ಪ್ರಾಣಿಗಳ ಸಂಚಾರಕ್ಕಾಗಿ ಸಿಂಗಾಪುರದಲ್ಲಿ ಎಕ್ಸ್ಪ್ರೆಸ್ವೇಯಲ್ಲಿ ನಿರ್ಮಿಸಲಾದ ಸೇತುವೆಯನ್ನು ಭಾರತದ್ದು ಎಂದು ಹಂಚಿಕೆ
ಪ್ರಾಣಿಗಳ ಸಂಚಾರಕ್ಕಾಗಿ ಸಿಂಗಾಪುರದಲ್ಲಿ ಎಕ್ಸ್ಪ್ರೆಸ್ವೇಯಲ್ಲಿ ನಿರ್ಮಿಸಲಾದ ಸೇತುವೆಯನ್ನು ಭಾರತದ್ದು ಎಂದು ಹಂಚಿಕೆ

Claim :
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಪ್ರಾಣಿಗಳ ಸಂಚಾರಕ್ಕಾಗಿ ಸೇತುವೆಯನ್ನು ನಿರ್ಮಿಸಲಾಗಿದೆ.Fact :
ಸಿಂಗಾಪುರದಲ್ಲಿ ನಿರ್ಮಿಸಲಾದ ಸೇತುವೆಯನ್ನು ಭಾರತದ್ದು ಎಂದು ಹಂಚಿಕೆ.
ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪದ ಅತಿರೇಕಗಳು ದಿನೇ ದಿನೇ ಹೆಚ್ಚುತ್ತಿವೆ. ಮಾನವ ಸೃಷ್ಟಿಸಿರುವ ಹಸ್ತಕ್ಷೇಪಗಳಿಂದ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಬಹು ದೊಡ್ಡ ಸಂಘರ್ಷ ಏರ್ಪಡುತ್ತಲೇ ಇದೆ. ಕಾಡಿನ ನಾಶ ಹಾಗೂ ಕಾಡಿನಲ್ಲಿ ರಸ್ತೆ ನಿರ್ಮಾಣದ ನಂತರವೇ ಬಹುತೇಕ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡಿರುವುದನ್ನು ಗಮನಿಸಬಹುದು. ವನ್ಯಜೀವಿಗಳು ಆಹಾರವನ್ನರಸಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವಾಗ ಪ್ರಯಾಣಿಕರ ವಾಹನಗಳಿಗೆ ಅಪಘಾತದಲ್ಲಿ ಸಿಕ್ಕ್ಕಿ ಸಾಯುತ್ತಿವೆ.
ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ, ಇದರಲ್ಲಿ ರಸ್ತೆಯ ಮಧ್ಯೆ ಮೇಲ್ಸೇತುವೆಯನ್ನು ಕಾಣಬಹುದು. ಈ ಮೇಲ್ಸೇತುವೆ ಹುಲ್ಲು ಮತ್ತು ಮರಗಳಿಂದ ಆವೃತವಾಗಿದೆ. ಈ ಫೋಟೋವನ್ನು ಹಂಚಿಕೊಂಡ ಸಾಮಾಜಿಕ ಬಳಕೆದಾರರು, ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಪ್ರಾಣಿಗಳ ಚಲನೆಗಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.
ಜುಲೈ 03, 2025ರಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು,‘‘ನಮ್ಮ ದೇಶ ಬದಲಾಗುತ್ತಿದೆ.. ಭಾರತದ ಮೊದಲ ಪ್ರಾಣಿ ಸೇತುವೆ ಅನ್ನು ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳು ಡಿಕ್ಕಿ ಹೊಡೆಯದಂತೆ ರಕ್ಷಿಸಲು ಇದನ್ನು ನಿರ್ಮಿಸಲಾಗಿದೆ’’ ಎಂದು ಬರೆದುಕೊಂಡಿದ್ದಾರೆ
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 29, 2025ರಂದು ಇನ್ನೊಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼಭಾರತವು ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಮೊಟ್ಟಮೊದಲ ಪ್ರಾಣಿ ಮೇಲ್ಸ್ತುವೆ ಕಾರಿಡಾರ್ ಅನ್ನು ನಿರ್ಮಿಸಿದೆ - ವನ್ಯಜೀವಿಗಳು ಸುರಕ್ಷಿತವಾಗಿ ದಾಟಲು ಮತ್ತು ಅಪಘಾತದಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 01, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಭಾರತವು ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ತನ್ನ ಮೊದಲ ಪ್ರಾಣಿ ಮೇಲ್ಲೇತುವೆಯನ್ನು ನಿರ್ಮಿಸಿ ವನ್ಯಜೀವಿ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆ ಹಾಕಿದೆ! ಈ ಮೇಲ್ವೇತುವೆ ವನ್ಯಜೀವಿಗಳಿಗೆ ಸುರಕ್ಷಿತವಾಗಿ ರಸ್ತೆಯನ್ನು ದಾಟಲು ಅವಕಾಶ ನೀಡುತ್ತದೆ ಹಾಗೂ ವಾಹನಗಳ ಘರ್ಷಣೆಯಿಂದ ಜೈವಿಕ ಜೀವಿತ ಹಾನಿಯನ್ನು ತಪ್ಪಿಸುತ್ತದೆ. ಅಭಿವೃದ್ಧಿ ಜೊತೆಗೆ ಪ್ರಾಕೃತಿಕ ದಯೆಯ ಸಂಯೋಜನೆ – ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಪ್ಲಾನಿಂಗ್ಗೆ ಭಾರತೀಯ ಉದಾಹರಣೆ!ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 30, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡು,‘‘ನಮ್ಮ ದೇಶ ಬದಲಾಗುತ್ತಿದೆ.. ಭಾರತದ ಮೊದಲ ಪ್ರಾಣಿ ಸೇತುವೆ ಅನ್ನು ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳು ಡಿಕ್ಕಿ ಹೊಡೆಯದಂತೆ ರಕ್ಷಿಸಲು ಇದನ್ನು ನಿರ್ಮಿಸಲಾಗಿದೆ’’ ಎಂದು ಬರೆದುಕೊಂಡಿದ್ದಾರೆ
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಫೊಟೋ ಭಾರತದ್ದಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಈ ಸೇತುವೆಯನ್ನು ಸಿಂಗಾಪುರದಲ್ಲಿ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ನಾವು ವೈರಲ್ ಆದ ಪೊಸ್ಟ್ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಫೋಟೋವನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾರ್ಚ್ 9, 2017ರಂದು ಚೀನದ static.nfapp.southcn ಎಂಬ ವೆಬ್ಸೈಟ್ನಲ್ಲಿ ವನ್ಯಪ್ರಾಣಿಗಳ ಕ್ರಾಸಿಂಗ್ ಪ್ರದೇಶದ ಕುರಿತು ವರದಿಯೊಂದು ಉಲ್ಲೇಖಿಸಲಾಗಿತ್ತು. ವರದಿಯಲ್ಲಿ “ವನ್ಯಜೀವಿ ದಾಟುವಿಕೆಯು ಸಿಂಗಾಪುರದ ಆರು ಪಥಗಳ ರಸ್ತೆಯ ಮೇಲೆ ಇದೆ ಮತ್ತು ಮರಗಳು ಮತ್ತು ಪೊದೆಗಳಿಂದ ಕೂಡಿದೆ.” ಎಂಬ ವಿವರಣೆಯೊಂದಿಗೆ ವೈರಲ್ ಫೋಟೋವನ್ನು ಹೋಲುವ ವನ್ಯಪ್ರಾಣಿಗಳ ಸೇತುವೆಯನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ನ್ಯಾಷನಲ್ ಪಾರ್ಕ್ ವೆಬ್ಸೈಟ್ನಲ್ಲಿ ʼಬುಕಿಟ್ ತಿಮಾ ಎಕ್ಸ್ಪ್ರೆಸ್ವೇ ಮೇಲಿರುವುದು ಪರಿಸರ ಸೇತುವೆಯಾಗಿದೆ. ಇದು ಪ್ರಾಣಿಗಳು ಬುಕಿಟ್ ತಿಮಾ ನೇಚರ್ ರಿಸರ್ವ್ ಮತ್ತು ಸೆಂಟ್ರಲ್ ಕ್ಯಾಚ್ಮೆಂಟ್ ನೇಚರ್ ರಿಸರ್ವ್ ನಡುವೆ ಸುರಕ್ಷಿತವಾಗಿ ದಾಟಲು ಅನುವು ಮಾಡಿಕೊಡುತ್ತದೆ, ಇದು ವನ್ಯಜೀವಿಗಳು ತಮ್ಮ ಆವಾಸ ಸ್ಥಾನ ವಿಸ್ತರಿಸಲು ಮತ್ತು ಅವುಗಳ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. 1986 ರಲ್ಲಿ BKE ಅನ್ನು ನಿರ್ಮಿಸುವ ಮೊದಲು 2 ಪ್ರಕೃತಿ ಮೀಸಲುಗಳನ್ನು ಸಂಪರ್ಕಿಸಲಾಗುತ್ತಿತ್ತು
ಜುಲೈ 26,2025ರಂದು ನ್ಯೂಸ್.ಮೊಂಗಾಬೇ ಎಂಬ ವೆಬ್ಸೈಟ್ನಲ್ಲಿ ʼHow effective are wildlife corridors like Singapore’s Eco-Link?ʼ ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಸಿಂಗಾಪುರದ Eco-Link@BKE ಬಗ್ಗೆ ಚರ್ಚಿಸಲಾಗಿದೆ, ಇದು ಜನನಿಬಿಡ ಎಕ್ಸ್ಪ್ರೆಸ್ವೇಯಲ್ಲಿ ಛಿದ್ರಗೊಂಡ ಆವಾಸಸ್ಥಾನಗಳನ್ನು ಮರುಸಂಪರ್ಕಿಸಲು 2012ರಲ್ಲಿ ನಿರ್ಮಿಸಲಾದ ವನ್ಯಜೀವಿ ಕಾರಿಡಾರ್.ಎಂದು ಬರೆಯಲಾಗಿದೆ
ಈ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಹುಡುಕಿದಾಗ, ದಿ ಡ್ರೈವ್ ಮತ್ತು ಟುಡೇಆನ್ಲೈನ್ ಪ್ರಕಟಿಸಿದ ಮಾಧ್ಯಮ ವರದಿಗಳು ನಮಗೆ ಕಂಡುಬಂದವು. ಈ ಎರಡೂ ವರದಿಗಳ ಪ್ರಕಾರ, ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದಾಗಿ ಅನೇಕ ಪ್ರಾಣಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ, ಈ ಸೇತುವೆಯನ್ನು ಸಿಂಗಾಪುರದಲ್ಲಿ ಪ್ರಾಣಿಗಳು ರಸ್ತೆ ದಾಟಲು ನಿರ್ಮಿಸಲಾಗಿದೆ. ಇದನ್ನು 2011 ಮತ್ತು 2013 ರ ನಡುವೆ ನಿರ್ಮಿಸಲಾಯಿತು ಎಂದು ಬರೆಯಲಾಗಿದೆ. ಈ ಎರಡು ಸುದ್ದಿಗಳಲ್ಲಿ ವೈರಲ್ ಫೋಟೋಕ್ಕೆ ಹೋಲಿಕೆಯಾಗುವ ಮತ್ತೊಂದು ಆ್ಯಂಗಲ್ನ ಫೋಟೋ ಕಾಣಬಹುದು.
ಎಟಿಐ ಎಂಬ ವೆಬ್ಸೈಟ್ನಲ್ಲಿ ʼThis tree-covered pass is in Singaporeʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಅಕ್ಟೋಬರ್ 8, 2017 ರಂದು LET ME KNOW ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ʼThe Animals Bridges Across The Worldʼ ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಲಾದ ವಿಡಿಯೋ ನಮಗೆ ಕಾಣಿಸಿತು. ಇದರಲ್ಲಿ ಅದೇ ವೈರಲ್ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ವೀಡಿಯೊದ ವಿವರಣೆಯು ಸಿಂಗಾಪುರದಲ್ಲಿ ಪ್ರಾಣಿಗಳು ಸುಲಭವಾಗಿ ರಸ್ತೆ ದಾಟಲು ಪ್ರಾಣಿ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತದೆ.
ಜೂನ್ 24, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ʼಸಿಂಗಾಪುರವು ವನ್ಯಜೀವಿಗಳಿಗಾಗಿ ವಿನ್ಯಾಸಗೊಳಿಸಲಾದ "ಹಸಿರು ಸೇತುವೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿ ʼಈ ರೀತಿಯ ರಸ್ತೆಯಿಂದ ಯಾರಿಗೂ ತೊಂದರೆ ಇಲ್ಲ. ಪ್ರಾಣಿಗಳಿಗೆ ನಮ್ಮ ಕಾಟವೂ ಇಲ್ಲ ನಮಗೆ ಪ್ರಾಣಿಗಳ ಕಾಟವು ಇಲ್ಲ. ಸಿಂಗಾಪುರವು ವನ್ಯಜೀವಿಗಳಿಗಾಗಿ ವಿನ್ಯಾಸಗೊಳಿಸಲಾದ "ಹಸಿರು ಸೇತುವೆಗಳನ್ನು" ಹೊಂದಿದೆ.ಬುಕಿಟ್ ಟಿಮಾ ಎಕ್ಸ್ ಪ್ರೆಸ್ವೇಯ ಮೇಲೆ 75 ಮೀಟರ್ ಉದ್ದದ ಸೇತುವೆಯಾಗಿದ್ದು, ಬುಕಿಟ್ ಟಿಮಾ ಮತ್ತು ಸೆಂಟ್ರಲ್ ಕ್ಯಾಚ್ಮೆಂಟ್ ನೇಚರ್ ರಿಸರ್ವಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆಗಳನ್ನು ಪ್ರಾಣಿಗಳಿಗೆ ಸುರಕ್ಷಿತ ಮಾರ್ಗವನ್ನು ಸುಗಮಗೊಳಿಸಲು, ಜೀವವೈವಿಧ್ಯತೆಯನ್ನು ಉತ್ತೇಜಿಸಲು ಮತ್ತು ರಸ್ತೆ ಹತ್ಯೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ.
ಜುಲೈ 2, 2025ರಂದು ಕನ್ನಡ ಏಷ್ಯಾನೆಟ್ ವೆಬ್ಸೈಟ್ನಲ್ಲಿ ʼದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ದೇಶದ ಮೊದಲ ವನ್ಯಜೀವಿ ಮೇಲ್ಸೇತುವೆ ಕಾರಿಡಾರ್ !ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯ ಪ್ರಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶದ ಮೊದಲ ವನ್ಯಜೀವಿ ಮೇಲ್ಸೇತುವೆ ಕಾರಿಡಾರ್ ಅನ್ನು ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ. ಸುಮಾರು 12 ಕಿಲೋಮೀಟರ್ ವಿಭಾಗವು ರಣಥಂಬೋರ್ ಟೈಗರ್ ರಿಸರ್ವ್ನ ಬಫರ್ ವಲಯದ ಮೂಲಕ ಹಾದುಹೋಗುತ್ತದೆ. ಅಂತೆಯೆ ಜಿರಾಕ್ಪುರ ಬೈಪಾಸ್ ಯೋಜನೆಯ ಭಾಗವಾಗಿ ಪಂಜಾಬ್ ಕೂಡ ತನ್ನ ಮೊದಲ ನಗರ ವನ್ಯಜೀವಿ ಕಾರಿಡಾರ್ ಅನ್ನು ನಿರ್ಮಿಸಲು ಯೋಜಿಸಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಮಾನವ ಸಂಚಾರಕ್ಕೆ ಮಾತ್ರವಲ್ಲದೆ, ಕಾಡು ಪ್ರಾಣಿಗಳ ಆವಾಸಸ್ಥಾನ ಮತ್ತು ಜೀವಗಳನ್ನು ರಕ್ಷಿಸಲು ಎಕ್ಸ್ಪ್ರೆಸ್ವೇಯನ್ನು ಯೋಜಿಸಲಾಗಿದೆʼ ಎಂದು ವರದಿ ಮಾಡಿರುವುದನ್ನು ನೋಡಬಹದು.
ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಫೊಟೋ ಭಾರತದ್ದಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಈ ಸೇತುವೆಯನ್ನು ಸಿಂಗಾಪುರದಲ್ಲಿ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

