ಫ್ಯಾಕ್ಟ್‌ಚೆಕ್: ಭರೂಚ್‌ನ ರಾಸಾಯನಿಕ ಕಂಪನಿಯಲ್ಲಿ ಸಂಭವಿಸಿದ ಬೆಂಕಿ ಅಪಘಾತದ ದೃಶ್ಯವನ್ನು ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿದ್ದು ಎಂದು ಹಂಚಿಕೆ
ಭರೂಚ್‌ನ ರಾಸಾಯನಿಕ ಕಂಪನಿಯಲ್ಲಿ ಸಂಭವಿಸಿದ ಬೆಂಕಿ ಅಪಘಾತದ ದೃಶ್ಯವನ್ನು ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿದ್ದು ಎಂದು ಹಂಚಿಕೆ
ಕಳೆದ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಏರ್ ಇಂಡಿಯಾದ B787 ವಿಮಾನ, ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಅಂದರೆ ಐದು ನಿಮಿಷಗಳೊಳಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಮೇಘಾನಿ ನಗರ ಜನವಸತಿ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನವು ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತು. ಈ ಅಪಘಾತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿ 242 ಜನರಿದ್ದರು, ಅವರಲ್ಲಿ 241 ಜನರು ಸಾವನ್ನಪ್ಪಿದರು. ಅಪಘಾತಕ್ಕೆ ಸಂಬಂಧಿಸಿದ ಕೆಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಇದು ಅಹಮದಾಬಾದ್ ವಿಮಾನ ಅಪಘಾತದ ದೃಶ್ಯ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ.
ಜೂನ್ 12, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼअहमदाबाद प्लेन हादसे में मारे गए लोग तथा यह जिस हॉस्टल पर गिरा उसमें मारे गए डॉक्टर. Ahmedabad se London jaane wali plane Hui crash se upar log Mar Gayeʼ ಎಂಬ ಶೀರ್ಷಿಕೆಯೊಂದಿಗೆ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ದೃಶ್ಯದೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕಟ ಅನುವಾದಿಸಿದಾಗ ʼಅಹಮದಾಬಾದ್ ವಿಮಾನ ಅಪಘಾತದಲ್ಲಿ 242 ಜನರು ಸಾವನ್ನಪ್ಪಿದ್ದಾರೆ ಮತ್ತು ಹಾಸ್ಟೆಲ್ ಕಟ್ಟಡದಲ್ಲಿ 20 ವೈದ್ಯರು ಸಾವನ್ನಪ್ಪಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 14, 2025ರಂದು ಮತ್ತೊಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. (ಆರ್ಕೈವ್)
ಈ ದೃಶ್ಯವನ್ನು ಹಂಚಿಕೊಂಡ ಹಲವರು ವಿಮಾನ ಅಪಘಾತಕ್ಕೆ ಅದರ ಸುತ್ತಮುತ್ತಲಿನ ಹಲವು ಬೃಹತ್ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ ಎಂದು ಬರೆದುಕೊಳ್ಳುತ್ತಿದ್ದಾರೆ. ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿದ ಸಾಕಷ್ಟು ಮಂದಿ ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆದ ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಗುಜರಾತ್‌ನ ಭರೂಚ್‌ನ ಅಂಕಲೇಶ್ವರದಲ್ಲಿರುವ ಜಲ್ ಅಕ್ವಾ ಮತ್ತು ಬಿಆರ್ ಆಗ್ರೋ ಎಂಬ ರಾಸಾಯನಿಕ ಕಂಪನಿಯಲ್ಲಿ ಏಪ್ರಿಲ್ 14, 2025 ರಂದು ಸಂಭವಿಸಿದ ಬೆಂಕಿಯನ್ನು ತೋರಿಸುತ್ತದೆ
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಏಪ್ರಿಲ್ 14, 2025ರಂದು ಎಬಿಸಿ ನ್ಯೂಸ್ 24×7 ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದು ನಮಗೆ ಕಾಣಿಸಿತು. ವಿಡಿಯೋವಿಗೆ ಶೀರ್ಷಿಕೆಯಾಗಿ ʼगुजरात के भरूच की कंपनी में लगी भीषण आग,धुएं से काला हुआ आसमान.ʼ ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ವಿಡಿಯೋ ಗುಜರಾತ್‌ನ ಭರೂಚ್‌ನಲ್ಲಿರುವ ಕಂಪನಿಯೊಂದರಲ್ಲಿಗುಜರಾತ್‌ನ ಭರೂಚ್‌ನಲ್ಲಿರುವ ಕಂಪನಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದೆʼ ಎಂಬ ಮಾಹಿತಿಯನ್ನು ನಾವಿಲ್ಲಿ ನೋಡಬಹುದು.
ಏಪ್ರಿಲ್ 14, 2025ರಂದು ಈ ವೀಡಿಯೊವನ್ನು ʼಅವರ್ ಗುಜರಾತ್‌ನ್ಯೂಸ್ʼ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ʼઅંકલેશ્વરના પાનોલીની જલએક્વા અને બીઆર એગ્રો નામની કંપનીમાં પ્રચંડ ધડાકા સાથે આગ. આગે જોતજોતામાં વિકરાળ સ્વરૂપ ધારણ કર્યું અને સમગ્ર પ્લાન્ટ આગની ચપેટમાં આવી. આગની ઘટનાની જાણ થતા પાનોલી ડીપીએમસીના ફાયર ફાઈટરો ઘટના સ્થળે પહોંચ્યાʼ ಎಂದು ಗುಜರಾತಿಯಲ್ಲಿ ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಪನೋಲಿಯ ಅಂಕಲೇಶ್ವರದಲ್ಲಿರುವ ಜಲ ಅಕ್ವಾ ಮತ್ತು ಬಿಆರ್ ಆಗ್ರೋ ಎಂಬ ಕಂಪನಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಭೀಕರ ರೂಪವನ್ನು ಪಡೆದುಕೊಂಡಿತು ಮತ್ತು ಇಡೀ ಸ್ಥಾವರಕ್ಕೆ ಬೆಂಕಿ ಹೊತ್ತಿಕೊಂಡಿತು” ಎಂದು ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್‌ನಲ್ಲಿ ವಿವಿಧ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಏಪ್ರಿಲ್ 14, 2025ರಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ವೆಬ್‌ಸೈಟ್‌ನಲ್ಲಿ ʼGujarat: One killed as fire breaks out at Jal Aqua Company unit in Bharuchʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಭರೂಚ್‌ನಲ್ಲಿರುವ ಜಲ್ ಅಕ್ವಾ ಕಂಪನಿಯಲ್ಲಿ ಸಂಭವಿಸಿದ ದೊಡ್ಡ ಬೆಂಕಿ ಅವಘಡದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬೆಂಕಿಯು ನೆರೆಯ ಬಿಆರ್ ಆಗ್ರೋ ಘಟಕಕ್ಕೂ ಹರಡಿತು. ಎರಡೂ ಕಂಪನಿಗಳು ಬೆಂಕಿಯಿಂದ ಹಾನಿಗೊಳಗಾದವು. ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಏಪ್ರಿಲ್ 14, 2025ರಂದು ಎಎನ್‌ಐ ವೆಬ್‌ಸೈಟ್‌ನಲ್ಲಿ ʼಗುಜರಾತ್: ಭರೂಚ್‌ನ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಭಾರಿ ಬೆಂಕಿ ಅವಘಡ, ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆʼ ಎಂಬ ಹೆಡ್‌ಲೈನ್‌ನೊಂಡಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼ: ಭರೂಚ್‌ನಲ್ಲಿರುವ ರಾಸಾಯನಿಕ ಉತ್ಪಾದನಾ ಘಟಕದ ಆವರಣದಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿದ್ದು, ಜಲ ಅಕ್ಷಾ ಕಂಪನಿಯಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆʼ ಎಂದು ವರದಿಯಾಗಿರುವುದನ್ನು ನಾವಿಲ್ಲಿ ನೋಡಬಹುದು.
ಇದೇ ಘಟನೆಯನ್ನು ಒಳಗೊಂಡ ಹಲವಾರು ಮಾಧ್ಯಮ ವರದಿಗಳನ್ನು ನಾವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆಗಿರುವ ಈ ವೀಡಿಯೊ 2025ರ ಜೂನ್ 12ರಂದು ನಡೆದ ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿದಲ್ಲ. ಇದು ಗುಜರಾತ್‌ನ ಭರೂಚ್‌ನ ಅಂಕಲೇಶ್ವರದಲ್ಲಿರುವ ಜಲ್ ಅಕ್ವಾ ಮತ್ತು ಬಿಆರ್ ಆಗ್ರೋ ಎಂಬ ರಾಸಾಯನಿಕ ಕಂಪನಿಯಲ್ಲಿ ಏಪ್ರಿಲ್ 14, 2025ರಂದು ಸಂಭವಿಸಿದ ಬೆಂಕಿಯನ್ನು ತೋರಿಸುತ್ತದೆ. ಈ ವೀಡಿಯೊ ವಿಮಾನ ಅಪಘಾತಕ್ಕೂ ಹಿಂದಿನದು.