕೆಯೊಂದಿಗೆ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿ ಲಭ್ಯವಾಗಿದೆ. ಇದನ್ನು ಬೇರೆ ಆಯಾಮದಿಂದ ಚಿತ್ರೀಕರಿಸಲಾಗಿದೆ. ಈ ವಿಡಿಯೋದ 2ನೇ ಸೆಕೆಂಡ್ನಲ್ಲಿ, ನಾವು ಡಿಸ್ಕ್ಲೈಮರ್ನ್ನು ನೋಡಬಹುದು “ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ಪ್ರಸ್ತುತಪಡಿಸಿದ್ದಾರೆ. ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ನಿರ್ಮಿಸಿದ್ದಾರೆ. ಈ ವಿಡಿಯೋ ಕಾಲ್ಪನಿಕವಾಗಿದ್ದು, ಈ ವೀಡಿಯೊ ಮೂಲಕ ಯಾವುದೇ ರೀತಿಯಲ್ಲಿ ಯಾವುದೇ ಸಮುದಾಯ, ಅಥವಾ ಯಾರನ್ನೂ ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ. ಈ ವಿಡಿಯೋ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ” ಎಂದು ಬರೆದಿರುವುದನ್ನು ನೋಡಬಹುದು
ಇದೇ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿಯನ್ನು ನಾವು ಮಾಂಟಿ ದೀಪಕ್ ಶರ್ಮ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ನೋಡಬಹುದು. ಮಾಂಟಿ ದೀಪಕ್ ಶರ್ಮಾ ತನ್ನನ್ನು ತಾನು ಡಿಜಿಟಲ್ ಕ್ರಿಯೇಟರ್ ಎಂದು ಕರೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಹಲವು ವಿಡಿಯೋಗಳಲ್ಲಿ ಕೂಡ ಆತ ನಟಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಪೂರ್ವ ನಿಯೋಜಿತವಾದ ವಿಡಿಯೋವಾಗಿದೆ. ಹಾಗಾಗಿ ವೈರಲ್ ಪೋಸ್ಟ್ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಸಲೀಂ ಎಂಬ ವ್ಯಕ್ತಿ ಹಿಂದೂ ವ್ಯಕ್ತಿಯಂತೆ ನಟಿಸಿ ಹಿಂದೂ ಯುವತಿಯನ್ನು ಪ್ರೀತಿಸಿ, ಬಳಿಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ ಎಂಬ ಹೇಳಿಕೆ ಸುಳ್ಳು ಸೃಷ್ಠಿಯಾಗಿದೆ ಎಂಬುದು ಸ್ಪಷ್ಟವಾಗಿದೆ.
ಅಷ್ಟೇ ಅಲ್ಲ ವೈರಲ್ ವೀಡಿಯೊದಲ್ಲಿ ಬಿಳಿ ಶರ್ಟ್ ಧರಿಸಿರುವ ಅದೇ ವ್ಯಕ್ತಿ ಹಲವಾರು ಇತರ ವೀಡಿಯೊಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವುದನ್ನು ನಾವು ಗಮನಿಸಿದ್ದೇವೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ವೈರಲ್ ವಿಡಿಯೋ ಕಿರುಚಿತ್ರಕ್ಕೆ ಸಂಬಂಧಿಸಿದ್ದಾಗಿದೆ.

